ಭಾನುವಾರ, ಆಗಸ್ಟ್ 14, 2022
19 °C
ಪತ್ರಿಕಾಗೋಷ್ಠಿಯಲ್ಲಿ ಸಂಸದರ ವಿರುದ್ಧ ಕಾರ್ಮಿಕರ ಮುಖಂಡರು ಕಿಡಿ

ವಿಸ್ಟ್ರಾನ್ ಘಟನೆ: ರಾಜಕೀಯಕ್ಕೆ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ವಿಸ್ಟ್ರಾನ್ ಕಂಪನಿಯಲ್ಲಿನ ಲೋಪ ಹಾಗೂ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕಾದ ಸಂಸದ ಎಸ್.ಮುನಿಸ್ವಾಮಿ ಅವರು ಎಸ್‍ಎಫ್‍ಐ ಮುಖಂಡರನ್ನು ಜೈಲಿಗೆ ತಳ್ಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಸಿಐಟಿಯು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಕಿಡಿಕಾರಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಸದರು ವಿಸ್ಟ್ರಾನ್‌ ಕಂಪನಿ ಮೇಲಿನ ದಾಳಿಗೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಬೇಕು. ಕಾರ್ಮಿಕರಿಗೆ ಅನ್ಯಾಯವಾಗದಂತೆ ನಡೆದುಕೊಳ್ಳಬೇಕು. ಅದು ಬಿಟ್ಟು ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು.

‘ಕಾರ್ಮಿಕರು, ರೈತರು, ವಿದ್ಯಾರ್ಥಿ ಮುಖಂಡರನ್ನು ಜೈಲಿಗೆ ತಳ್ಳಿ ಭಯದ ವಾತಾವರಣ ಸೃಷ್ಟಿಸುವುದು ಬಿಜೆಪಿ ಹುಟ್ಟು ಗುಣ. ಹೋರಾಟಗಾರರನ್ನು ಭಯೋತ್ಪಾದಕರೆಂದು ಬಿಂಬಿಸಿ ಅವರ ಮೇಲೆ ಸುಳ್ಳು ಆರೋಪ ಮಾಡಿ ಹೋರಾಟದ ಧ್ವನಿ ಅಡಗಿಸುವುದು ಬಿಜೆಪಿಯ ಅಜೆಂಡಾ’ ಎಂದು ಗುಡುಗಿದರು.

‘ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರು ದಾಂದಲೆ ನಡೆಸಿ ಕಾನೂನು ಉಲ್ಲಂಘಿಸಿದ್ದಾರೆ. ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರಿದ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವೈಫಲ್ಯವೇ ಇದಕ್ಕೆ ಕಾರಣ. ಕಾರ್ಮಿಕರನ್ನು 12 ತಾಸು ದುಡಿಸಿಕೊಂಡ ಕಂಪನಿ ಯಾಕೆ 4 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ಗಮನ ಹರಿಸಿಲ್ಲ ಮತ್ತು ಕಾರ್ಮಿಕ ಕಾಯ್ದೆ ಉಲ್ಲಂಘಿಸಿದರೂ ಕಂಪನಿ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ದೂರಿದರು.

ಬಂಡವಾಳಶಾಹಿಗಳ ಗುಲಾಮ: ‘ರಾಜ್ಯ ಸರ್ಕಾರ ಬಂಡವಾಳಶಾಹಿಗಳ ಗುಲಾಮರಂತೆ ನಡೆದುಕೊಳ್ಳುತ್ತಿದೆ. ವಿಸ್ಟ್ರಾನ್‌ ಕಂಪನಿ ಘಟನೆಯ ಸಂಪೂರ್ಣ ಹೊಣೆ ಸರ್ಕಾರವೇ ಹೊರಬೇಕು. ಘಟನೆ ಸಂಬಂಧ ಸಮಗ್ರ ತನಿಖೆ ನಡೆದರೆ ಆಗಿರುವ ತಪ್ಪು ಗೊತ್ತಾಗುತ್ತದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

‘ಕಾರ್ಮಿಕರೇ ಕಾರ್ಖಾನೆಗಳ ಆಧಾರ ಸ್ತಂಭ. ಕಾರ್ಮಿಕರನ್ನು ಕಾಯಂ ನೌಕರರೆಂದು ಪರಿಗಣಿಸದೆ ಮತ್ತು ಅವರಿಗೆ ಮೂಲಸೌಕರ್ಯ ಕಲ್ಪಿಸದೆ ನಿಕೃಷ್ಟವಾಗಿ ನಡೆಸಿಕೊಳ್ಳುವುದು ಸರಿಯಲ್ಲ. ವಿಸ್ಟ್ರಾನ್‌ ಕಂಪನಿಯಲ್ಲಿನ ಗುತ್ತಿಗೆ ಕಾರ್ಮಿಕರು ಮತ್ತು ಕಾಯಂ ನೌಕರರ ನಡುವೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ’ ಎಂದರು.

‘ವಿಸ್ಟ್ರಾನ್‌ ಕಂಪನಿಗೆ ಭೂಮಿ ನೀಡಿದ ರೈತ ಕುಟುಂಬಗಳ ಕಾರ್ಮಿಕರನ್ನು ಕಂಪನಿಯು ಕಾಯಂ ಮಾಡದೆ ಅಗೌರವ ತೋರಿದೆ. ಸಂಸದರು ಸರ್ಕಾರದ ಮೇಲೆ ಒತ್ತಡ ತಂದು ಪ್ರಕರಣದ ತನಿಖೆಯ ದಿಕ್ಕು ತಪ್ಪಸುತ್ತಿದ್ದಾರೆ. ಸಂಸದರು ತನಿಖೆಗೂ ಮುನ್ನವೇ ಏಕಪಕ್ಷೀಯ ಹೇಳಿಕೆ ನೀಡುವುದು ತಪ್ಪು’ ಎಂದು ಎಐಟಿಯುಸಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದರು.

ಸಮಗ್ರ ತನಿಖೆಯಾಗಲಿ: ‘ಬಂಡವಾಳ ಆಕರ್ಷಣೆಯ ನೆಪದಲ್ಲಿ ನೆಲದ ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ. ಕಾರ್ಮಿಕ ಸಂಘಟನೆಗಳು ಒಗ್ಗೂಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಬೇಕು’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್‌.ವರಲಕ್ಷ್ಮೀ ಸಲಹೆ ನೀಡಿದರು.

‘ಕಂಪನಿಯಲ್ಲಿ 10 ಸಾವಿರ ಕಾರ್ಮಿಕರನ್ನು ದುಡಿಸಿಕೊಳ್ಳಲು ಅನುಮತಿ ನೀಡಿದವರು ಯಾರು? ಗುತ್ತಿಗೆದಾರ ಏಜೆನ್ಸಿಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಮತ್ತು ಅದರಲ್ಲಿ ಕಾರ್ಮಿಕರಿಗೆ ಎಷ್ಟು ಹಣ ಸೇರಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಘಟನೆ ಸಂಬಂಧ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು  ಸರ್ಕಾರ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ಖಂಡನೀಯ’ ಎಂದು ಹೇಳಿದರು.

ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಸದಸ್ಯರಾದ ಕೆ.ವಿ.ಭಟ್, ಜಿ.ಆರ್‌.ಶಿವಶಂಕರ್, ಶಾಮಣ್ಣರೆಡ್ಡಿ, ನಾಗನಾಥ್, ಕಾಳಪ್ಪ, ಅಪ್ಪಣ್ಣ, ಸತ್ಯಾನಂದ್, ಯಲ್ಲಪ್ಪ, ಗಾಂಧಿನಗರ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು