ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಕರ್‌ ಜೈಲಿಗೆ ಊಟ ತರಲಿ: ಶಾಸಕ ರಮೇಶ್‌ಕುಮಾರ್‌ ತಿರುಗೇಟು

Last Updated 3 ಆಗಸ್ಟ್ 2020, 14:52 IST
ಅಕ್ಷರ ಗಾತ್ರ

ಕೋಲಾರ: ‘ನಾನು ಆರೋಗ್ಯ ಸಚಿವನಾಗಿದ್ದಾಗ ಸಾಕಷ್ಟು ಅಕ್ರಮ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಆರೋಪಿಸಿದ್ದಾರೆ. ಆಗ ಸುಧಾಕರ್‌ ಹೆಸರು ನನಗೆ ಗೊತ್ತಿದ್ದರೆ ಆತನಿಗೂ ಅಕ್ರಮದಲ್ಲಿ ಪಾಲು ಕೊಡುತ್ತಿದ್ದೆ’ ಎಂದು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ತಿರುಗೇಟು ನೀಡಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾವೇ ಸಾಕಿದ್ದ ಗಿಣಿ ಈಗ ನಮ್ಮನ್ನೇ ಕಚ್ಚಲು ಬರುತ್ತಿದೆ. ನಾನು ಆರೋಗ್ಯ ಸಚಿವನಾಗಿದ್ದಾಗ ಏನು ಅಕ್ರಮ ಮಾಡಿದ್ದೇನೆ ಎಂಬ ಬಗ್ಗೆ ಸುಧಾಕರ್‌ ತನಿಖೆ ಮಾಡಿಸಲಿ. ಅದಕ್ಕೆ ಅಭ್ಯಂತರವಿಲ್ಲ. ಅಕ್ರಮ ಸಾಬೀತಾದರೆ ನಾನೇ ಜೈಲಿಗೆ ಹೋಗಿ ಕುಳಿತುಕೊಳ್ಳುತ್ತೇನೆ. ಸುಧಾಕರ್‌ ಜೈಲಿಗೆ ಊಟ, -ಪುಸ್ತಕ ತಂದುಕೊಟ್ಟರೆ ಸಾಕು’ ಎಂದು ಕುಟುಕಿದರು.

‘ಜಿಲ್ಲಾಡಳಿತದಲ್ಲಿ ಸಮನ್ವಯ ಇಲ್ಲದಿದ್ದರೆ ನಾವೇನು ಮಾಡಲಿ? ಜಿಲ್ಲಾಡಳಿತದ ವೈಫಲ್ಯಗಳ ಬಗ್ಗೆ ಮಾತನಾಡುವುದರಲ್ಲಿ ಎಡವಿದ್ದೇವೆ. ಕೊರೊನಾ ಸಂಕಷ್ಟದಲ್ಲಿ ನಾವು ಜಿಲ್ಲಾಡಳಿತ, ಸರ್ಕಾರದ ವಿರುದ್ಧ ಹೇಳಿಕೆ ಕೊಡುತ್ತಿದ್ದರೆ ಜನ ಅಪಾರ್ಥ ಮಾಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಮೌನವಾಗಿದ್ದೇವೆ’ ಎಂದರು.

‘ಕೋವಿಡ್‌ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹೇಗೆ ನಡೆದುಕೊಳ್ಳುತ್ತಿದೆ. ಸೋಂಕಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸಾಮಾನ್ಯ ರೋಗಿಗಳಿಗೂ ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆಯಿಲ್ಲ. ಜನ ಸಾಯುವ ಸಂದರ್ಭದಲ್ಲಿ ಸರ್ಕಾರ ಅವರಿಗೆ ಔಷಧ ಮಾತ್ರೆ ಕೊಡುತ್ತಿಲ್ಲ. ಇದು ನೀಚ ಕೆಲಸ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜನರ ಪಾಡೇನು?’ ಎಂದು ಪ್ರಶ್ನಿಸಿದರು.

ಅವತಾರ ಪುರುಷರು: ‘ನಾವು ಕಾಂಗ್ರೆಸ್‌ನವರು ಅವಿವೇಕಿಗಳು. ನಮಗೆ ಕನಿಷ್ಠ ಜ್ಞಾನವಿಲ್ಲ. ಬಿಜೆಪಿಯವರು ಭಾರತ ಮಾತೆಯ ಸೆರಗು ಹಿಡಿದು ಆಕೆಯ ಮಾನ ಕಾಪಾಡುವುದಕ್ಕೆ ಅವತಾರ ಎತ್ತಿರುವ ಅವತಾರ ಪುರುಷರು. ಭಾರತ ಮಣ್ಣಿನ ಪವಿತ್ರತೆ, ಹಿಮಾಲಯದ ಬೆಟ್ಟ, ಗಂಗಾ ಜಲ, ಸಂಸ್ಕೃತಿ ಹಾಗೂ ಧರ್ಮ ಕಾಪಾಡುವುದಕ್ಕೆ ಅವತಾರ ಎತ್ತಿರುವ ಮಹಾ ಪುರುಷರು’ ಎಂದು ಲೇವಡಿ ಮಾಡಿದರು.

‘ಕಾಂಗ್ರೆಸ್‌ನವರು ಹುಟ್ಟಿದ್ದೇ ಹೊಲಸಿನಲ್ಲಿ. ನಮಗೆ ಹೊಲಸೆ ಊಟ, ಹೊಲಸಿನಲ್ಲೇ ನಮ್ಮ ಬದುಕು. ದೇಶಕ್ಕಾಗಿ ನಾವೇನೂ ಮಾಡಿಲ್ಲ. ಋಷಿ ಮುನಿಗಳಿಂದ ಜನ್ಮ ಪಡೆದ ಬಿಜೆಪಿಯವರು ಎಲ್ಲಿಗೆ ಹೋಗಿದ್ದಾರೆ? ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯವರು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳ ಬಗ್ಗೆ ಹೈಕೋರ್ಟ್‌ ನ್ಯಾಯಾಧೀಶರಿಂದ ತನಿಖೆ ಮಾಡಿಸಿ ಸತ್ಯಾಂಶ ಬಯಲಿಗೆಳೆದು ಜನರ ಮುಂದಿಡಲಿ. ನಾವು ಮಾಡಿರುವ ಆರೋಪ ಸುಳ್ಳಾದರೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತೇವೆ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT