ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಬಿಐಗೆ ವಹಿಸಿ, ಸಿಎಂ ರಾಜೀನಾಮೆ ನೀಡಲಿ: ವೈ.ಎ.ನಾರಾಯಣಸ್ವಾಮಿ

ಮುಡಾ, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ: ವೈ.ಎ.ನಾರಾಯಣಸ್ವಾಮಿ ಆರೋಪ
Published 7 ಜುಲೈ 2024, 16:20 IST
Last Updated 7 ಜುಲೈ 2024, 16:20 IST
ಅಕ್ಷರ ಗಾತ್ರ

ಕೋಲಾರ: ‘ಮೈಸೂರಿನ ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣವನ್ನು ಸಿಬಿಐಗೆ ವಹಿಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸಚೇತಕ, ಬಿಜೆಪಿ ಮುಖಂಡ ವೈ.ಎ.ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಡಿಎ‌ ಮೀರಿಸುವ ಹಗರಣ ಮುಡಾದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ನಿವೇಶನ ಬಿಟ್ಟುಕೊಡಲು ₹ 63 ಕೋಟಿ ಪರಿಹಾರ ‌ಕೇಳುತ್ತಿದ್ದಾರೆ. ತಮ್ಮದೇ ಸರ್ಕಾರದಲ್ಲಿ ಇಷ್ಟೊಂದು ಹಣ ಕೇಳುತ್ತಿದ್ದಾರೆ. ಇನ್ನು ತಂಗಿಗೆ ಅಣ್ಣ ದಾನವಾಗಿ ಜಮೀನು ನೀಡಿದ್ದಾರಂತೆ’ ಎಂದು ಲೇವಡಿ ಮಾಡಿದರು.

‘ಮುಡಾ ವ್ಯಾಪ್ತಿಯ ಶಾಸಕರು ಮುಡಾ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ. ಸಿದ್ದರಾಮಯ್ಯ ಕೂಡ ಒಬ್ಬ ಸದಸ್ಯ. ಅವರಿಗೆ ಗೊತ್ತಿಲ್ಲದೇ ಇಷ್ಟೆಲ್ಲಾ ಹಗರಣ ನಡೆದಿದೆಯೇ? ಈ ಹಗರಣದಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ’ ಎಂದು ಆಪಾದಿಸಿದರು.

‘ನಗರಾಭಿವೃದ್ಧಿ ಸಚಿವರೂ ಆಗಿರುವ ಬೈರತಿ ಸುರೇಶ್ ಹಗರಣವೇ ನಡೆದಿಲ್ಲ ಎನ್ನುತ್ತಾರೆ. ಅವರೇಕೆ ಹೆಲಿಕಾಪ್ಟರ್‌ನಲ್ಲಿ ‌ಕಡತ ತೆಗೆದುಕೊಂಡು ‌ಹೋದರು, ಏಕೆ ಮೈಸೂರು ಜಿಲ್ಲಾಧಿಕಾರಿಯನ್ನು ಬದಲಾಯಿಸಿದರು’ ಎಂದು ಪ್ರಶ್ನಿಸಿದರು.

‘ವಾಲ್ಮೀಕಿ ನಿಗಮದ ₹ 187 ಕೋಟಿ ದುರುಪಯೋಗವಾಗಿದ್ದು, ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗಿದೆ. ಇಷ್ಟ ಬಂದ ರೀತಿ ಹಣ ಡ್ರಾ ಮಾಡಲಾಗಿದೆ. ತೆಲಂಗಾಣ ಚುನಾವಣೆಗೆ ಈ ಹಣ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಇಲಾಖೆ ‌ಗಮನಕ್ಕೆ ಬಂದಿಲ್ಲವೇ’ ಎಂದು ಕೇಳಿದರು.

‘ಕಣ್ಣೊರೆಸಲು ಎಸ್‌ಐಟಿ ತನಿಖೆ ನಡೆಸುತ್ತಿದ್ದಾರೆ‌‌. ಸಿದ್ದರಾಮಯ್ಯ ಗಮನಕ್ಕೆ ಬಾರದೆ ಹಗರಣ ನಡೆದಿಲ್ಲ. ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು. ಮಿಕ್ಕಿದ ಹಣ ವಸೂಲಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳಾಗಿದ್ದು, ಕಮಿಷನ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ‌. ಎಸ್ಟಿ ಸಮುದಾಯಕ್ಕೆ ಒಂದು ಕೊಳವೆ ಬಾವಿ ಕೊರೆಸಿ ಕೊಟ್ಟಿಲ್ಲ. ಆ ಸಮುದಾಯದ ನಾಯಕರು ಏಕೆ ಸುಮ್ಮನಿದ್ದಾರೆಯೋ ಗೊತ್ತಿಲ್ಲ’ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್‌, ಮಾಧ್ಯಮ ಪ್ರಮುಖ್‌ ಪ್ರವೀಣ್ ಗೌಡ, ಸಹ ಪ್ರಮುಖ್‌ ಕೆಂಬೋಡಿ, ಮಾಗೇರಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಮಾಲೂರು ವೇಮಣ್ಣ, ಶಿಳ್ಳಂಗೆರೆ ಮಹೇಶ್, ರಾಜೇಶ್ ಸಿಂಗ್, ಓಹಿಲೇಶ್ ಇದ್ದರು.

Highlights - ಮೈಸೂರು ಜಿಲ್ಲಾಧಿಕಾರಿ ವರ್ಗಾಯಿಸಿದ್ದು ಏಕೆ? ಬೈರತಿ ಸುರೇಶ್‌ ಹೆಲಿಕಾಪ್ಟರ್‌ನಲ್ಲಿ ‌ಕಡತ ತೆಗೆದುಕೊಂಡು ‌ಹೋಗಿದ್ಯಾಕೆ? ಸಿದ್ದರಾಮಯ್ಯ ಗಮನಕ್ಕೆ ಬಾರದೆ ಹಗರಣ ನಡೆದಿಲ್ಲ–ಮಾಜಿ ಎಂಎಲ್‌ಸಿ

Quote - ವಾಲ್ಮೀಕಿ ನಿಗಮ ಹಗರಣದಲ್ಲಿ ದುಡ್ಡು ತಿಂದವರು ಕುಷ್ಠ ರೋಗದಿಂದ ಸಾಯಲಿ ಎಂದಿರುವ ಶಾಸಕ ಕೊತ್ತೂರು ಮಂಜುನಾಥ್‌ ಅವರನ್ನು ಅಭಿನಂದಿಸುತ್ತಾನೆ. ಸಿ.ಎಂ ರಾಜೀನಾಮೆಗೂ ಅವರು ಆಗ್ರಹಿಸಲಿ ವೈ.ಎ.ನಾರಾಯಣಸ್ವಾಮಿ ವಿಧಾನ ಪರಿಷತ್‌ ಮಾಜಿ ಸಚೇತಕ

Cut-off box - ‘ಮೋಜು ಮಸ್ತಿಗೆ ಹಾಲಿನ ಹಣ’ ‘ಕೋಲಾರ ಹಾಲು ಒಕ್ಕೂಟದವರು ಹಾಲಿನ ಖರೀದಿ ದರ ಕಡಿಮೆ ಮಾಡಿ ರೈತರ ಮೇಲೆ ಚಪ್ಪಡಿ ಕಲ್ಲು ಎಳೆದಿದ್ದಾರೆ. ಹಾಲು ಕುಡಿಯುವವರಿಗೆ ₹ 2 ಹೆಚ್ಚು ಹಾಲು ಕರೆಯುವರಿಗೆ ₹ 2 ಕಡಿಮೆ. ಇದ್ಯಾವ ನ್ಯಾಯ? ಇದರಿಂದ ಒಕ್ಕೂಟಕ್ಕೆ ₹ 48 ಲಕ್ಷ ಲಾಭ ಬರುತ್ತದೆ. ಮೋಜು ಮಸ್ತಿ‌ ಮಾಡಲು ಈ ಹಣ ಬಳಸುತ್ತಿದ್ದಾರೆಯೇ’ ಎಂದು ವೈ.ಎ.ನಾರಾಯಣಸ್ವಾಮಿ ಪ್ರಶ್ನಿಸಿದರು. ‘ತಕ್ಷಣ ದರ ಕಡಿತ ಹಿಂಪಡೆಯಬೇಕು. ಇಲ್ಲದಿದ್ದರೆ ದೊಡ್ಡ ಹೋರಾಟ ನಡೆಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT