ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ– ಎಚ್‌.ಎನ್‌ ವ್ಯಾಲಿ: ಮುಖ್ಯಮಂತ್ರಿ ಸಭೆಗೆ ವೈಎಎನ್‌ ಮನವಿ

ಪೂರ್ಣ ನೀರು ಹರಿಸಲು ಒತ್ತಾಯ
Last Updated 28 ಡಿಸೆಂಬರ್ 2020, 15:59 IST
ಅಕ್ಷರ ಗಾತ್ರ

ಕೋಲಾರ: ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್‌ ವ್ಯಾಲಿ ಯೋಜನೆಯ ನೀರಿನ ಹರಿವು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕೆಂದು ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್‌ಎಸ್‌ಬಿ) ಕರಾರಿನಂತೆ ಅವಿಭಜಿತ ಕೋಲಾರ ಜಿಲ್ಲೆಗೆ ಕೆ.ಸಿ ವ್ಯಾಲಿ ಮತ್ತು ಎಚ್‌.ಎನ್‌ ವ್ಯಾಲಿ ಯೋಜನೆ ನೀರನ್ನು ಪೂರ್ಣ ಪ್ರಮಾಣದಲ್ಲಿ ಹರಿಸುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ ಸಭೆ ನಡೆಸಿ ನೀರಿನ ಹರಿವು ಹೆಚ್ಚಿಸುವಂತೆ ಆದೇಶಿಸಬೇಕು ಎಂದು ಕೋರಿದ್ದಾರೆ.

ನೀರು ಹರಿವು ಹೆಚ್ಚಿಸುವಂತೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ಕೆ.ಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಗೆ 2020ರ ಸೆಪ್ಟೆಂಬರ್ ಅಂತ್ಯದೊಳಗೆ 400 ಎಂಎಲ್‌ಡಿ ನೀರು ಹರಿಸಬೇಕಿತ್ತು. ಆದರೆ, ಇದಕ್ಕೆ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳು ಸಹಕರಿಸಿಲ್ಲ ಎಂದು ತಿಳಿಸಿದ್ದಾರೆ.

ಕೆ.ಸಿ ವ್ಯಾಲಿ ಯೋಜನೆಯಡಿ ಕೋಲಾರ ಜಿಲ್ಲೆಗೆ ಹಂಚಿಕೆಯಾಗಿರುವ 400 ಎಂಎಲ್‌ಡಿ ಪೈಕಿ 310 ಎಂಎಲ್‌ಡಿ ನೀರನ್ನು ಮಾತ್ರ ಪಂಪ್ ಮಾಡಲಾಗುತ್ತಿದೆ. ಕೆ.ಸಿ ವ್ಯಾಲಿ ನೀರಿನಿಂದ ಈವರೆಗೆ ಜಿಲ್ಲೆಯ 79 ಕೆರೆ ಮತ್ತು 98 ಚೆಕ್‌ಡ್ಯಾಂ ಭರ್ತಿಯಾಗಿವೆ. ಕರಾರಿನ ಪ್ರಕಾರ ಬಿಡಬ್ಲ್ಯೂಎಸ್‌ಎಸ್‌ಬಿ ಸಣ್ಣ ನೀರಾವರಿ ಇಲಾಖೆಗೆ ಇನ್ನೂ 90 ಎಂಎಲ್‌ಡಿ ನೀರು ಒದಗಿಸಬೇಕು ಎಂದು ಹೇಳಿದ್ದಾರೆ.

ಭರವಸೆ ಈಡೇರಿಲ್ಲ: 2ನೇ ಹಂತದಲ್ಲಿ ಎಚ್.ಎನ್ ವ್ಯಾಲಿ ಯೋಜನೆಗೆ 210 ಎಂಎಲ್‌ಡಿ ನೀರು ಹಂಚಿಕೆಯಾಗಿದ್ದರೂ ದಿನಕ್ಕೆ 100 ಎಂಎಲ್‌ಡಿ ಪಂಪ್ ಮಾಡಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಗೆ ಇನ್ನೂ 110 ಎಂಎಲ್‌ಡಿ ನೀರು ಹಂಚಿಕೆಯಾಗಬೇಕಿದೆ. ಮುಖ್ಯಮಂತ್ರಿಗಳು ಮತ್ತು ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಈ ಹಿಂದೆ ನಡೆದ ಸಭೆಯಲ್ಲಿ ಅವಳಿ ಜಿಲ್ಲೆಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಆ ಭರವಸೆ ಈಡೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದ್ದರಿಂದ ಮುಖ್ಯಮಂತ್ರಿಗಳು ಶೀಘ್ರವೇ ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳ ಸಭೆ ಕರೆದು ಕರಾರಿನಂತೆ ಪೂರ್ಣ ಪ್ರಮಾಣದ ಸಂಸ್ಕರಿಸಿದ ನೀರನ್ನು ಪೂರೈಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸಬೇಕು. ಅವಳಿ ಜಿಲ್ಲೆಯ ರೈತರ ಬದುಕು ಹಸನಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT