ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಗಂಭೀರ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪಾಲಿ ಹೇಳಿಕೆ
Last Updated 23 ಜುಲೈ 2019, 20:30 IST
ಅಕ್ಷರ ಗಾತ್ರ

ಕೋಲಾರ: ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ಸಮಸ್ಯೆ ನಿವಾರಣೆಗೆ ಜಲಶಕ್ತಿ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯ ಎಲ್ಲಾ ಅಂಗವಾಡಿ ಕೇಂದ್ರಗಳ ಬಳಿ ಸಸಿ ನೆಡಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಂ.ಜಿ.ಪಾಲಿ ತಿಳಿಸಿದರು.

ಜಲಶಕ್ತಿ ಅಭಿಯಾನದ ಭಾಗವಾಗಿ ಇಲ್ಲಿನ ಅಂಗನವಾಡಿ ಕೇಂದ್ರಗಳ ಆವರಣದಲ್ಲಿ ಮಂಗಳವಾರ ಸಸಿ ನೆಟ್ಟು ಮಾತನಾಡಿ, ‘ಜಿಲ್ಲೆಯ ಪ್ರತಿ ಅಂಗನವಾಡಿ ಕೇಂದ್ರದ ಬಳಿ ಸಸಿಗಳನ್ನು ನೆಡುವಂತೆ ಜಿಲ್ಲಾಧಿಕಾರಿ ಮಾರ್ಗದರ್ಶನ ನೀಡಿದ್ದರು. ಹೀಗಾಗಿ ಪ್ರತಿ ಅಂಗನವಾಡಿ ಕೇಂದ್ರದ ಬಳಿ ಸಸಿ ನೆಟ್ಟು ಪೋಷಣೆ ಮಾಡುತ್ತೇವೆ’ ಎಂದರು.

‘ಜಿಲ್ಲೆಯಲ್ಲಿ 2,061 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 986 ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿವೆ. ಉಳಿದ ಕೇಂದ್ರಗಳು ಸರ್ಕಾರದ ಕಟ್ಟಡ ಹಾಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಈ ಎಲ್ಲಾ ಕೇಂದ್ರಗಳ ಬಳಿ ಖಾಲಿಯಿರುವ ಜಾಗದಲ್ಲಿ ಸಸಿ ನೆಡಲು ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.

‘ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳು ಬಳಿಯೂ ಸಸಿ ನೆಡಲಾಗುತ್ತದೆ. ಅಂಗನವಾಡಿ ಮಕ್ಕಳು, ಅವರ ಪೋಷಕರು, ಗ್ರಾಮ ಪಂಚಾಯಿತಿ ಸದಸ್ಯರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಹಾಗೂ ಗ್ರಾಮದ ಎಲ್ಲಾ ಜನರನ್ನು ಒಗ್ಗೂಡಿಸಿಕೊಂಡು ಪರಿಸರಸ್ನೇಹಿ ಸಸಿಗಳನ್ನು ನೆಡಲಾಗುತ್ತಿದೆ. ಇದರಿಂದ ಅರಣ್ಯ ಸಂಪತ್ತು ವೃದ್ಧಿಯಾಗಲಿದೆ’ ಎಂದು ವಿವರಿಸಿದರು.

‘ಈಗಾಗಲೇ ಬಾರಂಡಹಳ್ಳಿ, ಬೇತಮಂಗಲ, ಶ್ರೀನಿವಾಸಸಂದ್ರ, ಮುಳಬಾಗಿಲು ತಾಲ್ಲೂಕಿನ ಚಿಕ್ಕಪದ್ಮಘಟ್ಟ, ಕನ್ನಸಂದ್ರ, ಎನ್.ವಡ್ಡಹಳ್ಳಿ, ಕೋಗಿಲೇರಿ, ಇರಗಮುತ್ತನಹಳ್ಳಿ, ದೊಡ್ಡಬೇವಹಳ್ಳಿ, ಶಗತ್ತೂರು, ರಮೇಶನಗರ, ಮಾಲೂರು ತಾಲ್ಲೂಕಿನ ಕಲ್ಕೆರೆ, ದೊಮ್ಮಲೂರು, ಬಂಗಾರಪೇಟೆ ಹಾಗೂ ಕೆಜಿಎಫ್‌ನ ಗಣೇಶಪುರ ಸೇರಿದಂತೆ ಸಾಕಷ್ಟು ಅಂಗನವಾಡಿ ಕೇಂದ್ರಗಳಲ್ಲಿ ಸಸಿ ನೆಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮಹತ್ವ ಅರಿಯಿರಿ: ‘ಜಲಶಕ್ತಿ ಅಭಿಯಾನದ ಮೂಲಕ ನೀರಿನ ಸಮಸ್ಯೆ ಬಗ್ಗೆ ಜನರನ್ನು ಜಾಗೃತಗೊಳಿಸಲಾಗುತ್ತಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ತಪ್ಪಿಸಲು ಹಾಗೂ ಉತ್ತಮ ಪರಿಸರ ನಿರ್ಮಿಸಲು ಪ್ರತಿಯೊಬ್ಬರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಇದಕ್ಕಾಗಿ ಸಸಿ ನೆಟ್ಟು ಬೆಳೆಸಬೇಕು’ ಎಂದು ಸಲಹೆ ನೀಡಿದರು.

‘ನೀರಿನ ಮಿತ ಬಳಕೆ ಮತ್ತು ಮಹತ್ವವನ್ನು ಅರಿಯಬೇಕು. ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ವೃದ್ಧಿಯಾದರೆ ಕಾಲಕಾಲಕ್ಕೆ ಉತ್ತಮ ಮಳೆಯಾಗುತ್ತದೆ. ಸರ್ಕಾರಿ ಕಟ್ಟಡಗಳು ಹಾಗೂ ಮನೆಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಬೇಕು. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT