ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಓಟ

ಕೊರೊನಾ ಸೋಂಕಿಗೆ 3ನೇ ಬಲಿ: ಬೆಮಲ್‌ ಉದ್ಯೋಗಿ ಸಾವು
Last Updated 6 ಜುಲೈ 2020, 16:44 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಓಟ ಮುಂದುವರಿದಿದ್ದು, ಸೋಂಕಿನಿಂದ ಬಳಲುತ್ತಿದ್ದ ಕೆಜಿಎಫ್‌ನ ಬೆಮಲ್‌ ಉದ್ಯೋಗಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಮೂಲತಃ ಬೆಂಗಳೂರಿನ ಇವರು ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಾರಾಂತ್ಯದಲ್ಲಿ ಬೆಂಗಳೂರಿಗೆ ಹೋಗಿ ಬರುತ್ತಿದ್ದ ಇವರಿಗೆ ಕೊರೊನಾ ಸೋಂಕು ತಗುಲಿರುವುದು ಜೂನ್‌ 29ರಂದು ಗೊತ್ತಾಗಿತ್ತು. ನಂತರ ಇವರನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ 8 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ್ದ ಇವರ ದೇಹಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಾ ಸಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಇವರು ರಾತ್ರಿ ಕೊನೆಯುಸಿರೆಳೆದರು. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3ಕ್ಕೇರಿದ್ದು, ಸಾವಿನ ಓಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.

12 ಮಂದಿಗೆ ಸೋಂಕು: ಕೊರೊನಾ ಸೋಂಕಿತ ವ್ಯಕ್ತಿಯ ಸಾವಿನ ಬೆನ್ನಲ್ಲೇ ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ ಮತ್ತೆ 12 ಮಂದಿಗೆ ಸೋಂಕು ತಗುಲಿದೆ.

ಕೆಜಿಎಫ್‌ ತಾಲ್ಲೂಕಿನ ಸುಂದರಪಾಳ್ಯದಲ್ಲಿ ಪತಿ ಹಾಗೂ ಪತ್ನಿಗೆ ಸೋಂಕು ಹರಡಿದೆ. ಇತ್ತೀಚೆಗೆ ಇವರ ಮನೆಗೆ ಬಂದಿದ್ದ ಸಂಬಂಧಿಕರಾದ ಗರ್ಭಿಣಿಗೆ ಸೋಂಕು ಇತ್ತು. ಇವರ ಸಂಪರ್ಕದಿಂದ ಇದೀಗ ಅಣ್ಣ ಮತ್ತು ಅಣ್ಣನ ಹೆಂಡತಿಗೆ ಸೋಂಕು ಹರಡಿದೆ.

ಬಂಗಾರಪೇಟೆಯ ಬನಹಳ್ಳಿ ಗ್ರಾಮದ 30 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಇವರು ಬಂಗಾರಪೇಟೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ಸೋಂಕಿತ ಆರೋಗ್ಯ ಕಾರ್ಯಕರ್ತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಬನಹಳ್ಳಿ ವ್ಯಕ್ತಿಗೆ ಸೋಂಕು ಇರುವುದು ಭಾನುವಾರ ರಾತ್ರಿ ಗೊತ್ತಾಗಿತ್ತು. ಇದರಿಂದ ಆತಂಕಗೊಂಡ ಆ ವ್ಯಕ್ತಿಯು ರಾತ್ರಿ ಆರೋಗ್ಯ ಇಲಾಖೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು. ನಂತರ ಸೋಮವಾರ ಅವರನ್ನು ಪತ್ತೆ ಮಾಡಿ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು.

ಬಾಣಂತಿಗೆ ಸೋಂಕು: ಮಾಲೂರು ತಾಲ್ಲೂಕಿನ ಎಟ್ಟಕೋಡಿ ಗ್ರಾಮದಲ್ಲಿ ಬಾಣಂತಿಗೆ ಸೋಂಕು ಇರುವುದು ದೃಢಪಟ್ಟಿದೆ. ತಮಿಳುನಾಡಿನ ಬಾಗಲೂರು ಗ್ರಾಮದ ಪತಿಯ ಮನೆಯಲ್ಲಿದ್ದ ಇವರು ಇತ್ತೀಚೆಗೆ ಎಟ್ಟಕೋಡಿ ಗ್ರಾಮದ ತವರು ಮನೆಗೆ ಬಂದಿದ್ದರು. ಸೋಂಕಿತ ಪತಿಯಿಂದ ಇವರಿಗೆ ಸೋಂಕು ಹರಡಿತ್ತು. ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಆಸ್ಪತ್ರೆಯಲ್ಲಿ 2 ದಿನಗಳ ಹಿಂದೆ ಹೆರಿಗೆ ಆಗಿತ್ತು.

ನಂತರ ಕುಟುಂಬ ಸದಸ್ಯರು ತಾಯಿ ಮತ್ತು ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿಯು ತಾಯಿಯ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಸೋಮವಾರ ರಾತ್ರಿ ಬಂದ ಪ್ರಯೋಗಾಲಯ ವರದಿಯಲ್ಲಿ ತಾಯಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ತಾಯಿಯ ಸಂಪರ್ಕಕ್ಕೆ ಬಂದಿರುವ 2 ದಿನದ ಮಗುವಿಗೂ ಸೋಂಕು ಹರಡಿರುವ ಆತಂಕ ಎದುರಾಗಿದೆ.

ಮಾಲೂರು ತಾಲ್ಲೂಕಿನ ಕೊಮ್ಮನಹಳ್ಳಿ ಗ್ರಾಮದಲ್ಲಿ 30 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದೆ. ಇವರು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಬಂಧಿಕರ ಮದುವೆಗೆ ಹೋಗಿ ಬಂದಿದ್ದರು.

ಸಂಪರ್ಕದ ನಂಟು: ಮುಳಬಾಗಿಲು ನಗರದ ಕುರುಬರಪೇಟೆ ಬಡಾವಣೆಯಲ್ಲಿನ ಸೋಂಕಿತ ವ್ಯಕ್ತಿಯ (ಸೋಂಕಿತರ ಸಂಖ್ಯೆ–18095) ಪ್ರಾಥಮಿಕ ಸಂಪರ್ಕದಿಂದ 3 ಮಂದಿಗೆ ಸೋಂಕು ಹರಡಿದೆ. ಇಬ್ಬರು ಮಹಿಳೆಯರು ಮತ್ತು ಒಬ್ಬರು ಪುರುಷರಿಗೆ ಸೋಂಕು ತಗುಲಿದೆ.

ಹೊರ ಜಿಲ್ಲೆಗೆ ಹೋಗಿ ಬಂದಿದ್ದ ಮುಳಬಾಗಿಲು ತಾಲ್ಲೂಕಿನ ಅಂಬ್ಲಿಕಲ್‌ ಗ್ರಾಮದ ವ್ಯಕ್ತಿ ಮತ್ತು ಮುಳಬಾಗಿಲು ನಗರದ ತ್ಯಾಗರಾಜ ಕಾಲೊನಿಯ ವ್ಯಕ್ತಿಗೆ ಇರುವುದು ಖಚಿತವಾಗಿದೆ.

ಆರೋಗ್ಯ ಕಾರ್ಯಕರ್ತೆಗೆ ಸೋಂಕು: ಕೋಲಾರದ ಆರ್‌.ಎಲ್‌ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ 27 ವರ್ಷದ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ಸೋಂಕು ತಗುಲಿದೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಂದ ಸೋಂಕು ತಗುಲಿದೆ. ಕೋಲಾರದ ಮಹಾಲಕ್ಷ್ಮಿ ಲೇಔಟ್‌ನ 40 ವರ್ಷದ ಮಹಿಳೆಗೆ ಸೋಂಕು ಇರುವುದು ಗೊತ್ತಾಗಿದೆ. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸೋಂಕಿತರು ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT