ಮಾಲೂರು: ಇತಿಹಾಸ ಪ್ರಸಿದ್ಧ ಯಾತ್ರಾ ಸ್ಥಳವಾದ ತಾಲ್ಲೂಕಿನ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇಗುಲದಲ್ಲಿ ಶ್ರಾವಣ ಮಾಸದ ಎರಡನೇ ಶನಿವಾರ ದೇವರ ದರ್ಶನಕ್ಕಾಗಿ ಅಪಾರ ಭಕ್ತ ಸಮೂಹ ಹರಿದು ಬಂದಿತ್ತು.
ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಹೂವಿನ ವ್ಯಾಪರಿಗಳಿಂದ ದೇವಾಲಯ ಸುತ್ತಲು ವಿಶೇಷ ಹೂವಿನ ಅಲಂಕಾರ ವ್ಯವಸ್ಥೆ ಮಾಡಲಾಗಿತ್ತು.
ಶ್ರಾವಣ ಮಾಸದ ಎರಡನೇ ಶನಿವಾರದಲ್ಲಿ ದೇವರ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳು ಸೇರಿದಂತೆ ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
ಹೊಸಕೋಟೆ, ಸರ್ಜಾಪುರ, ಆನೇಕಲ್ ಮತ್ತು ಬೇರಿಕೈಯಿಂದ ಕಾಲ್ನಡಿಗೆಯಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಮುಡಿ ಅರ್ಪಿಸಿದ ಭಕ್ತರಿಗೆ ಸ್ನಾನದ ವ್ಯವಸ್ಥೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಚಿಕ್ಕತಿರುಪತಿ ಪಂಚಾಯಿತಿ ವ್ಯಾಪ್ತಿಯ ಬಲಿಜ ಸಂಘದಿಂದ ಕೈವಾರ ನಾರೇಯಣ ತಾತಯ್ಯ ಅವರ ಹೆಸರಿನಲ್ಲಿ ಸುಮಂಗಲಿಯರಿಗೆ ಬಳೆ ಸೇವೆ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಕೆ.ವೈ.ನಂಜೇಗೌಡ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಸಂಜೀವಪ್ಫ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಂದ್ರ ಗೋಪಾಲ್ ಸೇರಿದಂತೆ ಮತ್ತಿತರರು ದರ್ಶನ ಪಡೆದರು.
ಪೋಲಿಸ್ ಇಲಾಖೆಯಿಂದ ಭಕ್ತರ ಹಿತದೃಷ್ಟಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿಯ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಎರಡನೇ ಶನಿವಾರದಂದು ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿರುವುದು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿ, ಪೇಷ್ಕಾರ್ ಚಲುವಸ್ವಾಮಿ, ಪೋಲಿಸ್ ಇಲಾಖೆಯ ವೆಂಕೋಬರಾವ್, ಗ್ರಾ.ಪಂ ಆಡಳಿತ ಅಧಿಕಾರಿ ರೂಪೇಂದ್ರ ಸೇರಿದಂತೆ ಮತ್ತಿತರರು ಇದ್ದರು.