ಭಾನುವಾರ, ಏಪ್ರಿಲ್ 11, 2021
33 °C
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್‌ ಹೇಳಿಕೆ

ಬದುಕಿನ ಕಷ್ಟಕ್ಕೆ ಆತ್ಮಹತ್ಯೆ ಪರಿಹಾರವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜೀವನದಲ್ಲಿ ಕಹಿ ಘಟನೆಗಳು ಸಹಜ. ಆದರೆ, ಬದುಕಿನ ಕಷ್ಟಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಂತೋಷ್ ಗಜಾನನಭಟ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾಎ ಪ್ರಾಧಿಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಪ್ರಪಂಚದಲ್ಲಿ ಆತ್ಮಹತ್ಯೆಯು ಸಾಂಕ್ರಾಮಿಕ ರೋಗದಂತೆ ಬೆಳೆಯುತ್ತಿದೆ. ಭಾರತದಲ್ಲಿ ಪ್ರತಿನಿತ್ಯ ಸುಮಾರು 3 ಸಾವಿರ ಮಂದಿ ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಜನರು ಯಾಂತ್ರಿಕವಾಗಿ ಬದುಕು ಸಾಗಿಸುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ಜನರ ನಡುವೆ ಬಾಂಧವ್ಯ ಇಲ್ಲವಾಗಿದೆ. ಈ ಎಲ್ಲಾ ಕಾರಣದಿಂದ ಆತ್ಮಹತ್ಯೆ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮನುಷ್ಯ ಹುಟ್ಟಿನಿಂದ ಸಾವಿನವರೆಗೆ ಒತ್ತಡದ ಜೀವನ ಸಾಗಿಸುತ್ತಿದ್ದಾನೆ. ಬದುಕಿನ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕೇ ಹೊರತು ಆತ್ಮಹತ್ಯೆ ಮಾಡಿಕೊಳ್ಳಬಾರದು. ಮಾನಸಿಕ ಸದೃಢತೆ ಹೆಚ್ಚಿಸಿಕೊಂಡು ಸಮಸ್ಯೆ ಎದುರಿಸಿ ನಿಲ್ಲುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಒತ್ತಡ ಸಹಜ: ‘ಎಲ್ಲಾ ಕ್ಷೇತ್ರದಲ್ಲೂ ದೈಹಿಕ ಹಾಗೂ ಮಾನಸಿಕ ಒತ್ತಡ ಸಹಜ. ಒತ್ತಡಕ್ಕೆ ಬೇಸರಗೊಂಡು ಆತ್ಮಹತ್ಯೆ ಮೂಲಕ ಜೀವನ ಅಂತ್ಯಗೊಳಿಸಿಕೊಳ್ಳುವುದು ಸರಿಯಲ್ಲ. ಆತ್ಮಹತ್ಯೆಯ ಮನಸ್ಥಿತಿ ಬಂದಾಗ ಸ್ನೇಹಿತರೊಂದಿಗೆ ಅಥವಾ ಕುಟುಂಬ ಸದಸ್ಯರೊಂದಿಗೆ ನೋವು ಹಂಚಿಕೊಳ್ಳಬೇಕು. ಆತ್ಮಹತ್ಯೆ ತಡೆಗೆ ಸಹಾಯವಾಣಿಯಿದ್ದು, 104ಕ್ಕೆ ಕರೆ ಮಾಡಿ ಸಮಾಲೋಚನೆಯ ನೆರವು ಪಡೆಯಬಹುದು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ ನೀಡಿದರು.

‘ಆತ್ಮಹತ್ಯೆಗೆ ನೂರಾರು ಕಾರಣ ಇರಬಹುದು. ಆ ಕ್ಷಣವನ್ನು ಸಮರ್ಥವಾಗಿ ನಿಭಾಯಿಸಿದರೆ ಭವಿಷ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಮುಂದೆ ಆತ್ಮಹತ್ಯೆ ಬಗ್ಗೆ ಯೋಚನೆಯೇ ಬರುವುದಿಲ್ಲ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್, ಜಿಲ್ಲಾ ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್‌ ಮೋಹನ್‌ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಜಯರಾಮ್, ಪ್ರಧಾನ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ಮನೋ ವೈದ್ಯರಾದ ಡಾ.ಪಾವನಾ, ಡಾ.ಶಿಲ್ಪಶ್ರೀ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.