ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಯಡಿಯೂರಪ್ಪ ಮೂಲೆ ಗುಂಪು: ಕೇಂದ್ರದ ಮಾಜಿ ಸಚಿವ ಮುನಿಯಪ್ಪ ವ್ಯಂಗ್ಯ

ರಾಜಕೀಯ ದೊಂಬರಾಟ ನಾಚಿಕೆಗೇಡು
Last Updated 19 ಜೂನ್ 2021, 13:59 IST
ಅಕ್ಷರ ಗಾತ್ರ

ಕೋಲಾರ: ‘ಜನಪರ ಆಡಳಿತ ನೀಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ವ್ಯಂಗ್ಯವಾಡಿದರು.

ನಗರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಕಾಂಗ್ರೆಸ್‌ ವತಿಯಿಂದ ವೈದ್ಯಕೀಯ ಪರಿಕರ ಹಾಗೂ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿ, ‘ಬಿಜೆಪಿಯಲ್ಲಿ ಯಡಿಯೂರಪ್ಪ ಮೂಲೆ ಗುಂಪಾಗಿದ್ದು, ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಉತ್ತಮ ಭವಿಷ್ಯವಿದೆ. ಯಡಿಯೂರಪ್ಪ ನಾಯಕತ್ವ ಬಿಟ್ಟ ಕೂಡಲೇ ಬಿಜೆಪಿಯೂ ಇರುವುದಿಲ್ಲ’ ಎಂದರು.

‘ರಾಜ್ಯದ ಜನ ಲಾಕ್‌ಡೌನ್‌ನಿಂದ ತತ್ತರಿಸಿದ್ದಾರೆ. ಮತ್ತೊಂದೆಡೆ ಕೋವಿಡ್‌ನಿಂದ ಪ್ರತಿನಿತ್ಯ ಸಾವು ನೋವು ಸಂಭವಿಸುತ್ತಿವೆ. ಮುಖ್ಯಮಂತ್ರಿ ಬದಲಾವಣೆಗೆ ಇದು ಸಂದರ್ಭವಲ್ಲ. ಈ ಬಗ್ಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಹೇಳುತ್ತಿದ್ದಾರೆ. ನಾಯಕತ್ವ ಬದಲಾವಣೆಗಾಗಿ ಬಿಜೆಪಿಯಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿರುವುದು ನಾಚಿಕೆಗೇಡು’ ಎಂದು ಟೀಕಿಸಿದರು.

‘ಬಿಜೆಪಿ ಮುಖಂಡರು ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಜೀವ ಉಳಿಸುವುದನ್ನು ಬಿಟ್ಟು ಅಧಿಕಾರಕ್ಕಾಗಿ ಗುಂಪುಗಾರಿಕೆ ಮಾಡುತ್ತಿದ್ದಾರೆ. ಇದು ರಾಜ್ಯದ ಜನರ ದುರದೃಷ್ಟ. ಜನರನ್ನು ರಕ್ಷಿಸುವುದನ್ನು ಮರೆತು ಅಧಿಕಾರಕ್ಕಾಗಿ ಹಾದಿಬೀದಿಯಲ್ಲಿ ಜಗಳವಾಡುತ್ತಿರುವ ಬಿಜೆಪಿ ನಾಯಕರು ರಾಜ್ಯದ ಮಾನ ಹರಾಜು ಹಾಕುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಒಂದೆಡೆ ಕೋವಿಡ್‌ನಿಂದ ಜನರು ಸಾಯುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯವರು ಅಧಿಕಾರ ಲಾಲಸೆಯಿಂದ ಜಗಳವಾಡುತ್ತಿದ್ದಾರೆ. ಇದು ಮಾನವೀಯತೆ ಇಲ್ಲದ ಸರ್ಕಾರ. ಯಾರೇ ಮುಖ್ಯಮಂತ್ರಿಯಾದರೂ ವಿಪಕ್ಷಗಳನ್ನು ವಿಶ್ವಾಸ ತೆಗೆದುಕೊಂಡು ಜನಪರ ಆಡಳಿತ ನಡೆಸಬೇಕು’ ಎಂದು ಒತ್ತಾಯಿಸಿದರು.

ಹೊಸ ರೈಲುಗಳಿಲ್ಲ: ಸಂಸದ ಎಸ್.ಮುನಿಸ್ವಾಮಿ ಅವರು ಚಿಕ್ಕಬಳ್ಳಾಪುರ ಚಿಂತಾಮಣಿ ತಾಲ್ಲೂಕಿನ ದೊಡ್ಡನತ್ತದಲ್ಲಿ ಕಿಸಾನ್ ರೈಲಿಗೆ ಚಾಲನೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, ‘ನಾನು ರೈಲ್ವೆ ಸಚಿವನಾಗಿದ್ದಾಗ ಮಂಜೂರಾಗಿದ್ದ ರೈಲುಗಳ ಸೇವೆಯನ್ನು 5 ವರ್ಷವಾದರೂ ಅವರಿಂದ ಸಾಧ್ಯವಾಗಿಲ್ಲ’ ಎಂದು ಕುಟುಕಿದರು.

‘ಕೋಲಾರದಿಂದ ಜೋಲಾರ್‌ಪೇಟೆ, ತಿರುಪತಿ, ನಿಜಾಮುದ್ದೀನ್‌ ನಡುವೆ ಸಂಚರಿಸುತ್ತಿದ್ದ ರೈಲು ಸ್ಥಗಿತಗೊಂಡಿದೆ. ಸದ್ಯ ಆ ರೈಲು ಸೇವೆ ಆರಂಭಿಸುತ್ತಾರೆಯೇ ಹೊರತು ಹೊಸ ರೈಲುಗಳು ಯಾವುದೂ ಇಲ್ಲ. ನನ್ನ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ರೈಲುಗಳನ್ನು ನೀಡಿದ್ದೆ ಎಂಬ ಮಾಹಿತಿಯನ್ನು ದಾಖಲೆಸಮೇತ ಕೊಟ್ಟರೆ ವಾಸ್ತವಾಂಶ ತಿಳಿಯಲಿದೆ’ ಎಂದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಉಪಾಧ್ಯಕ್ಷ ಎಲ್‌.ಎ.ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಕಾಂಗ್ರೆಸ್‌ ಕಿಸಾನ್‌ ಖೇತ್‌ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್‌, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT