ಕೋಲಾರ: ‘ನಾಡಿನ ಹೆಮ್ಮೆಯ ಪುತ್ರ ಎಂ.ವಿಶ್ವೇಶ್ವರಯ್ಯ ಅವರಿಗೆ ನಮಿಸೋಣ. ಅವರು ಕಲಿಸಿಕೊಟ್ಟು ಶ್ರಮ, ಪ್ರಾಮಾಣಿಕತೆಯ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದು ರೋಟರಿ ಸೆಂಟ್ರಲ್ ಜಿಲ್ಲಾ ಅಧ್ಯಕ್ಷ ಸಿ.ಎಂ.ಆರ್ ಶ್ರೀನಾಥ್ ಕಿವಿಮಾತು ಹೇಳಿದರು.
ರೋಟರಿ ಸೆಂಟ್ರಲ್ ಮತ್ತು ಭಾರತ ಸೇವಾದಳ ಜಿಲ್ಲಾ ಘಟಕದ ವತಿಯಿಂದ ಇಲ್ಲಿ ಬುಧವಾರ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವೇಶ್ವರಯ್ಯ ಜಯಂತಿಯಲ್ಲಿ ಮಾತನಾಡಿ, ‘ಕರುನಾಡಿನ ಹೆಮ್ಮೆಯ ಪುತ್ರರಾಗಿದ್ದ ವಿಶ್ವೇಶ್ವರಯ್ಯ ದೇಶದ ಶ್ರೇಷ್ಠ ಆಸ್ತಿ. ಭಾರತ ಕಂಡ ಅಪ್ರತಿಮ ಎಂಜಿನಿಯರ್ ಆಗಿದ್ದ ಅವರ ಕೌಶಲ, ದೂರದರ್ಶಿತ್ವದ ಯೋಜನೆಗಳು ಶಾಶ್ವತ’ ಎಂದು ಸ್ಮರಿಸಿದರು.
‘ಈ ನೆಲದ ಸಾಕ್ಷಿಪ್ರಜ್ಞೆಯಾದ ವಿಶ್ವೇಶ್ವರಯ್ಯ ಅವರ ತತ್ವಾದರ್ಶ ಹಾಗೂ ಸಂದೇಶಗಳು ಎಲ್ಲರಿಗೂ ದಾರಿದೀಪ. ಅವರ ಕೊಡುಗೆಯಿಂದ ವಿದೇಶದಲ್ಲೂ ಡ್ಯಾಂಗಳು ನಿರ್ಮಾಣಗೊಂಡಿವೆ. ಅವರು ಮುಂಬೈ ನಗರ ನಿರ್ಮಾಣಕ್ಕೆ ಮೂರು ಯೋಜನೆಗಳನ್ನು ರೂಪಿಸಿದ್ದರು. ಕೆಆರ್ಎಸ್ ಜಲಾಶಯಕ್ಕೆ ಸ್ವಯಂಚಾಲಿತ ಗೇಟ್ ಅಳವಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
‘ಒಬ್ಬ ವ್ಯಕ್ತಿ ಮತ್ತೊಬ್ಬರ ಜೀವನ ರೂಪಿಸಲು ಸಾಧ್ಯವಿಲ್ಲ. ನಮ್ಮ ಮನಸ್ಸು ಮತ್ತು ಸಂತೋಷ ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ತಾವೇ ಯೋಚಿಸಿ ಜೀವನ ರೂಪಿಸಿಕೊಳ್ಳಬೇಕೆಂದು ಹೇಳಿದ ವಿಶ್ವೇಶ್ವರಯ್ಯ ಅವರ ಆದರ್ಶಗಳು ವಿದ್ಯಾರ್ಥಿಗಳ ಮೇಲೆ ಗಾಢ ಪರಿಣಾಮ ಬೀರುತ್ತಿವೆ’ ಎಂದು ಭಾರತ ಸೇವಾದಳ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.
ಎಂಜಿನಿಯರ್‌ಗಳ ಶಿಲ್ಪಿ: ‘ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಮೊದಲು ಆ ಕೆಲಸವನ್ನು ಪ್ರೀತಿಸಬೇಕು. ಎಂಜಿನಿಯರ್‌ಗಳ ಶಿಲ್ಪಿ ಎಂದು ಖ್ಯಾತರಾಗಿದ್ದ ವಿಶ್ವೇಶ್ವರಯ್ಯ ಅವರು ಅವಿಭಜಿತ ಕೋಲಾರ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು.
ರೋಟರಿ ಸೆಂಟ್ರಲ್ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ನಿರ್ದೇಶಕ ಸೋಮಶೇಖರ್, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಕೆ.ಸುನಂದಮ್ಮ, ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.