ಮಂಗಳವಾರ, ಜುಲೈ 27, 2021
26 °C
ಸದಸ್ಯರ ಒಮ್ಮತದ ನಿರ್ಣಯ: 3 ಪಕ್ಷಗಳಿಗೆ ಅವಕಾಶ

ಕೋಲಾರ | ಜಿ.ಪಂ. ಸ್ಥಾಯಿ ಸಮಿತಿ: ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಜಕೀಯವಾಗಿ ಜಿದ್ದಾಜಿದ್ದಿಯ ಕಣವಾಗಿದ್ದ ಜಿಲ್ಲಾ ಪಂಚಾಯಿತಿಯ 3 ಸ್ಥಾಯಿ ಸಮಿತಿಗಳ ಚುನಾವಣೆಯಲ್ಲಿ ಅಧ್ಯಕ್ಷರನ್ನು ಇಲ್ಲಿ ಸೋಮವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷಗಾದಿಗಾಗಿ ಪ್ರಮುಖ ಮೂರೂ ಪಕ್ಷಗಳ ಸದಸ್ಯರಲ್ಲಿ ತೀವ್ರ ಪೈಪೋಟಿ ಇತ್ತು.

ಈ ಮೊದಲು ಜೂನ್‌ 10ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಅಧ್ಯಕ್ಷಗಾದಿ ಆಕಾಂಕ್ಷಿಗಳು ಕಾರ್ಯತಂತ್ರ ರೂಪಿಸಿ ಚುನಾವಣೆಗೆ ಗೈರಾಗುವ ಮೂಲಕ ಮುಂದೂಡುವಂತೆ ಮಾಡಿದ್ದರು. ಅಧ್ಯಕ್ಷಗಾದಿ ಆಕಾಂಕ್ಷಿಗಳ ಮನವೊಲಿಕೆಗೆ ಪಕ್ಷದ ಮುಖಂಡರು ನಡೆಸಿದ್ದ ಪ್ರಯತ್ನ ಕೈಕೊಟ್ಟಿತ್ತು. ಆದರೆ, ಸೋಮವಾರ ಮೂರೂ ಪಕ್ಷಗಳ ಸದಸ್ಯರು ಒಮ್ಮತದ ನಿರ್ಣಯಕ್ಕೆ ಬಂದು ಅಧ್ಯಕ್ಷಗಾದಿಗೆ ಅವಿರೋಧ ಆಯ್ಕೆ ನಡೆಯುವಂತೆ ಮಾಡಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ವಕ್ಕಲೇರಿ ಕ್ಷೇತ್ರದ ಜಿ.ಪಂ ಸದಸ್ಯ ಅರುಣ್‌ಪ್ರಸಾದ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗೆ ಬೇತಮಂಗಲ ಕ್ಷೇತ್ರದ ಸದಸ್ಯೆ ನಿರ್ಮಲಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಕುಡಿಯನೂರು ಕ್ಷೇತ್ರದ ಚಿನ್ನಸ್ವಾಮಿಗೌಡ ಅವಿರೋಧ ಆಯ್ಕೆಯಾದರು.

10 ತಿಂಗಳ ಅವಧಿ: ಜೂನ್‌ 10ರಂದು ನಡೆಯಬೇಕಿದ್ದ ಚುನಾವಣೆಯನ್ನು ಸದಸ್ಯರ ಕೋರಂ ಕೊರತೆ ಕಾರಣಕ್ಕೆ ಜೂನ್‌ 15ಕ್ಕೆ ಮುಂದೂಡಲಾಗಿತ್ತು. ಜಿಲ್ಲಾ ಪಂಚಾಯಿತಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸಲಾಯಿತು.

ಜಿ.ಪಂ ಸದಸ್ಯರ ಅವಧಿ 10 ತಿಂಗಳು ಮಾತ್ರ ಇದೆ. ಹೀಗಾಗಿ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸದೆ ಎಲ್ಲಾ ಪಕ್ಷಗಳಿಗೂ ಸಮಾನ ಅವಕಾಶ ಕಲ್ಪಿಸುವ ಬಗ್ಗೆ ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸದಸ್ಯರು ವಿಸ್ತೃತ ಚರ್ಚೆ ನಡೆಸಿ ಒಮ್ಮತದ ನಿರ್ಧಾರ ಕೈಗೊಂಡರು. ಜತೆಗೆ ಯಾವ ಸಮಿತಿಗೆ ಯಾರು ಅಧ್ಯಕ್ಷರಾಗಬೇಕೆಂದು ನಿರ್ಣಯ ಕೈಗೊಂಡರು.

ಈ ನಿರ್ಣಯದಂತೆ ಅರುಣ್‌ಪ್ರಸಾದ್, ನಿರ್ಮಲಾ ಮತ್ತು ಚಿನ್ನಸ್ವಾಮಿಗೌಡ ಅವರ ಮಾತ್ರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾದರು.

ಅಭಿವೃದ್ಧಿಯ ಸಂಕಲ್ಪ: ‘ನಮ್ಮ ಅಧಿಕಾರಾವಧಿ ಕೇವಲ 10 ತಿಂಗಳಿದೆ. ಇದು ಚುನಾವಣೆ ಮಾಡಿಕೊಂಡು ರಾಜಕೀಯ ಮಾಡುವ ಸಮಯವಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಸಂಕಲ್ಪ ಮಾಡಿದ್ದು. ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಕ್ರಮ ರೂಪಿಸುತ್ತೇವೆ’ ಎಂದು ಸ್ಥಾಯಿ ಸಮಿತಿಗಳ ನೂತನ ಅಧ್ಯಕ್ಷರು ಭರವಸೆ ನೀಡಿದರು.

ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಅವರ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು