ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶಕ್ತ ಕಲಾವಿದರಿಗೆ ನೆರವು ನೀಡಲು ಮನವಿ

Last Updated 22 ಡಿಸೆಂಬರ್ 2012, 9:27 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ನಾಡಿನ ಕಲಾವಿದರು ಕನ್ನಡ ಭಾಷೆ, ಸಂಸ್ಕೃತಿ ರಾಯಭಾರಿಗಳು. ಅವರನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಅಶಕ್ತ ಕಲಾವಿದರಿಗೆ ಕೈಲಾದ ನೆರವು ನೀಡಬೇಕು ಎಂದು ಬಿಜೆಪಿ ಮುಖಂಡ ಇ.ಶಿವಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೆಂಗಳೂರಿನ ನಟರಾಜ ನಾಟಕ ಕಲಾ ಸಂಘದ ವತಿಯಿಂದ ಅಶಕ್ತ ಕಲಾವಿದರ ಸಹಾಯಾರ್ಥ ಜೂನಿಯರ್ ಶಂಕರ್‌ನಾಗ್ ತಂಡದಿಂದ ಗುರುವಾರ ರಾತ್ರಿ ಏರ್ಪಡಿಸಲಾಗಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಕ್ತರಾಗಿದ್ದಾಗ ತಮ್ಮ ಕಲಾ ಕೌಶಲ್ಯದಿಂದ ಸಮಾಜ ತಿದ್ದುವ ಹಾಗೂ ಮನರಂಜನೆ ಒದಗಿಸುವ ಕಲಾವಿದರು, ವಯಸ್ಸಾದಂತೆ ಮೂಲೆಗುಂಪಾಗುತ್ತಿದ್ದಾರೆ. ಬಹಳಷ್ಟು ಮಂದಿ ಎರಡು ಹೊತ್ತಿನ ಊಟಕ್ಕೂ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಕಲಾವಿದ ದೇವರಾಜ್, ಭೋಜರಾಜ್, ಶಿವಾನಂದ್ ಮಾತನಾಡಿ ಪ್ರೇಕ್ಷರಿಗೆ ಕೃತಜ್ಞತೆ ಅರ್ಪಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎಂ.ಚಂದ್ರಶೇಖರ್, ಮುಖಂಡ ಶ್ರೀನಿವಾಸ್, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೆಂಕಟಾಚಲ, ಬಿಜೆಪಿ ಮುಖಂಡ ಇ.ಶಿವಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ರವಿಕುಮಾರ್, ಕ್ಷೇತ್ರ ಶಿಕ್ಷಣ ಸಂಯೋಜಕ ಪಿ.ಎನ್.ಪ್ರವೀಣ್ ಕುಮಾರ್, ವೈದ್ಯಾಧಿಕಾರಿ ಡಾ.ಸಂಪತ್ ಕುಮಾರ್, ಕಲಾವಿದ ಕೆ.ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಕಲಾವಿದ ಭೋಜರಾಜ್ ಶಂಕರ್‌ನಾಗ್ ಚಿತ್ರಗಳ ಗೀತೆಗಳಿಗೆ ಅವರದೇ ಹಾವ ಭಾವ ಪ್ರದರ್ಶಿಸಿ ಪ್ರೇಕ್ಷರ ಚಪ್ಪಾಳೆ ಗಿಟ್ಟಿಸಿದರು. ಕಲಾವಿದರಾದ ಶಿವಾನಂದ್, ದೇವರಾಜ್ ಹಾಸ್ಯ ಸನ್ನಿವೇಶಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಸಮಸ್ಯೆ ಕಂಡುಬಂದಲ್ಲಿ ನೇತ್ರ ತಜ್ಞರ ಸಲಹೆ ಪಡೆದು ನಿವಾರಿಸಿಕೊಳ್ಳಬೇಕು ಎಂದು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯ ನೇತ್ರ ಸಹಾಯಕ ಎಂ.ಕೆ.ಸಾಯಿ ರಮೇಶ್ ಸಲಹೆ  ನೀಡಿದರು.

ಸುಗಟೂರು ಗ್ರಾಮದ ಸಬರಮತಿ ಶಾಲೆಯಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಶಾಲಾ ಮಕ್ಕಳ ನೇತ್ರ ಪರೀಕ್ಷಾ ಕಾರ್ಯಕ್ರಮದಲ್ಲಿ, ಸುವರ್ಣ ಚೇತನ ಕಾರ್ಯಕ್ರಮದಡಿ ವಿದ್ಯಾರ್ಥಿಗಳ ಕಣ್ಣು ತಪಾಸಣೆ ಮಾಡಿ, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಿಸಿ ಮಾತನಾಡಿ, ಮನುಷ್ಯನ ಅಂಗಗಳಲ್ಲಿ ಕಣ್ಣು ಪ್ರಧಾನವಾದುದು. ಅದರ ಆರೋಗ್ಯ ಕೆಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಬಿ.ವೆಂಕಟೇಶ್ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕ ಎಸ್.ಆರ್.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಪಿ.ಬಾಲಕೃಷ್ಣಪ್ಪ, ಎಂ.ಶ್ರೀನಿವಾಸರೆಡ್ಡಿ, ಬಿ.ಕೆ.ಜಗದೀಶ್ ಉಪಸ್ಥಿತರಿದ್ದರು.

ಅಹಿಂದ ಸಂಘಟನೆಗೆ ಸಲಹೆ
ಕೋಲಾರ: ಅಹಿಂದ ವರ್ಗಗಳು ಸಂಘಟಿತರಾಗಿ ಮುಂದಿನ ಚುನಾವಣೆಯಲ್ಲಿ ತಮ್ಮ ಬಲ ಪ್ರದರ್ಶನ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಕೀಲುಕೋಟೆ ಕೆ.ವಿ.ಜಯರಾಮ್ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಕೋಲಾರ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾಗಿ ನೇಮಕವಾದ ಸಂದರ್ಭದಲ್ಲಿ ಮಾತನಾಡಿದರು. ಕುರುಬ ಸಮುದಾಯದ ಮುಖಂಡ ಕಲ್ಲೇಶ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT