ಮಂಗಳವಾರ, ಮೇ 17, 2022
29 °C
ಮಡಿವಾಳ ಮಾಚಿದೇವ ಜಯಂತಿ

ಸಾಮಾಜಿಕ ಕ್ರಾಂತಿ ಸೃಷ್ಟಿಸಿದ ವಚನಕಾರರು: ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಡಿವಾಳ ಮಾಚಿದೇವ, ಬಸವಣ್ಣ ಸೇರಿದಂತೆ ವಚನಕಾರರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಸೃಷ್ಟಿಸಿದರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾತನಾಡಿ, ‘12ನೇ ಶತಮಾನವು ರಾಜ್ಯದ ಇತಿಹಾಸದಲ್ಲಿ ಪ್ರಮುಖ ಕಾಲಘಟ್ಟ. ಸಾಮಾಜಿಕ ಬದಲಾವಣೆ ತಂದ ವಚನಗಳು ಸರ್ವ ಕಾಲಕ್ಕೂ ಸಲ್ಲುತ್ತವೆ’ ಎಂದು ಹೇಳಿದರು.

‘ಶರಣರ ಬಳಗದಲ್ಲಿ ಮಾಚಿದೇವ ಅವರು ಅಗ್ರಮಾನ್ಯ. ದುರ್ಬಲರ ಮೇಲಿನ ಶೋಷಣೆ, ಜಾತೀಯತೆ, ಮೇಲು-ಕೀಲು, ತಾರತಮ್ಯ, ಮೂಢನಂಬಿಕೆ ವಿರುದ್ಧ ಅವರು ಸಾಮಾಜಿಕ ಹೋರಾಟ ನಡೆಸಿದರು. ವೃತ್ತಿಯಿಂದ ಅಗಸರಾದ ಅವರು ಬದುಕು ಹಾಗೂ ವಚನಗಳ ಮೂಲಕ ಸಮಾಜದ ಕೊಳೆ ತೊಳೆಯಲು ಪ್ರಯತ್ನಿಸಿದ ಅಪರೂಪದ ಶರಣರು’ ಎಂದು ಸ್ಮರಿಸಿದರು.

‘ದುಡಿಮೆಯಲ್ಲಿ ದೇವರನ್ನು ಕಂಡ ವಚನಕಾರರು ದೇವರ ಆರಾಧನೆ ವಿರೋಧಿಸಿದ್ದರು. ಮಾಚಿದೇವ ಅವರು ದುಡಿಮೆಗೆ ಪ್ರಾಶಸ್ತ್ಯ ನೀಡಿರುವುದು ಒಪ್ಪಿಕೊಳ್ಳುವ ವಿಚಾರ. ಶ್ರೇಷ್ಠ ವಚನಕಾರರಾದ ಅವರು ವಚನಗಳ ಮೂಲಕ ಹಿಂದುಳಿದವರು, ವೃತ್ತಿನಿರತ ಶ್ರಮ ಜೀವಿಗಳು, ದಲಿತರು ಹಾಗೂ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು’ ಎಂದು ಬಣ್ಣಿಸಿದರು.

‘ಮಾಚಿದೇವ ಅವರು ಬಸವಣ್ಣನವರ ಸಮಕಾಲೀನ ವಚನಕಾರರು ಹಾಗೂ ಬಸವಣ್ಣನವರ ಅಚ್ಚುಮೆಚ್ಚಿನ ಅನುಯಾಯಿ. ಅನುಭವ ಮಂಟಪ ಕಟ್ಟುವಲ್ಲಿ ಅವರ ಕಾಯಕ ಮಹತ್ವದ್ದಾಗಿದೆ. ಅವರು ಧರ್ಮದ ಹಾದಿಯಲ್ಲಿ ನಡೆಯುವಂತೆ ತಿಳಿಸಿದ್ದಾರೆ. ಅವರು ಸಾವಿರಾರು ವಚನ ರಚಿಸಿದ್ದರೂ 346 ಮಾತ್ರ ಲಭ್ಯವಿವೆ. ಅವರ ವಚನಗಳು ಸಾರ್ವಕಾಲಿಕ’ ಎಂದು ವಿವರಿಸಿದರು.

ಕಾಯಕದ ಹಿರಿಯಾಳು: ‘ಮಡಿವಾಳ ಮಾಚಿದೇವ ಅವರು ನೇರ ನಡೆ ನುಡಿ, ವ್ಯಕ್ತಿತ್ವದ ಸಾಮಾಜಿಕ ಹೋರಾಟಗಾರರು. ಅವರು ಗಟ್ಟಿ ಕಾಯಕದ ಹಿರಿಯಾಳು. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಒದಗಿಸಲು ಹೋರಾಟ ಮಾಡಿದರು’ ಎಂದು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

‘ಯಾವುದೇ ಸಮುದಾಯದವರು ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಬಾರದು. ಕಲಿಕೆಗೆ ಕೊನೆಯಿಲ್ಲ. ಮಕ್ಕಳಿಗೆ ಆಸಕ್ತಿ ಇರುವವರೆಗೂ ಶಿಕ್ಷಣ ಕೊಡಿಸಬೇಕು’ ಎಂದು ಕಿವಿಮಾತು ಹೇಳಿದರು.

ಆದರ್ಶ ಅವಶ್ಯಕ: ‘ಶಿವ ಶರಣರ ಬಟ್ಟೆ ತೊಳೆದುಕೊಂಡು ಬದುಕು ಸಾಗಿಸುತ್ತಿದ್ದ ಮಾಚಿದೇವ ಅವರು ಸತ್ಯ, ನ್ಯಾಯ, ಜ್ಞಾನ, ವೀರ ನಿಷ್ಠೆಗೆ ಸಾಕಾರಮೂರ್ತಿಯಾಗಿದ್ದರು. ಅವರು ವಚನಗಳ ಮೂಲಕ ಜನಜಾಗೃತಿ ಮೂಡಿಸಿದರು. ಜೀವನವು ಉತ್ತಮ ಮಾರ್ಗದಲ್ಲಿ ಸಾಗಬೇಕಾದರೆ ಇಂತಹ ಮಹನೀಯರ ಆದರ್ಶ ಅವಶ್ಯಕ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಜಣ್ಣ ಸಲಹೆ ನೀಡಿದರು.

‘ವಚನಕಾರರು, ಶರಣ- ಶರಣೆಯರು ವಚನಗಳ ಮೂಲಕ ಮೇಲು ಕೀಳು ಭಾವನೆ ತೊಡೆದು ಹಾಕಿ ಎಲ್ಲರೂ ಸಮನಾರೆಂಬ ಸಂದೇಶ ಸಾರಿದರು. ವಿಶೇಷವಾಗಿ ಮಹಿಳೆಯರಿಗೆ ಸಮಾನತೆ ಕಲ್ಪಿಸಿದರು. ಸಾಮಾಜಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವರು ಸರ್ಕಾರದ ಸವಲತ್ತುಗಳ ಪ್ರಯೋಜನ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಬೇಕು’ ಎಂದು ಆಶಿಸಿದರು.

ಜಿಲ್ಲಾ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್, ಸಮುದಾಯದ ಮುಖಂಡರಾದ ಚಂದ್ರಣ್ಣ, ನಾಗರಾಜ್, ರಾಮಮೂರ್ತಿ, ಅಮರನಾಥ್, ಸತೀಶ್‌ಕುಮಾರ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.