ಶುಕ್ರವಾರ, ಮೇ 14, 2021
32 °C
ರೈತ ಸಂಘಸ ಸದಸ್ಯರ ಆಕ್ರೋಶ

ರಸಗೊಬ್ಬರ ಬೆಲೆ ಹೆಚ್ಚಳ: 16ಕ್ಕೆ ರೈಲು ನಿಲ್ದಾಣಕ್ಕೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಸಗೊಬ್ಬರ ಬೆಲೆ ಹೆಚ್ಚಳ ಖಂಡಿಸಿ ಜಿಲ್ಲೆಯ ಬಂಗಾರಪೇಟೆ ರೈಲು ನಿಲ್ದಾಣಕ್ಕೆ ಏ.16ರಂದು ಮುತ್ತಿಗೆ ಹಾಕಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಿರ್ಧರಿಸಿದರು.

ಇಲ್ಲಿ ಶುಕ್ರವಾರ ನಡೆದ ಸಂಘದ ಸಭೆಯಲ್ಲಿ ಸದಸ್ಯರು, ‘50 ಕೆ.ಜಿ ಗೊಬ್ಬರಕ್ಕೆ ಏಕಾಏಕಿ ₹ 700 ಏರಿಕೆಯಾಗಿದೆ. ಕೇಂದ್ರ ಸರ್ಕಾರವು ಗೊಬ್ಬರದ ಬೆಲೆ ಹೆಚ್ಚಿಸುವ ಮೂಲಕ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಿ ಆಹಾರ ಭದ್ರತೆಗೆ ಸಂಚಕಾರ ತರುತ್ತಿದೆ. ಕೇಂದ್ರವು ಕೃಷಿ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದಿನ ವರ್ಷ ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ರೈತರು ಸಾಕಷ್ಟು ಅನುಭವಿಸಿದ್ದಾರೆ. ಇದೀಗ ಕೋವಿಡ್‌ ಎರಡನೇ ಅಲೆ ಆತಂಕ ಎದುರಾಗಿದ್ದು, ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಗಾಯದ ಮೇಲೆ ಬರೆ ಎಳೆದಂತೆ ಗೊಬ್ಬರದ ಬೆಲೆ ಹೆಚ್ಚಿಸಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ತೈಲೋತ್ಪನ್ನಗಳು ಹಾಗೂ ಕೃಷಿ ಸಲಕರಣೆಗಳ ಬೆಲೆ ಈಗಾಗಲೇ ಗಗನಕ್ಕೇರಿವೆ. ಇದರಿಂದ ರೈತರಿಗೆ ಕೃಷಿ ನಿರ್ವಹಣೆ ಕಷ್ಟವಾಗಿದೆ. ಮತ್ತೊಂದೆಡೆ ಆಹಾರ ಪದಾರ್ಥಗಳು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ರೈತರ ಮೇಲೆ ಕೇಂದ್ರವು ಗದಾಪ್ರಹಾರ ನಡೆಸುತ್ತಿದೆ’ ಎಂದು ಕಿಡಿಕಾರಿದರು.

‘ಸರ್ಕಾರ ರೈತರ ನೆರವಿಗೆ ಧಾವಿಸುವುದನ್ನು ಬಿಟ್ಟು ರಸಗೊಬ್ಬರಗಳ ಬೆಲೆ ಏರಿಕೆ ಮಾಡಿರುವುದು ನಾಚಿಕೆಗೇಡು. ದೇಶದ ಅತಿ ದೊಡ್ಡ ರಸಗೊಬ್ಬರ ಮಾರಾಟ ಸಂಸ್ಥೆಯಾದ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೋ) ಏ.1ರಿಂದಲೇ ಅನ್ವಯವಾಗುವಂತೆ ಹೊಸ ದರ ಜಾರಿಗೊಳಿಸಿರುವ ಖಂಡನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೊಡ್ಡ ಸವಾಲು: ‘₹ 1,175 ಇದ್ದ 10:26:26 ರಸಗೊಬ್ಬರದ ಬೆಲೆ ಈಗ ₹ 1,775ಗೆ ಏರಿಕೆಯಾಗಿದೆ. 12:32:16 ರಸಗೊಬ್ಬರದ ಬೆಲೆ ₹ 1,185ರಿಂದ ₹ 1,800ಕ್ಕೆ ಜಿಗಿದಿದೆ. 20:20:0:13 ರಸಗೊಬ್ಬರದ ಬೆಲೆ ₹ 925ರಿಂದ ₹ 1,350ಕ್ಕೆ ಹೆಚ್ಚಳವಾಗಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌ ಹೇಳಿದರು.

‘ಬೇಸಿಗೆ ಕಾಲ ಆರಂಭವಾಗಿದ್ದು, ಲೋಡ್ ಶೆಡ್ಡಿಂಗ್, ರೋಗ ಬಾಧೆ ಸೇರಿದಂತೆ ಸಮಸ್ಯೆಗಳಿಂದ ರೈತರಿಗೆ ಬೆಳೆ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ನೀರಿನ ಕೊರತೆಯ ನಡುವೆಯೂ ರೈತರು ಬಡ್ಡಿ ಸಾಲ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ರಸಗೊಬ್ಬರಗಳ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರಕ್ಕೆ ರೈತರ ಸಂಕಷ್ಟದ ಅರಿವಿಲ್ಲ’ ಎಂದು ಆರೋಪಿಸಿದರು.

ಸಂಘಟನೆಯ ರಾಜ್ಯ ಘಟಕದ ಸಂಚಾಲಕ ನಾಗರಾಜಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್, ಸದಸ್ಯರಾದ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು