ಕೋಲಾರ: ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ತೆರಳುತ್ತಿದ್ದ ಟೊಮೆಟೊ ತುಂಬಿದ ಲಾರಿ ನಾಪತ್ತೆಯಾಗಿದ್ದು, ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರದ ಮೆಹತ್ ಟ್ರಾನ್ಸ್‌ಫೋರ್ಟ್‌ಗೆ ಸೇರಿದ ಲಾರಿ ಇದಾಗಿದ್ದು, ಸುಮಾರು ₹ 21 ಲಕ್ಷ ಮೌಲ್ಯದ ಟೊಮೆಟೊವನ್ನು ಕೋಲಾರದ ಎಪಿಎಂಸಿಯಲ್ಲಿ ತುಂಬಿ ರವಾನಿಸಲಾಗಿತ್ತು. ಎ.ಜಿ.ಟ್ರೇಡರ್ಸ್ ಸಕ್ಲೇನ್ ಹಾಗೂ ಎಸ್‌ವಿಟಿ ಟ್ರೇಡರ್ಸ್ ಮುನಿರೆಡ್ಡಿ ಎಂಬುವರಿಗೆ ಸೇರಿದ ಟೊಮೆಟೊ ಇದಾಗಿದೆ.
ಜುಲೈ 27ರಂದು ಕೋಲಾರದಿಂದ ತೆರಳಿತ್ತು. ಜುಲೈ 29ರ ರಾತ್ರಿ 8.30ರವರೆಗೆ ಚಾಲಕ ಸಂಪರ್ಕದಲ್ಲಿದ್ದರು. ಆ ಸಂದರ್ಭದಲ್ಲಿ ಲಾರಿ ಭೋಪಾಲ್ ಟೋಲ್ ದಾಟಿತ್ತು ಎನ್ನಲಾಗಿದೆ.
ಆ ಬಳಿಕ ಲಾರಿ ಚಾಲಕ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದರಿಂದ ಆತಂಕಕ್ಕೆ ಒಳಗಾದ ಮಂಡಿ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
‘ಅಪಘಾತ ಏನಾದರೂ ಆಗಿದೆಯೇ? ಅಥವಾ ನೆಟ್ವರ್ಕ್ ತೊಂದರೆಯಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲವೋ’ ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.