ಬುಧವಾರ, ನವೆಂಬರ್ 25, 2020
18 °C

ಆಂಧ್ರಕ್ಕೆ ನೀರು ಹರಿಯದಂತೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ‘ತಾಲ್ಲೂಕಿನ ಗಂಗಾಪುರ ಸಮೀಪದ ಅಡವಿನಾಯಕನ ಕೆರೆ ಕಾಲುವೆಯನ್ನು ದುರಸ್ತಿಪಡಿಸಿ ಕಾಲುವೆ ಮೂಲಕ ನೆರೆಯ ಆಂಧ್ರಪ್ರದೇಶಕ್ಕೆ ಮಳೆ ನೀರು ಹರಿದು ಹೋಗುವುದನ್ನು ತಡೆಯಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಎಸ್‌. ಆನಂದ್‌ ಹೇಳಿದರು.

ಅಡವಿನಾಯಕನ ಕೆರೆಗೆ ಗುರುವಾರ ಭೇಟಿ ನೀಡಿ ಕಾಲುವೆಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಈ ಪುರಾತನ ಕಾಲುವೆಯಲ್ಲಿ ಸಾಕಷ್ಟು ಹೂಳು ತುಂಬಿದೆ. ಇದರಿಂದ ಕೆರೆಯಿಂದ ಹೊರಗೆ ಹೋಗುವ ಮಳೆ ನೀರು ತಾಲ್ಲೂಕಿನ ಕೆರೆಗಳನ್ನು ತಲುಪುತ್ತಿಲ್ಲ. ಆಂಧ್ರಪ್ರದೇಶದ ಕೆರೆಗಳ ಪಾಲಾಗುತ್ತಿದೆ. ಹಾಗಾಗಿ, ತಾಲ್ಲೂಕಿನ ಕೃಷಿಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.

ಕಾಲುವೆಯಲ್ಲಿನ ಹೂಳು ತೆಗೆದು 6 ಅಡಿ ಆಳ ಮಾಡಲಾಗುವುದು. ಇದರಿಂದ ಮಳೆಗಾಲದಲ್ಲಿ ತಾಲ್ಲೂಕಿನ 15ಕ್ಕೂ ಹೆಚ್ಚು ಕೆರೆಗಳಿಗೆ ಹೆಚ್ಚುವರಿ ನೀರು ಹರಿದುಹೋಗಲು ಸಹಕಾರಿಯಾಗಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಳೆ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ– ಆಂಧ್ರಪ್ರದೇಶದ ಗಡಿಯಲ್ಲಿರುವ ತಾಲ್ಲೂಕಿನ ಕೆರೆಗಳು ಹಾಗೂ ಕಾಲುವೆಗಳಲ್ಲಿ ಹೂಳು ತುಂಬಿದೆ. ಇದರ ಪರಿಣಾಮ ಮಳೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಇಲ್ಲಿನ ಗುಡ್ಡಗಾಡು  ಪ್ರದೇಶದಲ್ಲಿ ಹೊಸ ಕೆರೆಗಳ ನಿರ್ಮಾಣಕ್ಕೆ ವಿಪುಲ ಅವಕಾಶಗಳಿವೆ. ಹೊಸ ಕೆರೆಗಳನ್ನು ನಿರ್ಮಿಸಿದರೆ ಮಳೆ ನೀರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ರಾಮಪ್ಪ, ಪಿಡಿಒ ಸವಿತಾ, ನವೀನ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.