ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತಕ್ಕೆ ಹೋದೆ: ದತ್ತಾತ್ರೇಯ ಸ್ವಾಮೀಜಿಯೊಂದಿಗೆ ತೆರಳಿದ್ದ ಯುವತಿಯ ಹೇಳಿಕೆ

ದತ್ತಾತ್ರೇಯ ಅವಧೂತ ಸ್ವಾಮೀಜಿ ಪರಾರಿ ಪ್ರಕರಣಕ್ಕೆ ಹೊಸ ತಿರುವು
Last Updated 6 ಮಾರ್ಚ್ 2020, 9:39 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿಯು ಯುವತಿಯೊಂದಿಗೆ ಪರಾರಿಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸ್ವಾಮೀಜಿಯೇ ತನ್ನನ್ನು ಮರುಳು ಮಾಡಿ ಬಲವಂತದಿಂದ ಕರೆದುಕೊಂಡು ಹೋಗಿದ್ದಾಗಿ ಯುವತಿಯು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ಸ್ವಾಮೀಜಿ ಹಾಗೂ ಯುವತಿಯನ್ನು ಪೊಲೀಸರು ಗುರುವಾರ ಬೆಳಿಗ್ಗೆ ನಗರಕ್ಕೆ ಕರೆತಂದರು. ಪೊಲೀಸ್‌ ಅಧಿಕಾರಿಗಳು ಯುವತಿ ಮತ್ತು ಸ್ವಾಮೀಜಿಯನ್ನು ಪ್ರತ್ಯೇಕ ಠಾಣೆಗಳಲ್ಲಿ ಇರಿಸಿ ಇಡೀ ದಿನ ವಿಚಾರಣೆ ನಡೆಸಿದರು.

ಈ ವೇಳೆ ಯುವತಿಯು, ‘ಪಾದ ಪೂಜೆಗಾಗಿ ಭೀಮಲಿಂಗೇಶ್ವರ ದೇವಾಲಯದ ಮಠಕ್ಕೆ ಹೋಗುತ್ತಿದ್ದ ನನ್ನನ್ನು ಸ್ವಾಮೀಜಿಯು ಪ್ರೀತಿಸುವುದಾಗಿ ನಂಬಿಸಿ ಮೋಡಿಯ ಮಾತನಾಡಿ ಫೆ.27ರಂದು ಜತೆಯಲ್ಲಿ ಕರೆದೊಯ್ದರು. ಸ್ವಾಮೀಜಿ ನನ್ನನ್ನು ಮದುವೆಯಾಗಿಲ್ಲ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಪೊಲೀಸರು ಸ್ವಾಮೀಜಿಯ ಜತೆಗಿದ್ದ ಯುವತಿಯ ಮನವೊಲಿಸಿ ಪೋಷಕರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.

ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ದತ್ತಾತ್ರೇಯ ಅವಧೂತ ಸ್ವಾಮೀಜಿಯು ಮೂಲ ಹೆಸರು ರವೀಂದ್ರ. ಆತ ಬೆಂಗಳೂರಿನ ಕೆ.ಆರ್‌.ಪುರದಲ್ಲಿ ವಿಧವೆಯೊಬ್ಬರನ್ನು ಪ್ರೀತಿಸಿ ನಾಲ್ಕೈದು ವರ್ಷ ಅವರ ಜತೆ ವಾಸವಾಗಿದ್ದ. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ರವೀಂದ್ರ ಹೊಳಲಿ ಗ್ರಾಮದಲ್ಲಿ ಜಮೀನು ಖರೀದಿಸಿ ಗೋಶಾಲೆ ಆರಂಭಿಸುವ ಉದ್ದೇಶ ಹೊಂದಿದ್ದ ಎಂದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ.

ಅಪರಾಧ ಹಿನ್ನೆಲೆ: ಈ ಹಿಂದೆ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಮಠವೊಂದರಲ್ಲಿದ್ದ ರವೀಂದ್ರ ಮಠದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ಹಿರೇಕೆರೂರು ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣವೊಂದರ ಸಮನ್ಸ್‌ ಜಾರಿ ಮಾಡಲು ಹೋಗಿದ್ದ ಹಿರೇಕೆರೂರು ಠಾಣೆ ಪೊಲೀಸರು ಮೇಲೆ ಆತ ಹಲ್ಲೆಗೆ ಯತ್ನಿಸಿ ಸಮನ್ಸ್‌ನ ಪ್ರತಿ ಹರಿದಿದ್ದ. ಈ ಬಗ್ಗೆ ಮತ್ತೊಂದು ಪ್ರಕರಣ ದಾಖಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀರಾಮ ಸೇನೆ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ರವೀಂದ್ರ ಸಂಘಟನೆ ಸದಸ್ಯರೊಂದಿಗೆ ಈ ಹಿಂದೆ ದೆಹಲಿಯಲ್ಲಿ ರಸ್ತೆ ತಡೆ ಮಾಡಿ ಹೋರಾಟ ನಡೆಸಲೆತ್ನಿಸಿದ್ದ. ಈ ವಿಚಾರವಾಗಿ ಆತನ ವಿರುದ್ಧ ದೆಹಲಿ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಂಚನೆ ಪ್ರಕರಣ: ಮಹಾ ಶಿವರಾತ್ರಿ ಪ್ರಯುಕ್ತ ಹೊಳಲಿ ಗ್ರಾಮದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ನಡೆದ ಬ್ರಹ್ಮ ರಥೋತ್ಸವ ಹಾಗೂ ಗಿರಿಜೋತ್ಸವ ಕಾರ್ಯಕ್ರಮಕ್ಕೆ ಭಕ್ತರು ನೀಡಿದ್ದ ₹ 32 ಲಕ್ಷ ದೇಣಿಗೆ ಹಣವನ್ನು ರವೀಂದ್ರ ದುರ್ಬಳಕೆ ಮಾಡಿಕೊಂಡಿದ್ದಾನೆ. ಈ ಸಂಬಂಧ ದೇವಾಲಯ ಟ್ರಸ್ಟ್‌ನ ಸದಸ್ಯರು ದೂರು ನೀಡಿದ್ದು, ರವೀಂದ್ರನ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT