8ನೇ ಬಾರಿಯೂ ನನ್ನ ಗೆಲುವು ನಿಶ್ಚಿತ: ಮುನಿಯಪ್ಪ

ಶನಿವಾರ, ಮೇ 25, 2019
32 °C

8ನೇ ಬಾರಿಯೂ ನನ್ನ ಗೆಲುವು ನಿಶ್ಚಿತ: ಮುನಿಯಪ್ಪ

Published:
Updated:

ಕೋಲಾರ: ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಕೆ.ಎಚ್‌.ಮುನಿಯಪ್ಪ ನಗರದಲ್ಲಿ ಗುರುವಾರ ಮತ ಚಲಾಯಿಸುವುದಕ್ಕೂ ಮುನ್ನ ಸಾಯಿ ಬಾಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಪತ್ನಿ ನಾಗರತ್ನಮ್ಮ ಜತೆ ಬೆಳಿಗ್ಗೆ 8.30ರ ಸುಮಾರಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರವಿಡುವ ಉದ್ದೇಶಕ್ಕೆ ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಾಗೂ ಈಗಿನ ಮೈತ್ರಿ ಸರ್ಕಾರ ನೀಡಿರುವ ಜನಪರ ಕಾರ್ಯಕ್ರಮಗಳು ಜನರ ಮನ ಗೆದ್ದಿವೆ. ಹೀಗಾಗಿ ಮತದಾರರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾದ ನಾನು 8ನೇ ಬಾರಿಯೂ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ, ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಗ್ಗೂಡಿ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ. ರಾಜ್ಯದ 28 ಕ್ಷೇತ್ರಗಳ ಪೈಕಿ 7ರಲ್ಲಿ ಜೆಡಿಎಸ್ ಹಾಗೂ ಉಳಿದ 21ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 28 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ’ ಎಂದು ಹೇಳಿದರು.

ಮುನಿಯಪ್ಪರ ಸಂಬಂಧಿ ಕುಮಾರ್ ಅವರ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಹಣ ವಶಪಡಿಸಿಕೊಂಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ದಾಳಿ ಸಂಗತಿ ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದರು.

ರಾಜಕೀಯ ವಿರೋಧಿಗಳು ಕ್ಷೇತ್ರದಲ್ಲಿ ಕರಪತ್ರ ಹಂಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಭಾರತವು ಪ್ರಜಾಪ್ರಭುತ್ವ ರಾಷ್ಟ್ರ. ಹೀಗಾಗಿ ಇಲ್ಲಿ ಯಾರು ಏನು ಬೇಕಾದರೂ ಮಾಡಬಹುದು. ವಿರೋಧಿಗಳ ಕುತಂತ್ರಕ್ಕೆ ಜನರೇ ಮತದಾನದ ಮೂಲಕ ಉತ್ತರ ನೀಡುತ್ತಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !