ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಲೇಜು: ಮೂಲಸೌಕರ್ಯ ಭರವಸೆ

ಕಾಲೇಜಿನ ಸಮಸ್ಯೆ ಪರಿಶೀಲಿಸಿದ ಸಂಸದ ಮುನಿಸ್ವಾಮಿ
Last Updated 19 ಅಕ್ಟೋಬರ್ 2019, 13:45 IST
ಅಕ್ಷರ ಗಾತ್ರ

ಕೋಲಾರ: ‘ನಗರದ ಸರ್ಕಾರಿ ಮಹಿಳಾ ಕಾಲೇಜಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುತ್ತೇವೆ’ ಎಂದು  ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದರು.

ಸರ್ಕಾರಿ ಮಹಿಳಾ ಕಾಲೇಜಿಗೆ ಶನಿವಾರ ಭೇಟಿ ನೀಡಿ ಮೂಲಸೌಕರ್ಯ ಸಮಸ್ಯೆ ಪರಿಶೀಲಿಸಿ ಮಾತನಾಡಿ, ‘ಕಾಲೇಜಿಗೆ ಹೊಸದಾಗಿ 10 ಕೊಠಡಿಗಳ ಅಗತ್ಯವಿದ್ದು, ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುತ್ತೇನೆ’ ಎಂದರು.

‘ಶೌಚಾಲಯ ಮತ್ತು ಗ್ರಂಥಾಲಯ ಕೊಠಡಿಗೂ ಅನುದಾನದ ವ್ಯವಸ್ಥೆ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ ನೀಡಲು ಸಂಸದರ ನಿಧಿಯಿಂದ ಹಣ ಬಿಡುಗಡೆ ಮಾಡುತ್ತೇವೆ. ಕಾಲೇಜು ಆವರಣದಲ್ಲಿ ನೂತನ ಸಭಾಂಗಣ ನಿರ್ಮಿಸಿದ್ದು, ಇಲ್ಲಿ 2 ಸಾವಿರ ಆಸನ ವ್ಯವಸ್ಥೆ ಮಾಡಬೇಕಿದೆ. 2 ತಿಂಗಳಿಗೊಮ್ಮೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ’ ಎಂದು ತಿಳಿಸಿದರು.

‘ಕಾಲೇಜಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಲೇಜಿಗೆ ಬರಲು ಬಸ್‌ ಸೌಕರ್ಯ ಸಮರ್ಪಕವಾಗಿಲ್ಲ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ನಾನೂ ಗ್ರಾಮೀಣ ಭಾಗದಿಂದ ಬಂದವನು. ನಮ್ಮ ಕಾಲದಲ್ಲಿ ಇನ್ನೂ ಕಷ್ಟವಿತ್ತು. ವಿದ್ಯಾರ್ಥಿನಿಯರ ಅನುಕೂಲಕ್ಕೆ ಹೆಚ್ಚುವರಿ ಬಸ್‌ ಸೇವೆ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡುತ್ತೇನೆ’ ಎಂದು ಹೇಳಿದರು.

‘ದೇಶದೆಲ್ಲೆಡೆ ಸ್ವಚ್ಛ ಭಾರತ್ ಅಭಿಯಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ಅಭಿಯಾನ ಜಾರಿಗೆ ತಂದಿದ್ದಾರೆ. ಆರೋಗ್ಯವಾಗಿರಲು ಸ್ವಚ್ಛತೆ ಮುಖ್ಯ. ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಈ ಕೆಲಸಕ್ಕೆ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ಜತೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಪ್ರತಿಕೂಲ ಪರಿಣಾಮ: ‘ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿರ್ಬಂಧಿಸಲಾಗಿದೆ. ಪ್ಲಾಸ್ಟಿಕ್ ಕೈ ಚೀಲ, ಬ್ಯಾನರ್ ಮತ್ತು ಫ್ಲೆಕ್ಸ್‌ ಬಳಸುವಂತಿಲ್ಲ. ಆದರೂ ಜನ ಮಿತಿ ಮೀರಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿದ್ದಾರೆ. ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಬಟ್ಟೆ ಚೀಲ ಬಳಸುವ ಮೂಲಕ ಪ್ಲಾಸ್ಟಿಕ್ ನಿರ್ಮೂಲನೆಗೆ ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಅಂಚೆ ಕಚೇರಿ ಮೂಲಕ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆದ ಕಾರಣ ವಿದ್ಯಾರ್ಥಿಗಳು ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬೇಕು. ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅತ್ಯಗತ್ಯ. ಖಾತೆ ತೆರೆಸಲು ಕಾಲೇಜಿನಲ್ಲೇ ಕ್ಯಾಂಪ್‌ ಮಾಡಲು ಅಂಚೆ ಇಲಾಖೆ ಅಧಿಕಾರಿಗಳು ಒಪ್ಪಿದ್ದು, ಇದರ ಸದುಪಯೋಗ ಪಡೆಯಿರಿ’ ಎಂದು ಹೇಳಿದರು.

ಸಮಸ್ಯೆ ಪರಿಹರಿಸಿ: ‘ಕಾಲೇಜಿನಲ್ಲಿ 3,700 ವಿದ್ಯಾರ್ಥಿನಿಯರಿದ್ದಾರೆ. ರಾಜ್ಯದಲ್ಲೇ 3ನೇ ಅತಿ ದೊಡ್ಡ ಕಾಲೇಜು ಇದಾಗಿದೆ. ಕಾಲೇಜಿನ ವಿದ್ಯಾರ್ಥಿನಿಯರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಉನ್ನತ ಸಾಧನೆ ಮಾಡಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜೇಂದ್ರ ಮಾಹಿತಿ ನೀಡಿದರು.

‘ಮೂಲಸೌಕರ್ಯ ಸಮಸ್ಯೆಯಿಂದ ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಾಲೇಜಿಗೆ ಸುಸಜ್ಜಿತ ಗ್ರಂಥಾಲಯ, ತರಗತಿ ಕೊಠಡಿ, ಶೌಚಾಲಯ, ನೀರಿನ ತೊಟ್ಟಿಯ ಅಗತ್ಯವಿದೆ. ಕಾಯಂ ಉಪನ್ಯಾಸಕರ ಸಂಖ್ಯೆ ಕಡಿಮೆಯಿದ್ದು, ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ಮೂಲಸೌಕರ್ಯ ಸಮಸ್ಯೆ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಡಿವೈಎಸ್ಪಿ ಚೌಡಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಶ್ವತ್ಥನಾರಾಯಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT