ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಂಬಾಕು ರಹಿತ ದಿನಾಚರಣೆ ಇಂದು: ಕೋಲಾರದಲ್ಲಿ 5,368 ಪ್ರಕರಣ; ₹ 5 ಲಕ್ಷ ದಂಡ

Published 31 ಮೇ 2024, 6:01 IST
Last Updated 31 ಮೇ 2024, 6:01 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ 2023–24ನೇ ಸಾಲಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ‘ಕೋಟ್ಪಾ-2003 ಕಾಯ್ದೆ’ ಉಲ್ಲಂಘಿಸಿದ ಸಂಬಂಧ 57 ದಾಳಿ ಕಡೆ ನಡೆಸಿ 5,368 ಪ್ರಕರಣ ದಾಖಲಿಸಿ, ₹ 5 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಪ್ರಮುಖವಾಗಿ ಬಸ್ ನಿಲ್ದಾಣ, ಹೊಟೇಲ್‍ಗಳು, ತಂಬಾಕು ಮಾರಾಟ ಮಾಡುವ ಅಂಗಡಿ, ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶ, ಬಾರ್ ಅಂಡ್ ರೆಸ್ಟೋರೆಂಟ್‍ಗಳ ಮೇಲೂ ದಾಳಿ ಮಾಡಲಾಗಿದೆ.

ತಂಬಾಕು ನಿಯಂತ್ರಣಕ್ಕೆ ಇರುವ ಕಾಯ್ದೆಯ ಸೆಕ್ಷನ್ 4, 5, 6ಎ, 6ಬಿ ಮತ್ತು 7 ಉಲ್ಲಂಘನೆ ಮಾಡಿದವರ ವಿರುದ್ಧ ಅರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಲಾಗಿದೆ. ವರ್ಷದಿಂದ ವರ್ಷಕ್ಕೆ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ. 

ಹಲವೆಡೆ ಶಾಲಾ ಕಾಲೇಜುಗಳ ಬಳಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು, ಮಕ್ಕಳನ್ನು ಬಳಸಿಕೊಳ್ಳುವುದು, ದಾರಿ ಬೀದಿಗಳಲ್ಲಿ ಸಿಗರೇಟು ಸೇದುವ ಪ್ರಕ್ರಿಯೆಗೆ ಕಡಿವಾಣ ಬೀಳುತ್ತಲೇ ಇಲ್ಲ. ಆರೋಗ್ಯಕ್ಕೆ ಮಾರಕ ಎಂಬುದು ಗೊತ್ತಿದ್ದರೂ ಅವ್ಯಾಹತವಾಗಿ ನಡೆದಿದೆ.

‘ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕು ಮಟ್ಟದಲ್ಲಿ ವಿಶೇಷ ದಾಳಿ ನಡೆಸಲಾಗುತ್ತಿದೆ. ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಜೊತೆಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ 2,608 ಜನರಿಗೆ ಇಲಾಖೆಯಿಂದ ಆಪ್ತಸಮಾಲೋಚನೆ ನಡೆಸಿ 219 ವ್ಯಸನಿಗಳಿಗೆ ಎನ್‌ಆರ್‌ಟಿ ಚಿಕಿತ್ಸೆ ನೀಡಲಾಗಿದೆ’ ಎಂದರು.

ನಗರದ ಹೋಟೆಲ್‍ಗಳು, ರೆಸ್ಟೋರೆಂಟ್‌ ಹಾಗೂ ಬಾರ್‌ಗಳಲ್ಲಿ ‘ಧೂಮಪಾನ ವಲಯ’ವೂ ಇಲ್ಲ. ಕುಳಿತಲ್ಲೇ ಧೂಮಪಾನ ಮಾಡುತ್ತಿದ್ದು, ಉಳಿದವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಕಡ್ಡಾಯವಾಗಿ ಪರವಾನಗಿ ಪಡೆದಿರಬೇಕೆಂದು ಸೂಚಿಸಲಾಗಿದೆ. ಆದರೆ, ಹಲವೆಡೆ ಉಲ್ಲಂಘನೆ ಆಗಿರುವುದು ಕಂಡುಬಂದಿದೆ.

ತಂಬಾಕು ಉದ್ಯಮ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು ಈ ವರ್ಷದ ಘೋಷವಾಕ್ಯ. ಜಿಲ್ಲೆಯ ಯುವ ಜನತೆ ಹಾಗೂ ಎಲ್ಲರೂ ತಂಬಾಕು ವ್ಯಸನದಿಂದ ದೂರವಿದ್ದು ಆರೋಗ್ಯ ವೃದ್ಧಿಸಿಕೊಳ್ಳಿ
ಅಕ್ರಂ ಪಾಷಾ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ 2885 ವಿವಿಧ ವಿದ್ಯಾಸಂಸ್ಥೆಗಳಿವೆ. ಅವುಗಳಲ್ಲಿ 2585 ವಿದ್ಯಾಸಂಸ್ಥೆಗಳನ್ನು ತಂಬಾಕು ಮುಕ್ತ ಎಂದು ಘೋಷಣೆ ಮಾಡಲಾಗಿದೆ. ಕೆಲ ಸಂಸ್ಥೆಗಳನ್ನು ಇನ್ನೂ ಘೋಷಿಸಬೇಕಿದ್ದು ಕ್ರಮ ವಹಿಸಲಾಗಿದೆ  
ಡಾ.ಚಾರಿಣಿ  ಜಿಲ್ಲಾ ಸರ್ವೇಕ್ಷಣಾಧಿಕಾರಿ

ಕೋಟ್ಪಾ ಕಾಯ್ದೆ–2003 ಹೇಳುವುದೇನು?

  • ಸೆಕ್ಷನ್ 4: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷಿದ್ಧ. ‘ಧೂಮಪಾನ ನಿಷೇಧಿತ ಪ್ರದೇಶ’ ಎಂಬ ನಾಮಫಲಕ ಪ್ರದರ್ಶನ ಕಡ್ಡಾಯ. ಉಲ್ಲಂಘನೆಯಾದಲ್ಲಿ ₹ 200 ವರೆಗೂ ದಂಡ.

  • ಸೆಕ್ಷನ್ 5: ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸುವಂತಿಲ್ಲ. ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ವಿರುದ್ಧ ಮೊಕದ್ದಮೆ ದಂಡ.

  • ಸೆಕ್ಷನ್ 6ಎ: 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷಿದ್ಧ. ಈ ವಯಸ್ಸಿನೊಳಗಿನವರನ್ನು ಮಾರಾಟಕ್ಕೆ ಬಳಸಿಕೊಳ್ಳುವಂತೆಯೂ ಇಲ್ಲ. ಉಲ್ಲಂಘನೆಗೆ ₹ 200 ವರೆಗೆ ದಂಡ.

  • ಸೆಕ್ಷನ್ 6ಬಿ: ಶಿಕ್ಷಣ ಸಂಸ್ಥೆಗಳ 100 ಯಾರ್ಡ್‌ಗಳ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಅಪರಾಧ. ಇದನ್ನು ಸೂಚಿಸುವ ಫಲಕಗಳನ್ನು ಶಿಕ್ಷಣ ಸಂಸ್ಥೆಗಳ ಮುಂಭಾಗದಲ್ಲಿ ಪ್ರದರ್ಶಿಸುವುದು ಕಡ್ಡಾಯ. ಉಲ್ಲಂಘನೆಯಾದಲ್ಲಿ ಕ್ರಮ.

  • ಸೆಕ್ಷನ್ 7: ತಂಬಾಕು ಉತ್ಪನ್ನಗಳ ಮೇಲೆ ಎರಡೂ ಬದಿಗಳಲ್ಲಿ ಎಚ್ಚರಿಕೆ ಸಂದೇಶವಿರುವುದು ಕಡ್ಡಾಯ. ನಕಲಿ ಅಥವಾ ಅಕ್ರಮ ಪದಾರ್ಥ ಮಾರಾಟ ಮಾಡುವಂತಿಲ್ಲ.

ಪರವಾನಗಿ ಇಲ್ಲದಿದ್ದರೆ ದಂಡ
ನಗರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ತಂಬಾಕು ಉತ್ಪನ್ನಗಳ ಮಾರಾಟ ಮಾಡಿದ್ದಲ್ಲಿ ₹ 4 ಸಾವಿರ ದಂಡ ವಿಧಿಸಬಹುದು. ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 3 ಸಾವಿರ ದಂಡ ವಿಧಿಸಬಹುದು. ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT