ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿಗೆ ಬೊಗಸೆಯೊಡ್ಡಿ ಬೆಳೆ ತೆಗೆದ ರೈತರು

Last Updated 17 ಫೆಬ್ರುವರಿ 2013, 5:27 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ದಟ್ಟವಾದ ಮಂಜು ಸುರಿದರೆ ವಾಹನ ಚಾಲಕರು ತಬ್ಬಿಬ್ಬಾಗುತ್ತಾರೆ. ವಾಹನಗಳಿಗೆ ಹೆಡ್ ಲೈಟ್ ಹಾಕಿಕೊಂಡು ಚಲಾಯಿಸುತ್ತಾರೆ. ಮುಂಜಾನೆ ಹೊತ್ತಲ್ಲಿ ರಸ್ತೆ ಅಪಘಾತ ಉಂಟಾದರಂತೂ ಮಂಜನ್ನು ಶಪಿಸುವುದು ಸಾಮಾನ್ಯ. ಆದರೆ ರೈತರು ಮಂಜನ್ನು ಬಳಸಿಕೊಂಡು ಬೆಳೆ ಮಾಡುವ ವಿಷಯ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಶ್ರೀನಿವಾಸಪುರ ಸೇರಿದಂತೆ ಕೋಲಾರ ಜಿಲ್ಲೆಯ ಕೆಲವು ರೈತರು ಸಾಂಪ್ರದಾಯಿಕವಾಗಿ ಮಂಜನ್ನು ಬಳಸಿಕೊಂಡು ಬೆಳೆ ತೆಗೆಯುತ್ತಿದ್ದಾರೆ. ಇದು ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಲಾಭದಾಯಕವೂ ಹೌದು.

ಹಿಂಗಾರಿನಲ್ಲಿ ಸುರಿಯುವ ಕಡೆ ಮಳೆಯ ತೇವವನ್ನು ಬಳಸಿಕೊಂಡು, ಗದ್ದೆ ಬಯಲನ್ನು ಉತ್ತು ಕಳ್ಳೆ ಅಥವಾ ಕೊತ್ತಂಬರಿ ಬೀಜ ಬಿತ್ತನೆ ಮಾಡುತ್ತಾರೆ. ಅದು ಹದವಾಗಿ ಮೊಳೆತರೆ ಸಾಕು, ಮುಂದೆ ಸುರಿಯುವ ಮಂಜಿಗೇ ಬೆಳೆ ಆಗುತ್ತದೆ. ಯಾವುದೇ ವೆಚ್ಚವಿಲ್ಲದೆ ಕೈಗೆ ಸಿಗುತ್ತದೆ.

ಕಳೆದ ವರ್ಷ ತಾಲ್ಲೂಕಿನ ಚಲ್ದಿಗಾನಹಳ್ಳಿ ಹಾಗೂ ಯಲವಹಳ್ಳಿ ರೈತರು ಗದ್ದೆಗಳಲ್ಲಿ ಕಳ್ಳೆ ಬಿತ್ತನೆ ಮಾಡಿ ಉತ್ತಮ ಫಸಲು ಪಡೆದಿದ್ದರು. ಈ ವರ್ಷವೂ ಕೆಲವು ಕಡೆಗಳಲ್ಲಿ ಮಾತ್ರ ಬಿತ್ತಲಾಗಿದೆ. ಆದರೆ ಮಂಜಿನ ಕೊರತೆಯಿಂದಾಗಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಆದರೂ ಈ ಪುಕ್ಕಟೆ ಬೆಳೆ ರೈತನ ಕೈ ಕಚ್ಚಿಲ್ಲ ಎಂಬುದು ವಿಶೇಷ.

ಮಂಜಿಗೆ ಬೆಳೆ ಇಡುವುದು ತಾಲ್ಲೂಕಿನ ರೈತರಿಗೆ ಹೊಸದಲ್ಲ. ಹಿಂಗಾರು ಮಳೆ ಸರಿಯಾಗಿ ಆಗುತ್ತಿದ್ದ ಕಾಲದಲ್ಲಿ ಮಂಜಿನ ಬೆಳೆ ಸಾಮಾನ್ಯವಾಗಿತ್ತು. ಒಮ್ಮೆ ಮಂಜಿಗೆ ಬಿತ್ತನೆ ಮಾಡಿ 6 ಕ್ವಿಂಟಲ್ ಕಳ್ಳೆ ಬೆಳೆದಿದ್ದೆವು. ಈಗ ಮಂಜಿಗೂ ಬರ ಬಂದಿದೆ ಎಂದು ಪನಸಮಾಕನಹಳ್ಳಿ ಗ್ರಾಮದ ಕೃಷಿಕ ಮಹಿಳೆ ವೆಂಕಟಮ್ಮ `ಪ್ರಜಾವಾಣಿ'ಗೆ ತಿಳಿಸಿದರು.

ಈ ಪದ್ಧತಿ ಕೇವಲ ಕಳ್ಳೆ ಮತ್ತು ಕೊತ್ತಂಬರಿ ಬೆಳೆಗೆ ಸೀಮಿತವಾಗಿಲ್ಲ. ಕೆರೆಗಳಿಗೆ ನೀರು ಬರುತ್ತಿದ್ದ ಕಾಲದಲ್ಲಿ ಕೆರೆಯ ಹಿನ್ನೀರಿನ ತೇವವನ್ನು ಬಳಸಿಕೊಂಡು ಕರಬೂಜ ಬೆಳೆಯುತ್ತಿದ್ದರು. ಆ ನಾಟಿ ತಳಿಯ ಕರಬೂಜದ ರುಚಿ ಹಾಗೂ ವಾಸನೆ ಸವಿದವರಿಗೇ ಗೊತ್ತು. ಬೇಸಿಗೆಯಲ್ಲಿ ನಡೆಯುವ ರಥೋತ್ಸವ ಪರಿಷೆಗಳಲ್ಲಿ ಕರಬೂಜ ಹಣ್ಣಿನ ಪಾನಕ ಸಾಮಾನ್ಯವಾಗಿತ್ತು. ಆದರೆ ಈಗ ಆ ತಳಿಯೂ ಇಲ್ಲ. ರುಚಿಯೂ ಇಲ್ಲ.

ಕೃಷಿಯಲ್ಲಿ ಆಧುನಿಕ ಪದ್ಧತಿಗಳು ಜಾರಿಗೆ ಬಂದಿವೆ. ಹನಿ ನೀರಾವರಿ, ತುಂತುರು ನೀರಾವರಿ ಸಾಮಾನ್ಯವಾಗಿದೆ. ಕೃಷಿಯಲ್ಲಿ ನೀರಿನ ಮಿತ ಬಳಕೆ ಆಗುವುದನ್ನು ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿದೆ. ಮಳೆ ಆಶ್ರಿತ ಬೇಸಾಯ ಇದ್ದ ಕಾಲದಲ್ಲಿ ನಮ್ಮ ಹಿರಿಯರು, ಮಂಜಿನ ತೇವವನ್ನೂ ಬಿಡದೆ ಬಳಸಿಕೊಂಡಿದ್ದಾರೆ. ಮಂಜಿನಿಂದ ಬೆಳೆಯುವ ಬೆಳೆಗಳನ್ನು ಕಂಡುಕೊಂಡಿದ್ದಾರೆ. ಆ ಪದ್ಧತಿ ಮುಂದುವರಿದಿದೆ. ನಷ್ಟದ ಕಸುಬೆನಿಸಿರುವ ಕೃಷಿಯಲ್ಲಿ ಯಾವುದನ್ನೂ ಬಿಡುವಂತಿಲ್ಲ.
                  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT