ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳಬಾಗಿಲು: ಇಕ್ಕಟ್ಟಾದ ಬಸ್ ನಿಲ್ದಾಣ, ಸಂಚಾರ ದಟ್ಟಣೆ

Published 28 ಫೆಬ್ರುವರಿ 2024, 5:21 IST
Last Updated 28 ಫೆಬ್ರುವರಿ 2024, 5:21 IST
ಅಕ್ಷರ ಗಾತ್ರ

ಮುಳಬಾಗಿಲು: ಮುಳಬಾಗಿಲು ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿ ವರ್ಷಗಳಾಗಿವೆ. ಆದರೂ ತಾಲ್ಲೂಕು ಕೇಂದ್ರದಲ್ಲಿ ಸೂಕ್ತ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ ಎಂಬುದಕ್ಕೆ ಇಲ್ಲಿನ ಬಸ್‌ ನಿಲ್ದಾಣವೇ ಉದಾಹರಣೆ. 

ದಿನದಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ನಿಲ್ದಾಣವು ಕಿರಿದಾಗಿದ್ದು, ಇಕ್ಕಟ್ಟಿನಲ್ಲಿಯೇ ಬಸ್‌ಗಳು ಓಡಾಡುವಂತಾಗಿವೆ.

ತಹಶೀಲ್ದಾರ್ ಕಚೇರಿಯ ಮಾರ್ಗದಲ್ಲಿ 9 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಸರ್ಕಾರಿ ಬಸ್ ನಿಲ್ದಾಣವು ಒಂದು ಎಕರೆ ಪ್ರದೇಶದಲ್ಲಿದೆ. ಆದರೆ, ಬಸ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಈ ನಿಲ್ದಾಣದಲ್ಲಿ ಬಸ್‌ಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸರಾಗವಾಗಿ ಚಲಿಸಲು ಆಗುತ್ತಿಲ್ಲ. 

ಚಿತ್ರನಟ ಅಂಬರೀಷ್ ಅವರು ಶಾಸಕರಾಗಿದ್ದಾಗ ಅಂದಿನ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮುಳಬಾಗಿಲಿಗೆ ಬಸ್‌ ನಿಲ್ದಾಣ ಮಂಜೂರಾಗಿತ್ತು. ತಾಲ್ಲೂಕಿನ ಮೂಲೆಮೂಲೆಗಳಿಗೆ, ರಾಜ್ಯ ಹಾಗೂ ನೆರೆಯ ರಾಜ್ಯಗಳಿಗೆ ಮುಳಬಾಗಿಲು ಮೂಲಕ ಬಸ್ ಸಂಚಾರ ಹೆಚ್ಚಳವಾದಂತೆಲ್ಲಾ ಬಸ್‌ಗಳು ಇದೇ ನಿಲ್ದಾಣದ ಮೂಲಕ ಸಂಚರಿಸಬೇಕಿದೆ. ಇದರಿಂದ ನಿಲ್ದಾಣದಲ್ಲಿ ನಿಲ್ಲಿಸಬೇಕಾದ ಬಸ್‌ಗಳು ನಾನಾ ಕಡೆಗಳಿಗೆ ಹೋಗಿ ಬರಲು ರಸ್ತೆಗಳಲ್ಲಿ ನಿಲ್ಲಿಸಬೇಕಾಗಿದೆ.

ನಿಲ್ದಾಣದ 83 ಶೆಡ್ಯೂಲ್‌ಗಳಲ್ಲಿ ಸುಮಾರು 105 ಬಸ್‌ಗಳು ನೆರೆಯ ಗೋವಾ, ಆಂಧ್ರಪ್ರದೇಶದ  ತಿರುಪತಿ, ತಿರುತ್ತಣಿ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಮಂತ್ರಾಲಯ ಹಾಗೂ ತಾಲ್ಲೂಕಿನ ನೂರಾರು ಗ್ರಾಮಗಳಿಗೆ ಪ್ರತಿನಿತ್ಯ ಬಸ್‌ಗಳು ಸಂಚರಿಸುತ್ತವೆ. ದೂರದ ಊರುಗಳಿಗೆ ಹೋಗಿ ಬರುವ ಬಸ್‌ಗಳನ್ನು ಎರಡು ದಿನಕ್ಕೊಮ್ಮೆ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತದೆ.  ಸ್ಥಳೀಯವಾಗಿ ಕೋಲಾರ, ಬೆಂಗಳೂರು, ಕೆಜಿಎಫ್, ಶ್ರೀನಿವಾಸಪುರ, ಮಾಲೂರು, ಚಿಂತಾಮಣಿ, ಚಿಕ್ಕಬಳ್ಳಾಪುರ ಹಾಗೂ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಬಸ್‌ಗಳು ಕೂಡಾ ಪ್ರತಿದಿನ ಇದೇ ಬಸ್‌ ನಿಲ್ದಾಣಕ್ಕೆ ಬಂದೇ ಹೋಗಬೇಕು. ಹೀಗಾಗಿ ಎರಡು ಮೂರು ಬಸ್‌ಗಳು ಏಕಕಾಲದಲ್ಲಿ ನಿಲ್ದಾಣಕ್ಕೆ ಬಂದರೆ ಸಂಚಾರ ದಟ್ಟಣೆ ಆಗುತ್ತದೆ. ಬಸ್‌ಗಳು ಕನಿಷ್ಠ ತಿರುವು ಪಡೆಯಲೂ ಆಗುವುದಿಲ್ಲ.

ಕುರುಡುಮಲೆ, ಆವಣಿ, ಶ್ರೀನಿವಾಸಪುರ, ಗೂಕುಂಟೆ, ಉತ್ತನೂರು, ಮುಂತಾದ ಕಡೆಗಳಿಗೆ ಹೋಗುವ ಬಸ್‌ಗಳು ಮಾತ್ರ ನಿಲ್ದಾಣದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ದರೆ, ಉಳಿದಂತೆ ಸ್ಥಳಾವಕಾಶದ ಕೊರತೆಯಿಂದ ನಿಲ್ದಾಣ ಸಮೀಪದ ರಸ್ತೆಗಳಲ್ಲಿ ನಿಲ್ಲಿಸುವ ಪರಿಸ್ಥಿತಿ ಉಂಟಾಗಿದೆ. 

ತಾಲ್ಲೂಕಿನ ತಾಯಲೂರು, ಹೆಬ್ಬಣಿ, ಕೆಜಿಎಫ್, ಬೇತಮಂಗಲ, ಆಂಧ್ರಪ್ರದೇಶದ ಪುಂಗನೂರು, ಬೋಯಕೊಂಡ ಮುಂತಾದ ಕಡೆಗಳಿಗೆ ಸಂಚರಿಸುವ ಬಸ್‌ಗಳು ನಿಲ್ದಾಣದ ಮುಖ್ಯ ದ್ವಾರದ ಬಳಿ ನಿಲ್ಲಿಸಿದರೆ, ಕೋಲಾರ ಬೆಂಗಳೂರು ಕಡೆಗೆ ಹೋಗುವ ಬಸ್‌ಗಳನ್ನು ಗಡಿ ಭವನದ ಮುಂಭಾಗದಲ್ಲಿ, ನಂಗಲಿ, ಆಂಧ್ರಪ್ರದೇಶದ ತಿರುಪತಿ, ಕಾಳಹಸ್ತಿ ಹಾಗೂ ತಮಿಳುನಾಡಿನ ಚೆನ್ನೈ ಕಡೆಗೆ ಹೋಗುವ ಬಸ್‌ಗಳನ್ನು ಕೆಇಬಿ ವೃತ್ತದಲ್ಲಿ ನಿಲ್ಲಿಸಲಾಗುತ್ತದೆ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯ ವಾಸಿ ಸುಬ್ರಮಣಿ ಹೇಳಿದರು.

ಖಾಸಗಿ ಬಸ್‌ಗಳಿಗಿಲ್ಲ ನಿಲ್ದಾಣ: ಪಟ್ಟಣದಲ್ಲಿ ಖಾಸಗಿ ಬಸ್‌ಗಳಿಗೆ ನಿಲ್ದಾಣವೇ ಇಲ್ಲ. ಇದರಿಂಧ ನಗರದ ನಾಲ್ಕು ಕಡೆಗಳಲ್ಲೂ ರಸ್ತೆಗಳಲ್ಲಿಯೇ ನಿಲ್ಲಿಸಿರುತ್ತಾರೆ. ಹೀಗಾಗಿ, ಖಾಸಗಿ ಬಸ್ ನಿಲ್ದಾಣ ನಿರ್ಮಿಸಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.  

ಹಿರಿದಾದ ಬಸ್ ನಿಲ್ದಾಣ ಇಲ್ಲದೆ ಇರುವ ಕಾರಣದಿಂದ ರಾಜ್ಯ ರಸ್ತೆ ಬಸ್ಸುಗಳು ರಸ್ತೆಯಲ್ಲಿ ನಿಲ್ಲಿಸಿದ್ದರೆ ಖಾಸಗೀ ಬಸ್ಸುಗಳು ಖಾಯಂ ಆಗಿ ರಸ್ತೆಗಳಲ್ಲಿ ನಿಲ್ಲುತ್ತಿವೆ ಖಾಸಗೀ ಬಸ್ಸುಗಳಿಗೆ ಖಾಯಂ ಬಸ್ ನಿಲ್ದಾಣ
ಹಿರಿದಾದ ಬಸ್ ನಿಲ್ದಾಣ ಇಲ್ಲದೆ ಇರುವ ಕಾರಣದಿಂದ ರಾಜ್ಯ ರಸ್ತೆ ಬಸ್ಸುಗಳು ರಸ್ತೆಯಲ್ಲಿ ನಿಲ್ಲಿಸಿದ್ದರೆ ಖಾಸಗೀ ಬಸ್ಸುಗಳು ಖಾಯಂ ಆಗಿ ರಸ್ತೆಗಳಲ್ಲಿ ನಿಲ್ಲುತ್ತಿವೆ ಖಾಸಗೀ ಬಸ್ಸುಗಳಿಗೆ ಖಾಯಂ ಬಸ್ ನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT