ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಟ್ರಾನ್‌ ಕಂಪನಿ ಕಾರ್ಯಾರಂಭ

ಕೆಲಸಕ್ಕೆ ಬಂದ ಕಾಯಂ ನೌಕರರು: ಮರು ನಿರ್ಮಾಣಕ್ಕೆ ಚಾಲನೆ
Last Updated 15 ಡಿಸೆಂಬರ್ 2020, 16:20 IST
ಅಕ್ಷರ ಗಾತ್ರ

ಕೋಲಾರ: ಐಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಕಾರ್ಯಾರಂಭ ಮಾಡಿದ್ದು, ಕೆಲಸಕ್ಕೆ ಹಾಜರಾಗಿರುವ ಕಾಯಂ ನೌಕರರು ಕಂಪನಿ ಮರು ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ವೇತನದ ಕಾರಣಕ್ಕೆ ಗುತ್ತಿಗೆ ಕಾರ್ಮಿಕರು ಕಂಪನಿ ಮೇಲೆ ದಾಳಿ ನಡೆಸಿದ ನಂತರ ಶನಿವಾರದಿಂದ (ಡಿ.12) ಕಂಪನಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಮೊಬೈಲ್‌ ಮತ್ತು ಬಿಡಿ ಭಾಗಗಳ ಉತ್ಪಾದನಾ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲಾಗಿತ್ತು.

ಬಳಿಕ ಕಂಪನಿಯ ಮಾನವ ಸಂಪನ್ಮೂಲ ವಿಭಾಗವು ಡಿ.14ರಿಂದ ಕೆಲಸಕ್ಕೆ ಹಾಜರಾಗುವಂತೆ ಕಾಯಂ ನೌಕರರ ಮೊಬೈಲ್‌ಗೆ ಸಂದೇಶ ಕಳುಹಿಸಿತ್ತು. ಅದರಂತೆ ಸುಮಾರು 1,300 ಮಂದಿ ಕಾಯಂ ನೌಕರರು 2 ದಿನಗಳಿಂದ ಕಂಪನಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಂಪನಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಪುಡಿಪುಡಿಯಾಗಿರುವ ಗಾಜುಗಳು ಹಾಗೂ ನಿರುಪಯುಕ್ತ ಯಂತ್ರೋಪಕರಣ ವಿಲೇವಾರಿ ಮಾಡಲಾಗುತ್ತಿದೆ.

‘ವಾರದೊಳಗೆ ಒಂದು ಲೇನ್‌ನಲ್ಲಿ ಮೊಬೈಲ್‌ ಮತ್ತು ಬಿಡಿ ಭಾಗಗಳ ಉತ್ಪಾದನೆ ಆರಂಭವಾಗಲಿದೆ. ಗುತ್ತಿಗೆ ಕಾರ್ಮಿಕರಿಗೂ ಕೆಲಸಕ್ಕೆ ಹಾಜರಾಗುವಂತೆ ಆಡಳಿತ ಮಂಡಳಿಯು ಸದ್ಯದಲ್ಲೇ ಸಂದೇಶ ರವಾನಿಸಲಿದೆ’ ಎಂದು ಕಂಪನಿ ಮೂಲಗಳು ತಿಳಿಸಿವೆ.

ಹಾನಿಗೊಳಗಾಗಿರುವ ಕಂಪನಿ ಪುನರಾರಂಭವಾಗುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದೀಗ ಕಂಪನಿ ಕಾರ್ಯಾರಂಭ ಮಾಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ, 8 ಸಾವಿರ ಗುತ್ತಿಗೆ ಕಾರ್ಮಿಕರ ಪೈಕಿ 7 ಸಾವಿರ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹೀಗಾಗಿ ಕಂಪನಿಯು ಇವರನ್ನು ಕೆಲಸದಲ್ಲಿ ಮುಂದುವರಿಸುತ್ತದೆಯೇ ಅಥವಾ ವಜಾಗೊಳಿಸುತ್ತದೆಯೇ ಎಂಬ ಆತಂಕ ಎದುರಾಗಿದೆ.

ಬಣ ಸೃಷ್ಟಿ: ಕಂಪನಿಯ ಗುತ್ತಿಗೆ ಕಾರ್ಮಿಕರಲ್ಲಿ ಎರಡು ಬಣ ಸೃಷ್ಟಿಯಾಗಿದ್ದವು. ಈ ಪೈಕಿ ಒಂದು ಗುಂಪು ಪ್ರತಿಭಟನೆ ಮಾಡುವುದು ಬೇಡ. ಬದಲಿಗೆ ಶಾಂತಿಯುತವಾಗಿ ವೇತನ ಪಡೆಯೋಣ ಎಂಬ ನಿಲುವು ವ್ಯಕ್ತಪಡಿಸಿತ್ತು. ಆದರೆ, ಮತ್ತೊಂದು ಗುಂಪು ಇದಕ್ಕೆ ವಿರುದ್ಧವಾದ ನಿಲುವು ತಳೆದಿತ್ತು ಎಂದು ಮೂಲಗಳು ಹೇಳಿವೆ.

ಘಟನಾ ದಿನ ರಾತ್ರಿ ಪಾಳಿಯ ಮತ್ತು ಬೆಳಗಿನ ಪಾಳಿಯ ಗುತ್ತಿಗೆ ಕಾರ್ಮಿಕರ ನಡುವೆ ವೇತನದ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಬಳಿಕ ಉಭಯ ಗುಂಪುಗಳು ಪರಸ್ಪರ ಕೈ ಮಿಲಾಯಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಂಪನಿ ಮೇಲೆ ದಾಳಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT