ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿಜ್ಞಾನ ಕೇಂದ್ರ: ಖಾತೆ ತೊಡಕು

Last Updated 24 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಪ್ರಸ್ತಾವಕ್ಕೆ `ಖಾತೆ~ ತೊಡಕು ಎದುರಾಗಿದೆ. ಸೂಕ್ತ ಸ್ಥಳ, ಸೌಕರ್ಯಗಳಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಜಿಲ್ಲಾ ಕೇಂದ್ರದಲ್ಲಿ ಕೇಂದ್ರ ಸ್ಥಾಪನೆ ವಿಳಂಬವಾಗುತ್ತಿದೆ.

ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಥಳ ಪರಿಶೀಲನೆ ನಡೆಸುತ್ತಿದೆ. ಈಚೆಗೆ ಕೋಲಾರ ಜಿಲ್ಲೆಗೆ ಭೇಟಿ ನೀಡಿದ್ದ ಸಮಿತಿಯ ಸದಸ್ಯರು, ಟಮಕದ ಸರ್ವೆ ನಂ 166 ಮತ್ತು 115ಕ್ಕೆ ಸೇರಿದ 40 ಎಕರೆ ಜಮೀನಿನ ಹಲಸಿನ ತೋಟದಲ್ಲಿರುವ ತೋಟಗಾರಿಕೆ ಕಾಲೇಜಿಗೂ ಭೇಟಿ ನೀಡಿ ಅಲ್ಲಿಯೇ ಕೇಂದ್ರ ಸ್ಥಾಪಿಸುವ ಆಶಯ ವ್ಯಕ್ತಪಡಿಸಿದ್ದರು. ಆದರೆ ಈ ಸ್ಥಳದ ಖಾತೆ ರಾಜ್ಯ ಸರ್ಕಾರದ ಹೆಸರಿನಲ್ಲಿದ್ದು, ತೊಡಕಾಗಿ ಪರಿಣಮಿಸಿದೆ. 

ಈ ಸಮಸ್ಯೆ ಬಗೆಹರಿಸುವಂತೆ ಕೋರಿ ಕೇಂದ್ರದ ಕೃಷಿ ಮತ್ತು ಸಹಕಾರ ಸಚಿವ ಶರದ್ ಪವಾರ್ ಅವರಿಗೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಬಿ.ದಂಡಿನ ಮತ್ತು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಪತ್ರ ಬರೆದಿದ್ದರು. ಆ ನಂತರ ಒಮ್ಮೆ ಭೇಟಿ ಮಾಡಿ ಚರ್ಚಿಸಿದ್ದಾರೆ.

ಹಿನ್ನೆಲೆ: ಕೇಂದ್ರ ಸ್ಥಾಪಿಸಬೇಕು ಎಂದು ಕೋರಿ ವಿಶ್ವವಿದ್ಯಾನಿಲಯವು ಕೇಂದ್ರದ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ ಸಲ್ಲಿಸಿದ್ದ ಪ್ರಸ್ತಾವನೆ ಮೇರೆಗೆ ಸಮಿತಿಯೊಂದು ಸ್ಥಳಕ್ಕೆ ಭೇಟಿ ನೀಡಿತ್ತು. ನಂತರ ಮಂಡಳಿಯ ಉಪಪ್ರಧಾನ ನಿರ್ದೇಶಕರು (ಡೆಪ್ಯೂಟಿ ಡೈರೆಕ್ಟರ್ ಜನರಲ್) ಪತ್ರ ಬರೆದು, ಜಮೀನಿನ ಖಾತೆಯನ್ನು ವಿಶ್ವವಿದ್ಯಾನಿಲಯದ ಹೆಸರಿಗೆ ಹಸ್ತಾಂತರಿಸಿಕೊಳ್ಳುವಂತೆ ಸೂಚಿಸಿದ್ದರು.
 
ಅದಕ್ಕೆ ಪ್ರತಿಕ್ರಿಯಿಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ಬಿ.ದಂಡಿನ ಸಚಿವರಿಗೆ ಫೆ. 7ರಂದು ಪತ್ರ ಬರೆದಿದ್ದಾರೆ.

`ಸರ್ಕಾರ ಯಾವುದೇ ವಿಶ್ವವಿದ್ಯಾನಿಲಯ, ವಿಭಾಗ, ಕಾಲೇಜುಗಳ ಜಮೀನುಗಳ ಮಾಲೀಕತ್ವವನ್ನು ವರ್ಗಾಯಿಸುವುದಿಲ್ಲ. ತೋಟಗಾರಿಕೆ ಕಾಲೇಜು ಇರುವ ಜಮೀನು ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಒಕ್ಕೂಟಕ್ಕೆ (ಕರ್ನಾಟಕ ಸ್ಟೇಟ್ ಹಾರ್ಟಿಕಲ್ಚರ್ ಡೆವಲಪ್‌ಮೆಂಟ್ ಫೆಡರೇಶನ್) ಸೇರಿದೆ.

ಈ ನಿಟ್ಟಿನಲ್ಲಿ ಜಮೀನನ್ನು ಕೃಷಿ ವಿಜ್ಞಾನ ಕೇಂದ್ರಸ್ಥಾಪನೆಯೂ ಸೇರಿದಂತೆ ಮಂಡಳಿಯ ಕಾರ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ವಂದಿತಾಶರ್ಮಾ ಕಳೆದ ಜುಲೈ 23ರಂದು ಅನುಮತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸ್ಥಾಪನೆಗೆ ಅನುವು ಮಾಡಿಕೊಡಬೇಕು~ ಎಂದು ಅವರು ಮನವಿ ಮಾಡಿದ್ದಾರೆ.

ಸರ್ಕಾರದ ಪತ್ರ: ಇದರ ಜೊತೆಯಲ್ಲೆ ವಂದಿತಾ ಶರ್ಮಾ ಅವರೂ ಮಂಡಳಿಯ ಉಪಪ್ರಧಾನ ನಿರ್ದೇಶಕರಿಗೆ ಫೆ.2ರಂದು ಪತ್ರ ಬರೆದಿದ್ದಾರೆ. ತೋಟಗಾರಿಕೆ ಕಾಲೇಜು ಇರುವ ಸ್ಥಳವನ್ನು ಅಗತ್ಯವಿರುವ ಎಲ್ಲ ಬಗೆಯಲ್ಲೂ ಬಳಸಿಕೊಳ್ಳಬಹುದು. ಕನಿಷ್ಠ 30 ವರ್ಷಗಳವರೆಗೆ ಈ ಸ್ಥಳದಲ್ಲಿ ತೋಟಗಾರಿಕೆ ಕಾಲೇಜಿಗೆ ಸರ್ಕಾರದ ಕಡೆಯಿಂದ ಯಾವ ತೊಂದರೆಯೂ ಇರುವುದಿಲ್ಲ ಎಂಬ ಭರವಸೆಯನ್ನೂ ನೀಡಿದ್ದಾರೆ.

ಇಡೀ ಜಮೀನನ್ನು ತೋಟಗಾರಿಕೆ ಕಾಲೇಜಿಗೆ ಬಿಟ್ಟುಕೊಟ್ಟಿರುವುದರಿಂದ ಮತ್ತೆ ಖಾತೆ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಜಮೀನನ್ನು ಬಳಸಲು ತೋಟಗಾರಿಕೆ ವಿಶ್ವವಿದ್ಯಾನಿಲಯಕ್ಕೆ ಅಧಿಕಾರ ನೀಡಲಾಗಿದೆ ಎಂಬುದು ಸರ್ಕಾರದ ಸ್ಪಷ್ಟನೆ.

ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆಯಾದರೆ ತೋಟಗಾರಿಕೆ ಕಾಲೇಜಿಗೂ ಹೆಚ್ಚು ಅನುಕೂಲ. ರಾಷ್ಟ್ರೀಯ ಹೆದ್ದಾರಿ 4ರ ಸಮೀಪದಲ್ಲೆ ಇರುವುದರಿಂದ ಸುತ್ತಮುತ್ತಲಿನ ರೈತರಿಗೂ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು.

ನಾಚೇಗೌಡ, ತೋಟಗಾರಿಕೆ ಕಾಲೇಜು ಡೀನ್ 

ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಕೋರಿ ತೋಟಗಾರಿಕೆ ಕಾಲೇಜು ಡೀನ್ ಅವರೊಡನೆ ಕೇಂದ್ರ ಸಚಿವ ಶರದ್‌ಪವಾರ್ ಅವರನ್ನೂ ಇತ್ತೀಚೆಗೆ ಭೇಟಿ ಮಾಡಿದ್ದೆ.
 
ಮುಂದಿನ ವಾರ ಮತ್ತೆ ಸಚಿವರನ್ನು ಭೇಟಿ ಮಾಡಲು ಯತ್ನಿಸುವೆ. ಕೇಂದ್ರ ಸ್ಥಾಪನೆಯಾದರೆ ಕೋಟ್ಯಂತರ ರೂಪಾಯಿ ಅನುದಾನ ದೊರಕುತ್ತದೆ. ವಿಜ್ಞಾನಿಗಳ ಸಂಶೋಧನೆಗೆ ಹಾಗೂ ರೈತರಿಗೂ ಅನುಕೂಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ.

ಕೆ.ಶ್ರೀನಿವಾಸಗೌಡ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT