ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ವೃದ್ಧಿಗೆ ಪ್ರವಾಸ ಪೂರಕ :ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್

Last Updated 23 ಜನವರಿ 2020, 16:02 IST
ಅಕ್ಷರ ಗಾತ್ರ

ಕೋಲಾರ: ‘ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುತ್ತದೆ’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ತಿಳಿಸಿದರು.

ನಗರದಿಂದ ಕರ್ನಾಟಕ ದರ್ಶನ ಪ್ರವಾಸಕ್ಕೆ ತೆರಳಿದ ಬಸ್‌ಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ‘ಕೋಶ ಓದಿ, ದೇಶ ಸುತ್ತಿವುದರಿಂದ ಮಕ್ಕಳ ಮನಸ್ಸಿನಲ್ಲಿ ವಿಚಾರಗಳು ಶಾಶ್ವತವಾಗಿ ಉಳಿಯುತ್ತದೆ. ಭೇಟಿ ನೀಡುವ ಸ್ಥಳಗಳ ಮಾಹಿತಿಯ ಬಗ್ಗೆ ಬೇರೆಯವರಿಗೆ ತಿಳಿಸಬೇಕು’ ಎಂದು ಹೇಳಿದರು.

‘ದೇಶ ನೋಡು, ಕೋಶ ಓದು ಎಂಬ ಮಾತಿನಂತೆ ವಿದ್ಯಾರ್ಥಿಗಳಿಗೆ ಕರ್ನಾಟಕದ ಐತಿಹಾಸಿಕ ಸ್ಥಳಗಳನ್ನು ತೋರಿಸುವ ಯೋಜನೆಯಿಂದ ಮಕ್ಕಳ ಜ್ಞಾನ ಹೆಚ್ಚುತ್ತದೆ. ಶಿಕ್ಷಕರು ಮಕ್ಕಳ ಬಗ್ಗೆ ಎಚ್ಚರವಹಿಸಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಸರ್ಕಾರ ‘ಒಂದು ರಾಜ್ಯ ಹಲವು ಜಗತ್ತು’ ಧ್ಯೇಯದೊಂದಿಗೆ ಕರ್ನಾಟಕ ದರ್ಶನ ಪ್ರವಾಸಕ್ಕೆ ಅನುವುಮಾಡಿಕೊಟ್ಟಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಶಿವಮೊಗ್ಗ, ಜೋಗ್, ಮುರುಡೇಶ್ವರ ಮತ್ತಿತರ ಸ್ಥಳಗಳು ನಿಮ್ಮ ಪಠ್ಯಕ್ಕೆ ಪೂರಕವಾಗಿದ್ದು, ಪ್ರತಿ ಸ್ಥಳದ ಕುರಿತು ವರದಿ ನೀಡಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ೪ ದಿನಗಳ ಪ್ರವಾಸಕ್ಕೆ ವ್ಯವಸ್ಥೆ ಮಾಡಿದೆ. ಜಿಲ್ಲೆಯಿಂದ ೮೪೮ ಮಕ್ಕಳು ಪ್ರವಾಸ ಹೊರಟಿದ್ದು, ಸುರಕ್ಷತೆಗೆ ಆದ್ಯತೆ ನೀಡಬೇಕು. ಗುರುತಿನ ಚೀಟಿ ಕಡ್ಡಾಯವಾಗಿ ನೀಡಬೇಕು. ಸಮುದ್ರ ತೀರಗಳ ಬಳಿ ಎಚ್ಚರಿಕೆ ವಹಿಸಬೇಕು’ ಎಂದು ಶಿಕ್ಷಕರಿಗೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾತನಾಡಿ, ‘ಪಠ್ಯದಲ್ಲಿ ಓದಿದ್ದನ್ನು ನೈಜವಾಗಿ ನೋಡುವ ಅವಕಾಶ ಸಿಕ್ಕಿದೆ. ಇದರ ಪ್ರಯೋಜನೆ ಪಡೆದುಕೊಂಡರೆ ಜ್ಞಾನವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ಪ್ರವಾಸದಲ್ಲಿ ವಿವಿಧ ಸ್ವರ್ಧೆಗಳನ್ನು ನಡೆಸಲಾಗುವುದು, ಇದರಲ್ಲಿ ವಿಜೇತರಾದವರಿಗೆ ೬ ಮಂದಿಗೆ ಬಹುಮಾನ ನೀಡಲಾಗುವುದು. ಸ್ಥಳಗಳ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಬೇಕು’ ಎಂದು ಕಿವಿ ಮಾತು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ, ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ವಿಷಯ ಪರಿವೀಕ್ಷಕಿ ಶಶಿವಧನಾ, ಶಿಕ್ಷಣ ಸಂಯೋಜಕರಾದ ರಾಘವೇಂದ್ರ, ವೆಂಕಟಾಚಲಪತಿ, ಮುನಿರತ್ನಯ್ಯಶೆಟ್ಟಿ, ಆರ್.ಶ್ರೀನಿವಾಸನ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಮುಖ್ಯ ಶಿಕ್ಷಕರಾದ ಸಿ.ಎನ್.ಪ್ರದೀಪ್ ಕುಮರ್, ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT