ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಕರೆದು ನಾಟಿ ಮಾಡಿದ ಬಿ.ಸಿ.ಪಾಟೀಲ, ಎಚ್‌.ನಾಗೇಶ್‌

‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ: ದಿನವಿಡೀ ಕೃಷಿ ಚಟುವಟಿಕೆಯಲ್ಲಿ ಭಾಗಿ
Last Updated 6 ಜನವರಿ 2021, 14:25 IST
ಅಕ್ಷರ ಗಾತ್ರ

ಕೋಲಾರ: ಕೃಷಿ ಇಲಾಖೆಯು ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೇವಹಳ್ಳಿ ಮತ್ತು ಎನ್‌.ವಡ್ಡಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮದ ಅಂಗವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ಅವರು ಇಡೀ ದಿನ ರೈತರ ಜತೆ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾದರು.

ರೈತರಂತೆಯೇ ತಲೆಗೆ ಪೇಟ ಕಟ್ಟಿಕೊಂಡು ಜಮೀನಿಗಿಳಿದ ಸಚಿವದ್ವಯರು ನೇಗಿಲು ಹಿಡಿದು ಉಳುಮೆ ಮಾಡಿದರು. ಅಲ್ಲದೇ, ರಾಗಿ ರಾಶಿ ಪೂಜೆ ಮಾಡಿ ರಾಗಿಯನ್ನು ಗುಡಾಣಕ್ಕೆ ತುಂಬಿಸಿದರು. ರೇಷ್ಮೆ ಹುಳುಗಳಿಗೆ ಹಿಪ್ಪುನೇರಳೆ ಸೊಪ್ಪು ಹಾಕಿದರು. ಆಲೂಗಡ್ಡೆ ಮತ್ತು ಟೊಮೆಟೊ ಸಸಿ ನಾಟಿ ಮಾಡಿ ಗಮನ ಸೆಳೆದರು.

ಹಸುವಿನ ಹಾಲು ಕರೆದ ಸಚಿವರು ಜಮೀನಿಗೆ ಗೊಬ್ಬರ ಹಾಕಿ ರಾಗಿ, ಕೊತ್ತಂಬರಿ ಬೀಜ ಬಿತ್ತನೆ ಮಾಡಿದರು. ಜತೆಗೆ ಟೊಮೆಟೊ ಬಳ್ಳಿ ಕಟ್ಟಿ ಹಣ್ಣು ಕೊಯ್ಲು ಮಾಡಿದರು. ಅವರೆಕಾಯಿ ಬಿಡಿಸಿದರು ಮತ್ತು ಮಡಿಗಳಲ್ಲಿ ಸಸಿ ನಾಟಿ ಮಾಡಿದರು. ಕಲ್ಲಂಗಡಿ ಬೆಳೆಗೆ ಜೀವಾಮೃತ ಸಿಂಪಡಿಸಿದರು. ಕಟರ್‌ ಯಂತ್ರದಿಂದ ಹಸಿರು ಮೇವು ಕತ್ತರಿಸಿದರು.

ಅಜೋಲ ತೊಟ್ಟಿ ವೀಕ್ಷಿಸಿ ಕುರಿಗಳಿಗೆ ಮೇವು ಹಾಕಿದರು. ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಸಂಸದ ಎಸ್.ಮುನಿಸ್ವಾಮಿ ಅವರು ಸಚಿವದ್ವಯರ ಜತೆ ಪೈಪೋಟಿಗೆ ಇಳಿದಂತೆ ಅಪ್ಪಟ ರೈತರಾಗಿ ಕೃಷಿ ಕೆಲಸ ಮಾಡಿದರು.

ಬೇವಹಳ್ಳಿ ಗ್ರಾಮದ ಪ್ರಗತಿಪರ ರೈತ ದಂಪತಿ ಅಶ್ವತಮ್ಮ ಮತ್ತು ಮೋಹನ್‌ ಅವರ ಸಮಗ್ರ ಕೃಷಿ ತಾಕಿಗೆ ಭೇಟಿ ನೀಡಿ, ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುರಿ, ಕೋಳಿ ಸಾಕಣೆ, ರೇಷ್ಮೆ ಕೃಷಿ, ಹೈನುಗಾರಿಕೆ ಬಗ್ಗೆ ದಂಪತಿಯಿಂದ ಮಾಹಿತಿ ಪಡೆದರು. ಅಲ್ಲದೇ, ದಂಪತಿ ಮನೆಯಲ್ಲಿ ಬೇಯಿಸಿದ ಅವರೆಕಾಯಿ, ಗೆಣಸು, ಕಡಲೆ ಕಾಯಿ ಸವಿದರು.

ಗ್ರಾಮದ ಪ್ರಗತಿಪರ ರೈತರಾದ ಬಾಬು, ಬೈಯ್ಯಪ್ಪ ಅವರ ಕೃಷಿ ತಾಕುಗಳಿಗೂ ಸಚಿವರು ಭೇಟಿ ನೀಡಿದರು. ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವ ಕೆಲಸ ನಿರ್ವಹಿಸಿದರು. ರೈತರಿಗಾಗಿ ತಾಕುಗಳಲ್ಲಿ ಆಲೂಗಡ್ಡೆ ಮತ್ತು ಟೊಮೆಟೊ ಸಸಿ ನಾಟಿ, ಟೊಮೆಟೊ ಹಣ್ಣಿನ ಕೊಯ್ಲು ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ನಗದು ಬಹುಮಾನ ನೀಡಲಾಯಿತು.

ಎತ್ತಿನ ಗಾಡಿ ಮೆರವಣಿಗೆ: ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಎನ್‌.ವಡ್ಡಹಳ್ಳಿಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎತ್ತಿನ ಗಾಡಿಗಳಲ್ಲಿ ಎಪಿಎಂಸಿವರೆಗೆ ಮೆರವಣಿಗೆ ಬಂದರು. ಸಚಿವರಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಅಲಂಕೃತ ಎತ್ತಿನ ಗಾಡಿಗಳು ಕಣ್ಮನ ಸೆಳೆದವು.

ಎನ್.ವಡ್ಡಹಳ್ಳಿ ಎಪಿಎಂಸಿ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕೃಷಿ ವಸ್ತು ಪ್ರದರ್ಶನವನ್ನು ಸಚಿವರು ವೀಕ್ಷಿಸಿದರು. ಪ್ರಗತಿಪರ ರೈತರ ಕೃಷಿ ಪ್ರಯೋಗಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಕೃಷಿ ಪರಿಕರ ವಿತರಿಸಿದರು. ಪ್ರಗತಿಪರ ರೈತರನ್ನು ಪ್ರಶಸ್ತಿ ನೀಡಿ ಸನ್ಮಾನಿಸಿದರು. ಜಿಲ್ಲೆಯ ವಿವಿಧ ಭಾಗದ ರೈತ ಮುಖಂಡರೊಂದಿಗೆ ಗೂಗಲ್‌ ಮೀಟ್‌ ಮೂಲಕ ಸಂವಾದ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT