ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇರಹಳ್ಳಿ ಘರ್ಷಣೆ: ದೂರು–ಪ್ರತಿದೂರು ದಾಖಲು

Last Updated 9 ಜನವರಿ 2022, 14:33 IST
ಅಕ್ಷರ ಗಾತ್ರ

ಕೋಲಾರ: ನಗರದ ಹೊರವಲಯದ ತೇರಹಳ್ಳಿಯಲ್ಲಿ ಎರಡು ಕೋಮುಗಳ ನಡುವೆ ಶನಿವಾರ ರಾತ್ರಿ ನಡೆದ ಘರ್ಷಣೆ ಪ್ರಕರಣವು ತಿರುವು ಪಡೆದಿದ್ದು, ಘಟನೆ ಸಂಬಂಧ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ತೇರಹಳ್ಳಿಯ ಸ್ಥಳೀಯರು ತಮ್ಮ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದರು ಎಂದು ಆರೋಪಿಸಿ ನಗರದ ಕೆ.ಜಿ.ಮೊಹಲ್ಲಾ ನಿವಾಸಿ ರೋಮನಾ ಮಹಮದಿ ಅವರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅತ್ತೆ ಫಾಹಿಮಾ, ಅತ್ತಿಗೆಯರಾದ ನವೀದಾ, ಶಾಹಿರಾ ಭಾನು ಹಾಗೂ ಚಾಲಕ ಲಿಯಾಕತ್‌ ಜತೆ ಶನಿವಾರ ರಾತ್ರಿ ತೇರಹಳ್ಳಿ ಬೆಟ್ಟದ ದರ್ಗಾಕ್ಕೆ ಹೋಗಿ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮುನಿರಾಜು ಎಂಬ ಸ್ಥಳೀಯ ವ್ಯಕ್ತಿ ಮತ್ತು ಅವರ ಕಡೆಯವರು ತಮ್ಮ ವಾಹನ ಅಡ್ಡಗಟ್ಟಿ ಕೆಳಗಿಳಿಸಿ ಹಲ್ಲೆ ನಡೆಸಿದರು ಎಂದು ರೋಮನಾ ದೂರಿನಲ್ಲಿ ಆರೋಪಿಸಿದ್ದಾರೆ.

ಮುನಿರಾಜು ಮತ್ತು ಅವರ ಕಡೆಯ ನಾಲ್ಕೈದು ಮಂದಿ ತೇರಹಳ್ಳಿಯ ದರ್ಗಾಕ್ಕೆ ಬರಬಾರದೆಂದು ತಮಗೆ ಬೆದರಿಕೆ ಹಾಕಿ ಚಿನ್ನದ 2 ಉಂಗುರ, 2 ಬಳೆ ಮತ್ತು 2 ಕಿವಿಯೊಲೆ ಕಿತ್ತುಕೊಂಡು ಹಲ್ಲೆ ನಡೆಸಿದರು. ಅಲ್ಲದೇ, ಬುರ್ಖಾ ಹಿಡಿದು ಎಳೆದಾಡಿ ಅವಾಚ್ಯವಾಗಿ ನಿಂದಿಸಿದರು. ಬಳಿಕ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಚಾರ ತಿಳಿಸಿದೆವು. ನಂತರ ಸ್ಥಳಕ್ಕೆ ಬಂದ ಪೊಲೀಸರು ತಮ್ಮನ್ನು ಹಾಗೂ ಕುಟುಂಬ ಸದಸ್ಯರನ್ನು ಎಸ್‌ಎನ್‌ಆರ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು ಎಂದು ರೋಮನಾ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ರಕ್ಷಣೆಗೆ ಬಂದ ಸಮುದಾಯದ ಜನರ ಮೇಲೂ ಮುನಿರಾಜು ಮತ್ತು ಸಹಚರರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸಬೇಕು ಎಂದು ರೋಮನಾ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ರೋಮನಾ ಮತ್ತು ಕುಟುಂಬ ಸದಸ್ಯರ ವಿರುದ್ಧ ತೇರಹಳ್ಳಿಯ ಮಂಜುನಾಥ್‌ ಎಂಬುವರು ದೂರು ದಾಖಲಿಸಿದ್ದಾರೆ. ರೋಮನಾ ಮತ್ತು ಅವರ ಸಮುದಾಯದವರು ತಮ್ಮನ್ನು ಒಳಗೊಂಡಂತೆ ಗ್ರಾಮದ ಜನರ ಮೇಲೆ ನಡೆಸಿದ್ದಾರೆ ಎಂದು ಮಂಜುನಾಥ್‌ ಆರೋಪಿಸಿದ್ದಾರೆ.

ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತೇರಹಳ್ಳಿಯ ಪ್ರಕಾಶ್‌ ಮತ್ತು ಶ್ರೀರಾಮ್‌, ರೋಮನಾ ಅವರ ಕಡೆಯ ಲಿಯಾಕತ್‌ ಹಾಗೂ ಮುದಾಸಿರ್‌ ಎಂಬುವರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT