ಗುರುವಾರ , ನವೆಂಬರ್ 21, 2019
20 °C
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಬಾವಾ ಸೂಚನೆ

ಉರ್ದು ಶಾಲೆ: ಶಿಕ್ಷಕರ ಕೊರತೆ ನೀಗಿಸಿ

Published:
Updated:
Prajavani

ಕೋಲಾರ: ‘ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಅಲ್ಪಸಂಖ್ಯಾತ ಸಮುದಾಯ ಅಭಿವೃದ್ಧಿಪಡಿಸಿ’ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಗುರುವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ದಾಖಲಾತಿ ಆಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ. ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ’ ಎಂದು ಆದೇಶಿಸಿದರು.

‘ಕಡಿಮೆ ಅಂತರದಲ್ಲಿ ಮೂರ್ನಾಲ್ಕು ಉರ್ದು ಶಾಲೆಗಳಿವೆ. ಈ ಪೈಕಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಿದೆ. ಅಂತಹ ಶಾಲೆಗಳನ್ನು ಮತ್ತೊಂದು ಶಾಲೆಯಲ್ಲಿ ವಿಲೀನಗೊಳಿಸಿ. ಇದರಿಂದ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಕರ ಕೊರತೆ ನೀಗಿಸಬಹುದು’ ಎಂದು ಹೇಳಿದರು.

‘10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಉರ್ದು ಶಾಲೆಗಳಲ್ಲಿ ಒಬ್ಬರೇ ಕನ್ನಡ ಅಥವಾ ಉರ್ದು ಶಿಕ್ಷಕರಿದ್ದಾರೆ. ಹೀಗಾಗಿ ಕನ್ನಡ ಮತ್ತು ಉರ್ದು ಭಾಷೆಯನ್ನು ಸರಿಯಾಗಿ ಬೋಧಿಸಲು ಆಗುತ್ತಿಲ್ಲ. 10ಕ್ಕಿಂತ ಕಡಿಮೆ ಮಕ್ಕಳಿದ್ದರೂ ಪ್ರತ್ಯೇಕ ಕನ್ನಡ ಮತ್ತು ಉರ್ದು ಶಿಕ್ಷಕರನ್ನು ನೇಮಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.

ಹುದ್ದೆ ಭರ್ತಿ: ‘ಜಿಲ್ಲೆಯಲ್ಲಿ 2,061 ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ ಭರ್ತಿಗೆ ಜಾಹೀರಾತು ನೀಡಲಾಗಿದೆ. ಬೇಟಿ ಪಡಾವೋ ಬೇಟಿ ಬಜಾವೋ ಅರಿವು ಕಾರ್ಯಕ್ರಮದ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಗೆ ಜಾಗೃತಿ ಮೂಡಿಸಲಾಗುತ್ತಿದೆ. 165 ಉರ್ದು ಶಾಲೆಗಳಿದ್ದು, 42 ಸಾವಿರ ಮಕ್ಕಳು ಓದುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಶೇ 70ರಷ್ಟು ಮಕ್ಕಳು ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಕೌಶಲ ಯೋಜನೆಯಡಿ ಯುವಕ ಯುವತಿಯರಿಗೆ ತಾಂತ್ರಿಕ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿವೇತನ: ‘ಅಲ್ಪಸಂಖ್ಯಾತ ಸಮುದಾಯದ 6,775 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ. 226 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಪ್ರೋತ್ಸಾಹಧನ ನೀಡಲಾಗಿದೆ. 67 ವಿದ್ಯಾರ್ಥಿಗಳಿಗೆ ನರ್ಸಿಂಗ್ ತರಬೇತಿ ನೀಡಲಾಗಿದ್ದು, 150 ವಿದ್ಯಾರ್ಥಿಗಳಿಗೆ ಬಿಇಡಿ ಮತ್ತು ಡಿಇಡಿ ಕೋರ್ಸ್‌ಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ಅಲ್ಪಸಂಖ್ಯಾತರ 6 ವಿದ್ಯಾರ್ಥಿನಿಲಯಗಳಿಗೆ ಮೂಲಸೌಲಭ್ಯ ಕಲ್ಪಿಸಲಾಗಿದೆ’ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ ಹೇಳಿದರು.

ಸಂಸದ ಎಸ್.ಮುನಿಸ್ವಾಮಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ಅನಿಸ್ ಸಿರಾಜ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಜಿ.ಪಂ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)