ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಡಿಸಿಸಿ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಶೋಚನೀಯ: ಗೋವಿಂದಗೌಡ

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಳವಳ
Last Updated 7 ಮೇ 2020, 5:47 IST
ಅಕ್ಷರ ಗಾತ್ರ

ಕೋಲಾರ: ‘ಲಾಕ್‌ಡೌನ್‌ ಕಾರಣದಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲ ಮರುಪಾವತಿಯಾಗದ ಕಾರಣ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ಡಿಸಿಸಿ ಬ್ಯಾಂಕ್‌ ಹಾಗೂ ಸುಗಟೂರು ಎಸ್‍ಎಫ್‌ಸಿಎಸ್‌ ಸಹಯೋಗದಲ್ಲಿ ರೈತರಿಗೆ ಬೆಳೆ ಸಾಲದ ಚೆಕ್‌ ವಿತರಿಸಿ ಮಾತನಾಡಿ, ‘ಸುಗಟೂರು ಸೊಸೈಟಿಯು ಆರ್ಥಿಕ ಸಂಕಷ್ಟದ ಸಂದರ್ಭದಲ್ಲೂ ಸಾಲ ಮರುಪಾವತಿಯಲ್ಲಿ ದಾಖಲೆ ಮಾಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬ್ಯಾಂಕ್‌ ಕೊರೊನಾ ಸೋಂಕಿನ ಸಂಕಷ್ಟದ ನಡುವೆಯೂ ರೈತರು ಹಾಗೂ ಮಹಿಳಾ ಸಂಘಗಳಿಗೆ ಸಾಲ ನೀಡುತ್ತಿದೆ. ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಸಾಲ ನೀಡುವ ಜವಾಬ್ದಾರಿ ಬ್ಯಾಂಕ್‌ನ ಮೇಲಿದೆ. ಆರ್ಥಿಕ ಸ್ಥಿತಿವಂತರು ಸಾಲ ಮರುಪಾವತಿ ಹಾಗೂ ಉಳಿತಾಯ ಮಾಡುವ ಮೂಲಕ ಬ್ಯಾಂಕ್‌ಗೆ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಬೆಳೆ ನಷ್ಟ ಮತ್ತು ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಮೀಟರ್ ಬಡ್ಡಿ ದಂಧೆಗೆ ಸಿಲುಕುವ ಆತಂಕವಿದೆ. ಎರಡೂ ಜಿಲ್ಲೆಗಳ ರೈತರಿಂದ ನೂರಾರು ಕೋಟಿ ಬೆಳೆ ಸಾಲಕ್ಕೆ ಬೇಡಿಕೆಯಿದ್ದು, ಎಲ್ಲರಿಗೂ ನೆರವಾಗುವ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಹಿತರಕ್ಷಣೆಗೆ ಬದ್ಧ: ‘ಲಾಕ್‌ಡೌನ್‌ ಸಂಕಷ್ಟದಲ್ಲಿ ಯಾವುದೇ ಬ್ಯಾಂಕ್‌ ಸಾಲ ನೀಡುವ ಗೋಜಿಗೆ ಹೋಗುತ್ತಿಲ್ಲ. ಡಿಸಿಸಿ ಬ್ಯಾಂಕ್ ರೈತರ ಹಿತರಕ್ಷಣೆಗೆ ಬದ್ಧವಾಗಿದ್ದು, ಬೆಳೆ ಸಾಲ ನೀಡುತ್ತಿದೆ. ಆರ್ಥಿಕ ಸ್ಥಿತಿವಂತರು ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲಿಟ್ಟು ರೈತರಿಗೆ ಮತ್ತು ಮಹಿಳೆಯರಿಗೆ ನೆರವಾಗಲು ಸಹಕರಿಸಬೇಕು’ ಎಂದು ಬ್ಯಾಂಕ್ ನಿರ್ದೇಶಕ ಸೋಮಣ್ಣ ಕೋರಿದರು.

‘ಕೆಲವರು ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್‌ಗೆ ಬರುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಉಳಿತಾಯದ ಹಣಕ್ಕೆ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಡಿಸಿಸಿ ಬ್ಯಾಂಕ್‌ ಹೆಚ್ಚಿನ ಬಡ್ಡಿ ಕೊಡುತ್ತಿದೆ. ಜನರು ಬ್ಯಾಂಕ್‌ನಲ್ಲಿ ಹಣ ಠೇವಣಿಯಿಟ್ಟರೆ ಮತ್ತಷ್ಟು ರೈತರು ಮತ್ತು ಮಹಿಳೆಯರಿಗೆ ಸಾಲ ಕೊಡಲು ಸಾಧ್ಯವಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಹೇಳಿದರು.

ರೈತರಿಗೆ ₹ 65 ಲಕ್ಷ ಸಾಲ ವಿತರಿಸಲಾಯಿತು. ಬ್ಯಾಂಕ್‌ ನಿರ್ದೇಶಕ ಸೊಣ್ಣೇಗೌಡ, ಸುಗಟೂರು ಎಸ್‍ಎಫ್‌ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಎ.ಸಿ.ಭಾಸ್ಕರ್, ವೆಂಕಟರಾಮಪ್ಪ, ರಮನಾರೆಡ್ಡಿ, ಗೋಪಾಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT