ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಎಂಬ ಮೂಢನಂಬಿಕೆ

ನಮ್ಮೂರು ನಮ್ಮ ಜಿಲ್ಲೆ
Last Updated 19 ಏಪ್ರಿಲ್ 2015, 12:31 IST
ಅಕ್ಷರ ಗಾತ್ರ

ಪೂರ್ವ ಮುಂಗಾರು ಮಳೆ ಬಿದ್ದ ತಕ್ಷಣ ತೆಂಗಿನ ತೊಟಗಳ ಒಣಗರಿ ಹಾಗೂ ಕೆಳಗೆ ಬಿದ್ದಿರುವ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುವ ಅವೈಜ್ಞಾನಿಕ ಪದ್ಧತಿ ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಚಾಲ್ತಿಯಲ್ಲಿದೆ.

‘ಮೂರು ತಿಂಗಳು ಸತತವಾಗಿ ಬಿಸಿಲಿನಲ್ಲಿ ಬೆಂದ ತೆಂಗಿನ ಮರಗಳು ಬಾಡಿರುತ್ತವೆ. ಮಳೆ ಬಿದ್ದ ತಕ್ಷಣ ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಾಗಿ ಸುಳಿಗಳು ಸೊಕ್ಕುತ್ತವೆ. ತೆಂಗಿನ ಮರಗಳಲ್ಲಿ ಗೂಡು ಕಟ್ಟಿಕೊಂಡಿರುವ ಅಪಾಯಕಾರಿ ಕೀಟಗಳು ಮಟ್ಟೆ ಇಟ್ಟು ವಂಶಾಭಿವೃದ್ಧಿಯಲ್ಲಿ ತೊಡಗುತ್ತವೆ. ಬೆಂಕಿ ಹಾಕುವುದರಿಂದ ವಾತಾವರಣ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ. ಕೃಷಿ ತ್ಯಾಜ್ಯ ಸುಟ್ಟ ಬೂದಿ ಉತ್ತಮ ಗೊಬ್ಬರವೂ ಹೌದು. ಹೊಗೆಯಿಂದ ಅಪಾಯಕಾರಿ ಕೀಟಗಳು ಸಾಯುತ್ತವೆ’ ಎನ್ನುವುದು 75 ವರ್ಷದ ರೈತ ಗಂಗಣ್ಣ ಅವರ ನಂಬಿಕೆ.

‘ತೊಟದಲ್ಲಿ ಹೊಗೆಯಾಡಿದರೆ ಮರಗಳಿಗೆ ರೋಗ ಬರುವುದಿಲ್ಲ’ ಎಂಬ ಪರಂಪರಾಗತ ನಂಬಿಕೆಯನ್ನು ಅವರು ಒತ್ತಿ ಹೇಳುತ್ತಾರೆ.

ಆದರೆ ಸಾವಯವ ಕೃಷಿಕ ಶಿವನಂಜಪ್ಪ ಬಾಳೆಕಾಯಿ ಈ ವಾದವನನ್ನು ಒಪ್ಪುವುದಿಲ್ಲ. ‘ರೈತರ ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ. ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಅಪಾಯಕಾರಿ ಕೀಟಗಳ ಜೊತೆ ರೈತ, ಪರಿಸರ ಸ್ನೇಹಿ ಕೀಟಗಳು ಸತ್ತು ಹೋಗುತ್ತವೆ. ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿರುವ ರೈತರಲ್ಲಿ ಅಪಾರ ಕೃಷಿ ಜ್ಞಾನವಿದೆ. ಅದರಲ್ಲಿ ಟೊಳ್ಳು–ಗಟ್ಟಿಯನ್ನು ವಿಂಗಡಿಸಬೇಕಾದ ಅಗತ್ಯವಿದೆ’ ಎಂದು ತಮ್ಮ ಪ್ರತಿವಾದ ಮುಂದಿಡುತ್ತಾರೆ.

ಬೆಂಕಿ ಬೇಡವೇ ಬೇಡ: ತೋಟದಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಹಲವು ಅಪಾಯಗಳು ಎದುರಾಗುತ್ತವೆ. ಬೆಂಕಿ ತಹಬಂದಿಗೆ ಬರದಿದ್ದರೆ ತೋಟವೇ ಸುಟ್ಟು ಹೋಗುತ್ತದೆ. ಮೊದಲ ಮಳೆ ಬಿದ್ದಾಗ ಮೇಲೆದ್ದು ಬರುವ ಅಸಂಖ್ಯಾತ ಇರುವೆ, ಗೆದ್ದಲು, ಎರೆಹುಳುಗಳ ಅಸ್ತಿತ್ವಕ್ಕೆ ಬೆಂಕಿ ಅಪಾಯ ತಂದೊಡ್ಡುತ್ತದೆ.

ರೈತಸ್ನೇಹಿ ಕೀಟಗಳು ಭೂಮಿಯನ್ನು ಸಡಿಲಗೊಳಿಸುವುದರಿಂದ ಗಿಡಮರಗಳ ಬೇರಿನ ಉಸಿರಾಟ ಸರಾಗವಾಗುತ್ತದೆ. ಮಣ್ಣಿಗೆ ತೇವಾಂಶ ಹಿಡಿದಿಡುವ ಸಾಮರ್ಥ್ಯ ಹೆಚ್ಚುತ್ತದೆ. ಬೆಂಕಿ ಹಾಕುವುದರಿಂದ ಕೀಟಗಳ ಅಸ್ತಿತ್ವಕ್ಕೆ ಅಪಾಯ ಬರುತ್ತದೆ. ಮಾತ್ರವಲ್ಲದೆ ಹೊಗೆಯಿಂದ ಗಿಡಗಳ ದ್ಯುತಿಸಂಶ್ಲೇಷಣಾ ಕ್ರಿಯೆಗೆ (ಆಹಾರ ತಯಾರಿಕೆ) ಧಕ್ಕೆಯಾಗುತ್ತದೆ.

ಹೊದಿಕೆಯಂತೆ ಬಳಸಿ: ಮಣ್ಣಿನಲ್ಲಿ ತೇವಾಂಶ ಹಿಡಿದಿಡಲು ಮತ್ತು ಭೂಮಿಯ ಉಷ್ಣಾಂಶದ ಸ್ಥಿರತೆ ಕಾಪಾಡಲು ಕೆಲವು ತೋಟಗಳಲ್ಲಿ ಕೃಷಿ ತ್ಯಾಜ್ಯವನ್ನು ಮರಗಳ ಸುತ್ತ ಹೊದಿಕೆ ಮಾಡು
ತ್ತಾರೆ. ಆದರೆ ಪೂರ್ವ ಮುಂಗಾರು ಪ್ರಾರಂಭವಾದ ತಕ್ಷಣ ಉಳುಮೆ ಮಾಡುವ ಉದ್ದೇಶದಿಂದ ಅದೇ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಾರೆ. ತೋಟದ ಉಳುಮೆ ಮಾಡಲೇ ಬೇಕು ಎನ್ನುವ ರೈತರು ಮೊದಲು ತ್ಯಾಜ್ಯವನ್ನೆಲ್ಲ ಒಂದೆಡೆ ಸಂಗ್ರಹಿಸಿ ಕಾಂಪೋಸ್ಟ್‌ ಗೊಬ್ಬರ ತಯಾರಿಸಿಕೊಳ್ಳಬಹುದು. ಮುಚ್ಚಿಗೆ ಪದ್ಧತಿ ಅನುಸರಿಸುವವರು ಉಳುಮೆ ಮಾಡದೆ ಹಾಗೇ ಬಿಟ್ಟರೂ ತೊಂದರೆಯಿಲ್ಲ.

ಜೀವಂತ ಮುಚ್ಚಿಗೆ: ಹೊಸ ಮಳೆಗೆ ಜೀವ ಪಡೆಯುವ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳು ರೈತರ ಪರವಾಗಿ ತಾವೇ ಉಳುಮೆ ಕೆಲಸ ಮಾಡುತ್ತವೆ. ಹುರುಳಿ, ಸೆಣಬು, ಸೋಯಾ, ಹಲಸಂದೆಯಂಥ ಧಾನ್ಯಗಳನ್ನು ಹದ ನೋಡಿ ಮುಚ್ಚಿಗೆ ಮೇಲೆ ಎರಚಿದರೆ, ತ್ಯಾಜ್ಯವೆಲ್ಲ ಕರಗಿ ಹೊಸ ಬೆಳೆಗೆ ಗೊಬ್ಬರವಾಗಿ ಪರಿಣಮಿಸುತ್ತದೆ. ನೋಡು ನೋಡುತ್ತಿದ್ದಂತೆ ತೋಟದಲ್ಲಿ ಜೀವಂತ ಮುಚ್ಚಿಗೆ ಮೈದಾಳುತ್ತದೆ. ಮಳೆ ನೀರಿನ ಅಪವ್ಯಯ ತಪ್ಪುತ್ತದೆ. ಬಿದ್ದ ಮಳೆ ನೀರು ನಿರಾಯಾಸವಾಗಿ ಅಂತರ್ಜಲ ಸೇರುತ್ತದೆ.

ಸಾಧ್ಯತೆಗೆ ಕಡಿವಾಣ: ಕೃಷಿ ತ್ಯಾಜ್ಯ ಸುಡುವುದರಿಂದ ಪ್ರಕೃತಿಯಲ್ಲಿ ವಿನಾಕಾರಣ ಮನುಷ್ಯ ಹಸ್ತಕ್ಷೇಪ ಮಾಡಿದಂತೆ ಆಗುತ್ತದೆ. ಇದು ಪ್ರಕೃತಿಯ ಅನಂತ ಸಾಧ್ಯತೆಗೆ ಕಡಿವಾಣ ಹಾಕಿದಂತೆ ಆಗುತ್ತದೆ.
ತೆಂಗಿನ ತೋಟಗಳಿಗೆ ಬೆಂಕಿ ಇಡುವ ಕೆಲವು ರೈತರು ಮೇವು ಸಮೃದ್ಧವಾಗಿ ಬರುತ್ತದೆ ಎಂದು ಹೊಲದ ಬದುಗಳಿಗೆ ಹಾಗೂ ಕಾಡಿಗೆ ಬೆಂಕಿ ಇಡುವ ಪರಿಪಾಠವನ್ನೂ ಅನುಸರಿಸುತ್ತಿದ್ದಾರೆ.

‘ಎಲ್ಲ ಜಾತಿಯ ಮರಗಿಡಗಳೂ ತಮ್ಮ ತರಗೆಲೆಯನ್ನೇ ಆಹಾರವಾಗಿ ಪರಿವರ್ತಿಸಿಕೊಳ್ಳುವ ಸಾಮರ್ಥ್ಯ ಪಡೆದಿವೆ. ಹೀಗಾಗಿ ಕೃಷಿ ತ್ಯಾಜ್ಯಗಳನ್ನು ಯಾವುದೇ ಕಾರಣಕ್ಕೂ ಸುಡಬಾರದು. ಕೃಷಿ ತ್ಯಾಜ್ಯ, ತೋಟ, ಅರಣ್ಯಕ್ಕೆ ಬೆಂಕಿ ಹಾಕುವ ಮೂಢನಂಬಿಕೆ ವಿರುದ್ಧ ರೈತರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ರೂಪಿಸಬೇಕು’ ಎನ್ನುತ್ತಾರೆ ಶಿವನಂಜಯ್ಯ.

ಅಂದ ಹಾಗೆ ಇನ್ನೊಂದು ಮಾತು, ಶಿವನಂಜಯ್ಯ ಅವರು ತಮ್ಮ ತೋಟದಲ್ಲಿ ಕಳೆದ 30 ವರ್ಷದಿಂದ ಉಳುಮೆ ಮಾಡಿಲ್ಲ. ಇದು ಇಳುವರಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT