ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ

ನಾಲ್ಕು ತಿಂಗಳಾದರೂ ಪೂರ್ಣಗೊಳ್ಳದ ಕಾಮಗಾರಿ: ಅಥ್ಲಿಟ್‌ಗಳ ಪರದಾಟ
Last Updated 6 ಮೇ 2016, 5:35 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಕಾಮಗಾರಿ ನಾಲ್ಕು ತಿಂಗಳಿಂದ ನನೆಗುದಿಗೆ ಬಿದ್ದಿದೆ. ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಅಷ್ಟೊರೊಳಗೆ ಕಾಮಗಾರಿ ಮುಗಿಯುವುದೇ ಎಂದು ಕ್ರೀಡಾಪಟುಗಳು ಎದುರು ನೋಡುತ್ತಿದ್ದಾರೆ.

‘ಸೋಲಾರ್ ಸಿಟಿ’ ಎಂಬ ಸಂಸ್ಥೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ₹ 2.5 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣದಲ್ಲಿ ಟ್ರ್ಯಾಕ್ ನಿರ್ಮಿಸುವ ಜವಾಬ್ದಾರಿ ವಹಿಸಿಕೊಂಡಿದೆ.

ಕಳೆದ ನವೆಂಬರ್ 9ರಂದು ಶಂಕುಸ್ಥಾಪನೆ ನೆರವೇರಿಸಿದ್ದ ಜಿಲ್ಲಾಧಿಕಾರಿ, ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಸೋಲಾರ್ ಸಿಟಿ ಅಂಗಸಂಸ್ಥೆಯಾದ ಕಾಮಧೇನು ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯು ತಕ್ಷಣದಿಂದಲೇ ಕಾಮಗಾರಿ ಆರಂಭಿಸಿತ್ತು.

400 ಮೀಟರ್ ಉದ್ದದ 8 ಪಥದ ಟ್ರ್ಯಾಕ್ ಹಾಗೂ 100 ಮೀಟರ್ ಉದ್ದದ ಟ್ರ್ಯಾಕ್‌ ನಿರ್ಮಾಣಕ್ಕಾಗಿ ಕ್ರೀಡಾಂಗಣವನ್ನು ಅಗೆದು ಕಲ್ಲು, ಜಲ್ಲಿ, ಹಾಗೂ ಮಣ್ಣನ್ನು ಹಾಕಿ ಹದಗೊಳಿಸಲಾಗಿತ್ತು. ಶೇ 50ರಷ್ಟು ಪೂರ್ಣಗೊಂಡಿದ್ದ ಕಾಮಗಾರಿ ಜನವರಿ 4ರಿಂದ ಸ್ಥಗಿತಗೊಂಡಿದೆ.

‘ಕ್ರೀಡಾಂಗಣದಲ್ಲಿ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ತಯಾರಿ ನಡೆಸುವ 50ಕ್ಕೂ ಹೆಚ್ಚು ಕ್ರೀಡಾಪಟುಗಳು ನಿತ್ಯ ಅಭ್ಯಾಸ ಮಾಡುತ್ತಾರೆ. ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ  ಅಭ್ಯಾಸ ತೊಂದರೆಯಾಗಿದೆ’ ಎಂದು ಮಾಜಿ ಅಥ್ಲೀಟ್‌ವೊಬ್ಬರು ಹೇಳಿದರು.

‘ಅಲ್ಲದೆ ಜಾಗಿಂಗ್, ವಾಯು ವಿಹಾರಕ್ಕೆ ನಿತ್ಯ ಸಾರ್ವಜನಿಕರೂ ಕೂಡ ಬರುತ್ತಾರೆ. ಮಣ್ಣನ್ನು ಅಗೆದು ಹಾಗೆ ರಾಶಿ ಮಾಡಿ ಬಿಟ್ಟಿರುವುದರಿಂದ ಅವರಿಗೂ ತೊಂದರೆಯಾಗುತ್ತಿದೆ’ ಎಂದು ಅವರು ತಿಳಿಸಿದರು.

5 ಕಡೆ ಮಾತ್ರ: ‘ಬೆಂಗಳೂರು, ಚಿತ್ರದುರ್ಗ, ಮಂಗಳೂರು, ಮೈಸೂರು ಹಾಗೂ ಕಲಬುರ್ಗಿ ಸೇರಿದಂತೆ 5 ಕಡೆ ಮಾತ್ರ ಸಿಂಥೆಟಿಕ್ ಟ್ರ್ಯಾಕ್ ಸೌಲಭ್ಯ ಇದೆ. ಜಿಲ್ಲೆಯ ಕಾಮಗಾರಿ ಪೂರ್ಣಗೊಂಡೆರೆ ರಾಜ್ಯದಲ್ಲಿ ಒಟ್ಟು 6 ಕಡೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾದಂತಾಗುತ್ತದೆ ಎಂದು ಕ್ರೀಡಾ ತರಬೇತಿದಾರರೊಬ್ಬರು ಮಾಹಿತಿ ನೀಡಿದರು.

‘ಇದರಿಂದಾಗಿ ಕೋಲಾರ ಭಾಗದ ಕ್ರೀಡಾಪಟುಗಳಿಗೆ ಅದರಲ್ಲೂ ಅಥ್ಲೀಟ್‌ಗಳಿಗೆ ಭಾರಿ ಅನುಕೂಲವಾಗಲಿದೆ. ಅಲ್ಲದೆ, ಇಲ್ಲಿನವರು ಅಭ್ಯಾಸಕ್ಕಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಯೋಜನ ಇಲ್ಲದಂತಾಗುತ್ತದೆ: ‘ಮುಂದಿನ ತಿಂಗಳಿಂದ ಮಳೆ ಬೀಳುವ ಸಾಧ್ಯತೆ ಇದೆ. ಮೈದಾನದಲ್ಲಿ ನೀರು ನಿಂತರೆ ಈಗ ಮಾಡಿರುವ ಕಾಮಗಾರಿಯೂ ಹಾಳಾಗಿ, ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗುತ್ತದೆ’ ಎಂದು ಕ್ರೀಡಾಂಗಣಕ್ಕೆ ನಿತ್ಯ ಜಾಗಿಂಗ್‌ಗೆ ಬರುವ ಮುನೇಶ್ವರದ ಬೈಚೇಗೌಡ ಅಭಿಪ್ರಾಯಟ್ಟರು.

‘ಮಳೆಗೂ ಮುನ್ನ ಕೆಲಸ ಮುಗಿಸಿದರೆ ಒಳ್ಳೆಯದು. ಇಲ್ಲದಿದ್ದರೆ ಮಳೆಗಾಲ ಮುಗಿದ ಬಳಿಕ ಮತ್ತೆ ಹೊಸದಾಗಿ ಕೆಲಸ ಆರಂಭಿಸಬೇಕಾಗುತ್ತದೆ. ಅಲ್ಲದೆ, ಇದುವರೆಗೆ ಮಾಡಿರುವ ಖರ್ಚು ಕೂಡ ವ್ಯರ್ಥವಾಗುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಜಿಲ್ಲಾಧಿಕಾರಿಗೆ ಯಾವುದೊ ಬಡ್ತಿ ಸಿಕ್ಕಿದ್ದು, ಕೆಲ ತಿಂಗಳಲ್ಲೇ ಅವರು ಇಲ್ಲಿಂದ ವರ್ಗಾವಣೆಯಾಗುತ್ತಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಟ್ರ್ಯಾಕ್ ನಿರ್ಮಾಣಕ್ಕೆ ಕಾರಣರಾದ ಅವರೇ ವರ್ಗಾವಣೆಯಾದರೆ, ಕಾಮಗಾರಿ ಶಾಶ್ವತವಾಗಿ ನನೆಗುದಿಗೆ ಬೀಳುತ್ತದೆ’ ಎಂದು ವಾಯುವಿಹಾರಕ್ಕೆ ಬರುವ ಗೌರಿಪೇಟೆಯ ಎನ್. ಸತೀಶ್ ಆತಂಕ ವ್ಯಕ್ತಪಡಿಸಿದರು.

ಬೇಲಿ ನಿರ್ಮಾಣ: ‘ಹಾಲೆಂಡ್‌ನಿಂದ ಸಿಂಥೆಟಿಕ್ ಬಂದ ತಕ್ಷಣ ಟ್ರ್ಯಾಕ್ ಅಳವಡಿಕೆ ಕೆಲಸ ಮುಗಿಯಲಿದೆ. ಬಳಿಕ ಟಾಟಾ ಪವರ್ ಕಂಪೆನಿ ತನ್ನ ಸಾಮಾಜಿ ಹೊಣೆಗಾರಿಕೆಯಡಿ ಕ್ರೀಡಾಂಗಣದ ಸುತ್ತ ಬೇಲಿ ಹಾಗೂ ನೆರಳಿಗಾಗಿ ಸುತ್ತಲೂ ಮೇಲ್ಛಾವಣಿ ನಿರ್ಮಿಸಿ ಕೊಡಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ತಾಂತ್ರಿಕ ತೊಂದರೆಯಿಂದಾಗಿ ಹಾಲೆಂಡ್‌ನಿಂದ ಸಿಂಥೆಟಿಕ್ ಬರಲು ತಡವಾಗುತ್ತಿದೆ. ಅಲ್ಲಿ ಸಿಗುವ ಸಿಂಥೆಟಿಕ್ ಅಂತರರಾಷ್ಟ್ರೀಯ ಗುಣಮಟ್ಟದ್ದಾಗಿದೆ. ರಾಜ್ಯದ ಐದು ಕಡೆ ಅಳವಡಿಸಲಾಗಿರುವ ಸಿಂಥೆಟಿಕ್ ಅಲ್ಲಿಂದಲೇ ತರಿಸಿದ್ದಾಗಿದೆ. ಗುಣಮಟ್ಟಕ್ಕೆ ಆದ್ಯತೆ ಕೊಟ್ಟು ನಾವು ಕೂಡ ಅಲ್ಲಿಗೆ ಆರ್ಡರ್ ಕೊಟ್ಟಿದ್ದು, ಸದ್ಯದಲ್ಲೇ ಬರಲಿದೆ’ ಎಂದು ಸೋಲಾರ್ ಸಿಟಿ ಸಂಸ್ಥೆಯವರು ಹೇಳಿದರು.

ಆಗಸ್ಟ್‌ನೊಳಗೆ ಕಾಮಗಾರಿ ಪೂರ್ಣ
ಟ್ರ್ಯಾಕ್‌ ನಿರ್ಮಾಣಕ್ಕೆ ಬೇಕಾದ ಸಿಂಥೆಟಿಕ್‌ ಹಾಲೆಂಡ್‌ ದೇಶದಿಂದ ಬರಬೇಕಿದೆ. ಹಾಗಾಗಿ ಕಾಮಗಾರಿ ನಿಂತಿದೆ. ಈ ತಿಂಗಳೊಳಗೆ ಬರುವ ಸಾಧ್ಯತೆ ಇದ್ದು, ಆಗಸ್ಟ್‌ನೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
-ಡಾ.ಕೆ.ವಿ. ತ್ರಿಲೋಕಚಂದ್ರ, ಜಿಲ್ಲಾಧಿಕಾರಿ

** ** ** 
ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗಿರುವುದರಿಂದ, ಆದಷ್ಟು ಬೇಗ ಕಾಮಗಾರಿ ಮುಗಿಸಿದರೆ ಅನುಕೂಲವಾಗುತ್ತದೆ.
-ಆರ್‌.ಹರೀಶ್,
ರಾಷ್ಟ್ರಮಟ್ಟದ ಅಥ್ಲಿಟ್

** *** **
ವಾರಕ್ಕೆರಡು ಬಾರಿ ಬೆಂಗಳೂರಿಗೆ ಹೋಗಿ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡುತ್ತೇವೆ. ಟ್ರ್ಯಾಕ್ ಬೇಗ ನಿರ್ಮಾಣವಾದರೆ, ಅಭ್ಯಾಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುವುದು ತಪ್ಪುತ್ತದೆ.
-ವಿ.ಅರುಣ್,
ರಾಷ್ಟ್ರಮಟ್ಟದ ಅಥ್ಲಿಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT