ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ಬಡ ಜನರ ವಿರೋಧಿ

ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ: ಸಿದ್ದರಾಮಯ್ಯ ಆರೋಪ
Last Updated 18 ಮೇ 2021, 3:51 IST
ಅಕ್ಷರ ಗಾತ್ರ

ಮಾಲೂರು: ‘ರಾಜ್ಯ ಸರ್ಕಾರ ಕೋವಿಡ್–19 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದು, ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದರು.

ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಶಾಸಕ ಕೆ.ವೈ.ನಂಜೇಗೌಡ ನೇತೃತ್ವದ ತಾಲ್ಲೂಕಿನ ಬಡವರಿಗೆ ದಿನಸಿ, ಸರ್ಕಾರಿ ಆಸ್ಪತ್ರೆಗೆ 3 ಉಚಿತ ಆಂಬುಲೆನ್ಸ್ ವಾಹನಗಳು ಹಾಗೂ ಇಂದಿರಾ ಕ್ಯಾಂಟೀನ್ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಶಾಸಕ ನಂಜೇಗೌಡ ಜನತೆಗೆ ಬಹಳಷ್ಟು ಸಹಾಯ ಮಾಡಿದ್ದರು. ಈಗಲೂ ಅದೇ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಿದಲ್ಲಿದ್ದು, ಕೊರೊನಾ ಸೋಂಕಿತರನ್ನು ಕಾಪಾಡುವಲ್ಲಿ ವಿಫಲವಾಗಿದೆ. ಕೊರೊನಾ 2ನೇ ಅಲೆಯಿಂದ ಜನ ತತ್ತರಿಸುತ್ತಿದ್ದಾರೆ. ಅಲ್ಲದೆ ವೈದ್ಯರು, ನರ್ಸ್‌ ಳು ಆಶಾ ಕಾರ್ಯಕರ್ತೆಯರು, ಶ್ರಮಿಕರಿಗೆ ಸೇರಿದಂತೆ ಕೊರೊನಾ ವಾರಿಯರ್ಸ್‌ಗೆ ಹಾಗೂ ಕಾರ್ಮಿಕ ವರ್ಗಕ್ಕೆ ಬಹಳ ತೊಂದರೆಯಾಗಿದ್ದು, ಅವರಿಗೆ ಸರ್ಕಾರದಿಂದ ₹10 ಸಾವಿರ ಸಹಾಯಧನ ನೀಡಬೇಕು ಎಂದು ಹೇಳುತ್ತಲೇ ಇದ್ದೇವೆ. ಆದರೆ ಸರ್ಕಾರ ಬಂಡೆದ್ದುಹೋಗಿದೆ. ಅವರ ಕಿವಿಗೆ ಕೇಳಿಸುತ್ತಿಲ್ಲ’ ಎಂದು ದೂರಿದರು.

‘ಬಿಪಿಎಲ್ ಕಾರ್ಡುದಾರರು 1.20 ಕೋಟಿ ಇದ್ದಾರೆ. ಅವರಿಗೆ ನಾನು ಮುಖ್ಯಮಂತ್ರಿಯಾಗಿದ್ದಾಗ 7 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಆದರೇ ಈಗ 2 ಕೆಜಿ ಕೊಡಲಾಗುತ್ತಿದೆ. ಮತ್ತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದರೇ ಜನತೆಗೆ ₹10 ಸಾವಿರ ಕೊಡುತೀವಿ, ತಲಾ 10 ಕೆಜಿ ಅಕ್ಕಿ ಸಹ ಕೊಡತೀವಿ’ ಎಂದು ಘೋಷಣೆ ಮಾಡಿದರು.

ಸರ್ಕಾರದಿಂದ ಜನತೆಗೆ ವ್ಯಾಕ್ಸಿನ್ ಸರಬರಾಜು ಮಾಡಲು ಸಾಧ್ಯವಾಗದೆ ತತ್ತರಿಸುತ್ತಿರುವ ಸಂದರ್ಭದಲ್ಲಿ ವ್ಯಾಕ್ಸಿನ್ ಖರೀದಿಸಲು ಕಾಂಗ್ರೆಸ್ ವತಿಯಿಂದ ₹100 ಕೋಟಿ ಸಂಗ್ರಹಿಸಿ ವ್ಯಾಕ್ಸಿನ್ ಖರೀದಿಸಲು ಮುಂದಾಗಿರುವುದಾಗಿ ತಿಳಿಸಿದರು. ಕೊರೊನಾ ಕಾಯಿಲೆ ಇಲ್ಲಿಗೆ ಮುಗಿಯುವುದಿಲ್ಲ. ನಿಯಮಗಳನ್ನು ಪಾಲಿಸುವ ಮೂಲಕ ಜನತೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಜನತೆಗೆ ಸ್ಪಂದಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣ ಮಾಡಲು ಅವಕಾಶ ಇದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಸರ್ಕಾರದ
ವಿರುದ್ಧ ಕಾಂಗ್ರಸ್ ಪಕ್ಷ ಹೋರಾಟ ಮಾಡುತ್ತಿದೆ. ಸರ್ಕಾರ ಜನತೆಗೆ ಅಗತ್ಯವಿರುವ ಆಮ್ಲಜನಕ, ಬೆಡ್ ಸೌರ್ಕಯ ಕಲ್ಪಿಸುತ್ತಿಲ್ಲ. ಆದರೇ ಸರ್ಕಾರ ಮಾಡದೆ ಇರುವ ಕೆಲಸವನ್ನು ಇಲ್ಲಿನ ಶಾಸಕರು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ‘ಕೊರೊನಾ ಸೋಂಕಿಗೆ ಭಯ ಪಡೆದೆ ಬಡ ಜನತೆಯ ಅನುಕೂಲಕ್ಕಾಗಿ ಪ್ರತಿ ದಿನ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದೇನೆ. ಸರ್ಕಾರ ಕನಿಷ್ಠ ಸೌಲಭ್ಯ ಸಹ ಕಲ್ಪಿಸಿಲ್ಲ. ಅನುಕೂಲಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆರೋಗ್ಯವಂತರಾಗಿ ಹೊರಗೆ ಬರುತ್ತಿದ್ದಾರೆ. ಆದರೇ ಬಡವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದು, ಕನಿಷ್ಠ ಸೌಕರ್ಯ ಇಲ್ಲದೆ ಬಹಳಷ್ಟು ಬಡಜನತೆ ತಮ್ಮ ಜೀವ ಕಳೆದುಕೊಂಡಿದ್ದಾರೆ’ ಎಂದರು.

ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ, ಎಂಎಲ್‌ಸಿ ನಜೀರ್ ಆಹಮದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಪುರಸಭಾಧ್ಯಕ್ಷ ಮುರಳಿದರ್, ಮುಖಂಡರಾದ ಅಂಜನಿ ಸೋಮಣ್ಣ, ಯಲ್ಲಪ್ಪ ಪ್ರದೀಫ್ ರೆಡ್ಡಿ, ಮದುಸೂದನ್, ಅಶ್ವಥ ರೆಡ್ಡಿ, ನಾರಾಯಣಸ್ವಾಮಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT