ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಒಳ ಜಗಳ ವಿರೋಧಿಗೆ ಅಸ್ತ್ರ: ಮಂಜುನಾಥ್

ಜೆಡಿಎಸ್‌ ಕಾರ್ಯಕರ್ತರ ಬೃಹತ್ ಸಮಾವೇಶ
Last Updated 10 ಮಾರ್ಚ್ 2023, 5:43 IST
ಅಕ್ಷರ ಗಾತ್ರ

ಮುಳಬಾಗಿಲು: ‘ತಾಲ್ಲೂಕಿನ ಜೆಡಿಎಸ್ ಒಳ ಜಗಳ ಮತ್ತು ಗುಂಪುಗಾರಿಕೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಆದ್ದರಿಂದ ಎಲ್ಲರನ್ನೂ ಕೈ ಕಾಲು ಹಿಡಿದು ಬೇಡಿಕೊಳ್ಳುತ್ತೇನೆ. ಪಕ್ಷ ಸಂಘಟನೆ ಮತ್ತು ಗೆಲುವಿಗೆ ಗುಂಪುಗಾರಿಕೆ ಬಿಟ್ಟು ಎಲ್ಲರೂ ಒಂದಾಗಿ ಕೆಲಸ ಮಾಡೋಣ’ ಎಂದು ಜೆಡಿಎಸ್ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್ ಹೇಳಿದರು.

ನಗರದಲ್ಲಿನಡೆದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

‘ನಾನು ಅಭ್ಯರ್ಥಿಯಾಗಿರುವುದು ಇಷ್ಟವಾಗದಿದ್ದಲ್ಲಿ, ರಾಜಕೀಯದಿಂದ ದೂರ ಸರಿಯಲು ಸಿದ್ದನಿದ್ದೇನೆ. ಆದರೆ ಪಕ್ಷ ಗೆಲ್ಲಬೇಕು. ಹೀಗಾಗಿ ನಮ್ಮಲ್ಲಿನ ಒಳ ಜಗಳದಿಂದ ದೂರ ಉಳಿಯೋಣ’ ಎಂದು ಹೇಳಿದರು.

ತಾಲ್ಲೂಕಿನಲ್ಲಿ 15 ವರ್ಷಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲದಿದ್ದರೂ, ಇಂದಿಗೂ ಪ್ರಬಲವಾಗಿದೆ ಎಂದರು.

‘ನಾನು ರಾಜಕೀಯಕ್ಕೆ ಅನಿರೀಕ್ಷಿತವಾಗಿ ಬಂದೆ. ಆದರೂ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮತದಾರರು ನನಗೆ 67 ಸಾವಿರ ಮತ ಹಾಕಿದ್ದರು. ಅವರ ಋಣ ತೀರಿಸಲು ನಾನು ಐದು ವರ್ಷಗಳಿಂದ ತಾಲ್ಲೂಕು ಬಿಟ್ಟು ಹೋಗಿಲ್ಲ. ಅಧಿಕಾರಕ್ಕಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಮತದಾರರ ಋಣ ತೀರಿಸಲು ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ’ ಎಂದು ಹೇಳಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರೋಧಿಗಳು ಕಾರ್ಯಕರ್ತರು ಮತ್ತು ಮತದಾರರಿಗೆ ಹಣ ಹಾಗೂ ಅಧಿಕಾರ ಆಸೆ ತೋರಿಸಿ ಮತ ಪಡೆದುಕೊಂಡರು. ಆಮಿಷ ನಂಬಿ ಹೋದವರಿಗೆ ಲಾಲಿ ಪಾಪ್ ನೀಡಿದರು ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಟೀಕಿಸಿದರು.

ಜೆಡಿಎಸ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ರಘುಪತಿ ರೆಡ್ಡಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಾಮೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ಮುರಳಿ, ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ವ್.ಶ್ರೀನಿವಾಸರೆಡ್ಡಿ, ಎಂ.ಗೊಲ್ಲಹಳ್ಳಿ ಪ್ರಭಾಕರ್, ವರದಪ್ಪ, ರೆಸಾರ್ಟ್ ಚಂದ್ರು, ಸಿಮೆಂಟ್ ಗೋಪಾಲ್, ಮುನಿಸ್ವಾಮಿ ಗೌಡ, ಬ್ಯಾಟನೂರು ಶ್ರೀನಿವಾಸ್, ಲಕ್ಷ್ಮಿ ಪ್ರಿಯ ಇದ್ದರು.

12ರಿಂದ ನಮ್ಮ ನಡೆ ಪಂಚಾಯಿತಿ ಕಡೆಗೆ: ‘ಮಾರ್ಚ್ 12ರಿಂದ ತಾಲ್ಲೂಕಿನಾದ್ಯಂತ ‘ನಮ್ಮ ನಡೆ ಪಂಚಾಯಿತಿ ಕಡೆಗೆ’ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೇಲೆ ‘ನಮ್ಮ ನಡೆ ನಿಮ್ಮ ಮನೆ ಕಡೆ’ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲಾ ಮತದಾರರನ್ನು ಸಂಪರ್ಕಿಸಲಾಗುವುದು. ಈ ಮೂಲಕ ಮತ ಭಿಕ್ಷೆ ಕೇಳಿ ಪಕ್ಷದ ಗೆಲುವಿಗೆ ಶ್ರಮಿಸಲಾಗುವುದು’ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಹೇಳಿದರು.

ಹೆಬ್ಬಣಿ ಗ್ರಾಮ ಪಂಚಾಯತಿಯಿಂದ ಮಾರ್ಚ್ 12 ರಿಂದ ಪಂಚಾಯತಿ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಬೂತ್ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಳಬಾಗಿಲಿನಲ್ಲಿ 47 ಬೂತ್‌ಗಳಲ್ಲಿಯೂ ಬೂತ್ ಕಮಿಟಿ ರಚಿಸಿ, ಅತಿ ಹೆಚ್ಚು ಮತಗಳ ಅಂತರದಿಂದ ಪಕ್ಷವನ್ನು ಗೆಲ್ಲಿಸಲು ಎಲ್ಲ ಕಾರ್ಯಕರ್ಯರ ಶ್ರಮಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT