ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಮೈದಾನದಲ್ಲಿ ತರಕಾರಿ ವಹಿವಾಟು

ಕೋವಿಡ್‌–19 ಭೀತಿ: ಚನ್ನಯ್ಯ ಸಂತೆ ಮೈದಾನದ ಅಂಗಡಿಗಳ ತಾತ್ಕಾಲಿಕ ಸ್ಥಳಾಂತರ
Last Updated 28 ಮಾರ್ಚ್ 2020, 15:57 IST
ಅಕ್ಷರ ಗಾತ್ರ

ಕೋಲಾರ: ‘ನಗರದ ಟಿ.ಚನ್ನಯ್ಯ ಸಂತೆ ಮೈದಾನದಲ್ಲಿನ ತರಕಾರಿ ಅಂಗಡಿಗಳ ಮುಂದೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡುತ್ತಿರುವುದರಿಂದ ಅಂಗಡಿಗಳನ್ನು ಭಾನುವಾರ (ಮಾರ್ಚ್‌ 29) ತಾತ್ಕಾಲಿಕವಾಗಿ ಜೂನಿಯರ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗುತ್ತದೆ’ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ತಿಳಿಸಿದರು.

ಟಿ.ಚನ್ನಯ್ಯ ಸಂತೆ ಮೈದಾನದಲ್ಲಿನ ತರಕಾರಿ ವ್ಯಾಪಾರಿಗಳೊಂದಿಗೆ ಇಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿ, ‘ಕೊರೊನ ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶದಲ್ಲಿ ದಿಗ್ಬಂಧನವಿದೆ. ದಿನನಿತ್ಯದ ಬಳಕೆಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿದ್ದು, ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ತರಕಾರಿ ವಹಿವಾಟಿ ಸ್ಥಳವನ್ನು ಸ್ಥಳಾಂತರ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಮೈದಾನದಲ್ಲಿ ಪ್ರತಿನಿತ್ಯ ಬೆಳಗಿನ ಜಾವ 5 ಗಂಟೆಯಿಂದ 10 ಗಂಟೆವರೆಗೆ ತರಕಾರಿ ವಹಿವಾಟು ನಡೆಸಬಹುದು. ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಅರಿವು ಮೂಡಿಸಿದರೂ ಜನ ಅರ್ಥ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ಮಾಡಿದ್ದು, ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

‘ಚನ್ನಯ್ಯ ಸಂತೆ ಮೈದಾನದಲ್ಲಿ ಭಾನುವಾರದಿಂದ ಯಾವುದೇ ವ್ಯಾಪಾರಿಗಳು ವಹಿವಾಟು ನಡೆಸಬಾರದು. ಅಲ್ಲಿನ ಪ್ರವೇಶದ್ವಾರಗಳನ್ನು ಬಂದ್‌ ಮಾಡುತ್ತೇವೆ. ಅಲ್ಲಿಗೆ ಬರುವ ವ್ಯಾಪಾರಿಗಳನ್ನು ಕಾಲೇಜು ಮೈದಾನಕ್ಕೆ ಕಳುಹಿಸಬೇಕು. ನಗರಸಭೆ ಆರೋಗ್ಯ ನಿರೀಕ್ಷರು, ಮೇಸ್ತ್ರಿಗಳು ಈ ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ಗಂಭೀರತೆ ಅರಿಯುತ್ತಿಲ್ಲ

‘ಜನರು ಭಯಾನಕ ಕೊರೊನಾ ಸೋಂಕಿನ ಗಂಭೀರತೆ ಅರಿಯುತ್ತಿಲ್ಲ. ನಗರದಲ್ಲಿ ಕೆಲ ಮಂದಿ ಅನವಶ್ಯಕವಾಗಿ ಓಡಾಡುತ್ತಿರುತ್ತಾರೆ. ಪೊಲೀಸರು ಅಂತಹವರಿಗೆ ತಡೆಯೊಡ್ಡಿದ್ದಾರೆ ಟೀಕಿಸುತ್ತಾರೆ’ ಎಂದು ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ರಂಗಶಾಮಯ್ಯ ಬೇಸರ ವ್ಯಕ್ತಪಡಿಸಿದರು.

‘ತರಕಾರಿ ಅಂಗಡಿಗಳ ಮುಂದೆ ಜನ ಗುಂಪುಗುಂಪಾಗಿ ನಿಂತಿರುತ್ತಾರೆ. ಅಲ್ಲದೇ, ನಸುಕಿನಲ್ಲಿ ಗುಂಪು ಕಟ್ಟಿಕೊಂಡು ವ್ಯಾಯಾಮ, ವಾಯುವಿಹಾರಕ್ಕೆ ಹೋಗುತ್ತಾರೆ. ದಿಗ್ಬಂಧನ ಆದೇಶದ ನಡುವೆಯೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದೇವೆ. ಆದರೆ, ಜನರು ಈ ಅವಕಾಶ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಗರಸಭೆ ಸಿಬ್ಬಂದಿ ಕಡ್ಡಾಯವಾಗಿ ಸಮವವಸ್ತ್ರ ಧರಿಸಬೇಕು. ಜತೆಗೆ ಪೊಲೀಸ್ ಇಲಾಖೆಯ ಪಾಸ್ ಪಡೆಯಬೇಕು. ಈ ಪಾಸ್‌ಗಳನ್ನು ದುರ್ಬಳಕೆ ಮಾಡಿಕೊಂಡರೆ ವಾಹನ ಮತ್ತು ಪಾಸ್‌ ಜಪ್ತಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತೀವ್ರ ಸಮಸ್ಯೆ

‘ಈ ಕ್ಷಣದಿಂದಲೇ ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ. ಜನರು ಅನವಶ್ಯಕವಾಗಿ ನಗರದಲ್ಲಿ ಸಂಚರಿಸುತ್ತಿರುತ್ತಾರೆ. ಅವರಿಗೆ ಬುದ್ಧಿ ಹೇಳಿ ಮನೆಗೆ ವಾಪಸ್ ಕಳುಹಿಸಬೇಕು. ಗ್ರಾಮೀಣ ಭಾಗದಿಂದ ಕೆಲಸಕ್ಕೆ ಬರುವ ಟ್ಯಾಂಕರ್‌ ಚಾಲಕರಿಗೆ ಪೊಲೀಸರು ತೊಂದರೆ ಮಾಡಬಾರದು’ ಎಂದು ಶ್ರೀಕಾಂತ್‌ ತಿಳಿಸಿದರು.

ಗಲ್‌ಪೇಟ್‌ ಠಾಣೆ ಎಸ್‍ಐ ವೇದಾ, ನಗರಸಭೆ ಕಂದಾಯ ನಿರೀಕ್ಷಕ ಸಿ.ತ್ಯಾಗರಾಜ್, ಆರೋಗ್ಯ ನಿರೀಕ್ಷಕರಾದ ದೀಪಾ, ಮರಿಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT