ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸ್ವಾವಲಂಬಿ ಬದುಕಿಗೆ ಆಸರೆಯಾಗಿ

ಎಚ್.ಮಲ್ಲಾಂಡಹಳ್ಳಿಯಲ್ಲಿ ಶಾಸಕ ನಾರಾಯಣಸ್ವಾಮಿ ಹೇಳಿಕೆ
Last Updated 24 ಜನವರಿ 2021, 13:16 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಅವಲಂಬಿತ ರೈತರಿಗೆ ಬ್ಯಾಂಕ್‌ಗಳಿಂದ ಆರ್ಥಿಕ ನೆರವು ಕೊಡಿಸಿ ಅವರ ಸ್ವಾವಲಂಬಿ ಬದುಕಿಗೆ ಆಸರೆಯಾಗಬೇಕು’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ತಿಳಿಸಿದರು.

ತಾಲ್ಲೂಕಿನ ಎಚ್.ಮಲ್ಲಾಂಡಹಳ್ಳಿಯಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಮತ್ತು 3 ಲೀಟರ್‌ ಸಾಮರ್ಥ್ಯದ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಬೆಳವಣಿಗೆ ಮತ್ತು ಬಿಎಂಸಿ ವೈಶಿಷ್ಟ್ಯತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಹಕಾರಿ ಸಂಘಗಳ ಹುಟ್ಟು ಮತ್ತು ಬೆಳವಣಿಗೆ ಕಾರಣಕರ್ತರಾದ ವರ್ಗಿಸ್ ಕುರಿಯನ್, ಕರ್ನಾಟಕದ ಕ್ಷೀರ ಬ್ರಹ್ಮ ಎಂ.ವಿ.ಕೃಷ್ಣಪ್ಪ ಮತ್ತು ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರನ್ನು ರೈತರು ಸ್ಮರಿಸಬೇಕು. ಹೈನುಗಾರಿಕೆಯು ಜಿಲ್ಲೆಯ ರೈತರಿಗೆ ವರದಾನವಾಗಿದೆ’ ಎಂದು ಹೇಳಿದರು.

‘ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲಿನ ಗುಣಮಟ್ಟ ಕಾಪಾಡಿದಾಗ ಮಾತ್ರ ಆರ್ಥಿಕವಾಗಿ ಸಬಲರಾಗಬಹುದು. ಮಹಿಳೆಯರು ಹೈನುಗಾರಿಕೆ ಜತೆಗೆ ಆದಾಯೋತ್ಪನ್ನ ಚಟುವಟಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಸಲಹೆ ನೀಡಿದರು.

₹ 29 ಲಕ್ಷ ಅನುದಾನ: ‘ಎಚ್.ಮಲ್ಲಾಂಡಹಳ್ಳಿಯ ಹಾಲು ಸಂಘಕ್ಕೆ ₹ 29 ಲಕ್ಷ ಅನುದಾನ ನೀಡಲಾಗಿದೆ. ಬಿಎಂಸಿಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಲಿನ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಬೇಕು. ಉತ್ಪಾದಕರಿಗೆ ಗುಣಮಟ್ಟಕ್ಕೆ ತಕ್ಕಂತೆ ದರ ನೀಡಬೇಕು’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಹೇಳಿದರು.

‘ಒಕ್ಕೂಟದ ವ್ಯಾಪ್ತಿಯ ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು. ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತುದೆ, ಹಾಲಿನ ಗುಣಮಟ್ಟಕ್ಕೆ ಒತ್ತು ನೀಡುವಲ್ಲಿ ಒಕ್ಕೂಟದ ಅಧಿಕಾರಿಗಳ ಪಾತ್ರ ನಿರ್ಣಾಯಕ. ಶೀಘ್ರದಲ್ಲೇ ತಾಲ್ಲೂಕಿನಾದ್ಯಂತ ಪೂರ್ಣ ಪ್ರಮಾಣದಲ್ಲಿ ಬಿಎಂಸಿಗಳನ್ನು ಅಳವಡಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಸರ್ಕಾರ ಪ್ರತಿ ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನ ನೀಡುತ್ತಿದೆ. ಈ ಪ್ರೋತ್ಸಾಹಧನ ಸಿಗಬೇಕಾದರೆ ರೈತರು ಹಾಲಿನ ಗುಣಮಟ್ಟ ಉತ್ತಮಪಡಿಸಬೇಕು. ಡಿಸಿಸಿ ಬ್ಯಾಂಕ್‌ನಿಂದ ಕಾಯಕ ಯೋಜನೆಯಡಿ ನೇರವಾಗಿ ರೈತರಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ತಿಳಿಸಿದರು.

ಜಿ.ಪಂ ಸದಸ್ಯೆ ಮುನಿಲಕ್ಷ್ಮಮ್ಮ, ತಾ.ಪಂ ಸದಸ್ಯೆ ಮುದ್ದುಮಣಿ, ಗ್ರಾ.ಪಂ ಸದಸ್ಯರಾದ ಟಿ.ನಾಗಭೂಷಣ, ಬಿ.ಎಂ.ಲಲಿತಾ, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್, ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಬಿಎಂಸಿ ಸಹಾಯಕ ವ್ಯವಸ್ಥಾಪಕ ಪಿ.ಮೋಹನ್‌ಬಾಬು, ಸಂಘದ ಕಾರ್ಯದರ್ಶಿ ಆರ್.ಮುರಳಿಧರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT