ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಧಾನ ಹಣ್ಣಿನ ತಳಿ ಭವಿಷ್ಯದ ಬೆಳೆ

ತೋಟಗಾರಿಕೆ ವಿಜ್ಞಾನ ವಿ.ವಿ ಉಪಕುಲಪತಿ ಇಂದರೇಶ್ ಅಭಿಪ್ರಾಯ
Last Updated 13 ಸೆಪ್ಟೆಂಬರ್ 2019, 14:56 IST
ಅಕ್ಷರ ಗಾತ್ರ

ಕೋಲಾರ: ‘ಅಪ್ರಧಾನ ಹಣ್ಣಿನ ತಳಿಗಳು ಭವಿಷ್ಯದ ಬೆಳೆಗಳಾಗಿದ್ದು, ಅವುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ಉತ್ತಮ ಲಾಭ ಪಡೆಯಬಹುದು’ ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎಂ.ಇಂದರೇಶ್ ಅಭಿಪ್ರಾಯಪಟ್ಟರು.

ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ರಫ್ತು ನಿಗಮದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಪ್ರಧಾನ ಹಣ್ಣಿನ ಬೆಳೆಗಳ ಭವಿಷ್ಯ ಹಾಗೂ ಸಂಸ್ಕರಣೆ, ಮೌಲ್ಯವರ್ಧನೆಯ ಅನ್ವೇಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಅಪ್ರಧಾನ ಹಣ್ಣುಗಳು ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸಲಾಗಿದೆ. ಆದರೆ, ಈ ಹಣ್ಣುಗಳು ಹೇರಳವಾದ ಪೌಷ್ಟಿಕಾಂಶ ಮತ್ತು ಔಷಧೀಯ ಗುಣ ಹೊಂದಿವೆ. ಪ್ರಮುಖವಾಗಿ ಹಲಸು, ಸೀಬೆ, ನೇರಳೆ, ಹುಣಸೆ, ಬೇಲದ ಹಣ್ಣು, ಆಮ್ಲ ಹಣ್ಣು, ನೆಲ್ಲಿಕಾಯಿ, ರಾಮಫಲ, ಸೀತಾಫಲ, ಲಕ್ಷ್ಮಣಫಲ, ಹನುಮಂತಫಲ ಹಣ್ಣುಗಳು ಭವಿಷ್ಯದ ಬೆಳೆಗಳಾಗಿವೆ’ ಎಂದು ಕಿವಿಮಾತು ಹೇಳಿದರು.

‘ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದಿಂದ ಅಪ್ರಧಾನ ಹಣ್ಣಿನ ಸಸಿಗಳನ್ನು ಕಸಿ ಮಾಡಿ ರೈತರಿಗೆ ಪರಿಚಯಿಸಲಾಗುತ್ತಿದೆ. ಇವುಗಳ ಮೌಲ್ಯವರ್ಧನೆ, ಸಂಸ್ಕರಣೆ, ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿ ನೀಡಲಾಗುತ್ತಿದೆ. ವ್ಯವಸ್ಥಿತವಾಗಿ ಬೆಳೆ ಬೆಳೆದರೆ ಹೆಚ್ಚು ಲಾಭ ಗಳಿಸಬಹುದು’ ಎಂದು ಸಲಹೆ ನೀಡಿದರು.

ಹಲಸು ಪ್ರವಾಸೋದ್ಯಮ: ‘ಟಮಕದಲ್ಲಿನ ಹಲಸು ಕ್ಷೇತ್ರವು ದೇಶದಲ್ಲೇ ಅತಿ ದೊಡ್ಡದಾದ ಮತ್ತು ಅಪರೂಪದ ತಳಿಗಳನ್ನು ಹೊಂದಿರುವ ಏಕೈಕ ಹಲಸು ಕ್ಷೇತ್ರವಾಗಿದೆ. ಇಲ್ಲಿ ಹಲಸು ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಸೌಲಭ್ಯ ಕಲ್ಪಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭರವಸೆ ನೀಡಿದರು.

ಬೆಳವಣಿಗೆ ಕುಂಠಿತ: ‘ಪ್ರತಿನಿತ್ಯ ಒಂದೇ ಬಗೆಯ ಆಹಾರ, ಹಣ್ಣು, ತರಕಾರಿ ಸೇವನೆಯಿಂದ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಹೆಣ್ಣು ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಹಾರ ಔಷಧಿ ಆಗಬೇಕು, ಔಷಧಿಯೇ ಆಹಾರ ಆಗಬಾರದು’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಎಸ್.ಬಿ.ದಂಡಿನ ಹೇಳಿದರು.

‘ಭೂಮಿಯಲ್ಲಿ ಸುಮಾರು 30 ಸಾವಿರ ಬಗೆಯ ಹಣ್ಣು, ಕಾಯಿಗಳಿವೆ. 7 ಸಾವಿರಕ್ಕೂ ಹೆಚ್ಚು ಹಣ್ಣುಗಳನ್ನು ಆಹಾರವಾಗಿ ಬಳಸಬಹುದು ಎಂದು ಗುರುತಿಸಲಾಗಿದೆ. 150 ಹಣ್ಣು, ಕಾಯಿಗಳನ್ನು ವಾಣಿಜ್ಯ ಕೃಷಿಯಾಗಿ ಬೆಳೆಸಬಹುದು. ಈ ನಿಟ್ಟಿನಲ್ಲಿ ತೋಟಗಾರಿಕೆ ವಿ.ವಿಯು ಅಪ್ರಧಾನ ಹಣ್ಣುಗಳನ್ನು ರೈತರಿಗೆ ಪರಿಚಯಿಸುತ್ತಿದೆ’ ಎಂದು ವಿವರಿಸಿದರು.

‘ಹವಾಮಾನ ವೈಪರಿತ್ಯದಿಂದ ಪ್ರಧಾನ ಹಣ್ಣು ಬೆಳೆಯುವುದು ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಪ್ರಧಾನ ಹಣ್ಣಿನ ಬೆಳೆಗಳು ಮಳೆಯಾಶ್ರಿತ ಪ್ರದೇಶಕ್ಕೆ ಮತ್ತು ಒಣ ಬೇಸಾಯಕ್ಕೆ ಸೂಕ್ತ. ಜಿಲ್ಲೆಯು ಮಳೆ ನೆರಳು ಪ್ರದೇಶವಾಗಿದೆ. ಜತೆಗೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಹಲಸು, ನೆಲ್ಲಿಕಾಯಿ, ಸೀತಾಫಲ, ಬೆಲವತ್ತಾ ಮತ್ತು ನೇರಳೆ ಬೆಳೆಯುವುದು ಸೂಕ್ತ’ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ವಿಜ್ಞಾನಗಳ ವಿ.ವಿ ಸಹ ವಿಸ್ತರಣಾ ನಿರ್ದೇಶಕ ವಿಷ್ಣುವರ್ಧನ್, ದಾವಣಗೆರೆ ಜಿಲ್ಲೆ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ವಿಶ್ವನಾಥ್, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಎಂ.ಗಾಯಿತ್ರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ವಲಯ) ದೇವರಾಜ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ತುಳಸಿರಾಂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT