ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಅರ್ಜಿಗೆ ಮಂಜೂರಾತಿ ನೀಡಿ

Last Updated 7 ಏಪ್ರಿಲ್ 2017, 10:12 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಸುಮಾರು 19 ಸಾವಿರ ರೈತರ ಬಗರ್‌ ಹುಕುಂ ಸಾಗುವಳಿ ಅರ್ಜಿಗಳು ಬಾಕಿ ಇದ್ದು, ಈ ಅರ್ಜಿಗಳಿಗೆ ಜುಲೈ ಅಂತ್ಯದೊಳಗೆ ಮಂಜೂರಾತಿ ನೀಡಬೇಕು’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಮಣರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಬಗರ್ ಹುಕುಂ ಸಾಗುವಳಿದಾರರು ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾದಿದ್ದಾರೆ. ಈ ಅರ್ಜಿದಾರರನ್ನು ಹೆಚ್ಚು ಕಾಯಿಸಬೇಡಿ’ ಎಂದು ತಿಳಿಸಿದರು.

‘ಅಕ್ರಮವಾಗಿ ನಿರ್ಮಾಣವಾಗಿರುವ ಮನೆಗಳಿಗೆ ಸಂಬಂಧಪಟ್ಟ ಅರ್ಜಿಗಳನ್ನು ಜೂನ್ ಒಳಗೆ ಇತ್ಯರ್ಥಪಡಿಸಬೇಕು. ಪೋಡಿ ಹಾಗು ಜಮೀನು ಹದ್ದುಬಸ್ತನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರಿ ಜಮೀನು ಸೇರಿದಂತೆ ಸರ್ವೆ ನಂಬರ್‌ಗಳಲ್ಲಿ ಕಟ್ಟಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿ. ಅಕ್ರಮ ಸಕ್ರಮದ ಅರ್ಜಿಗಳನ್ನು ಹೆಚ್ಚು ಕಾಲ ಉಳಿಸಿಕೊಳ್ಳದೆ ಶೀಘ್ರವೇ ವಿಲೇವಾರಿ ಮಾಡಿ’ ಎಂದು ಹೇಳಿದರು.

‘ಪೋಡಿ ಮತ್ತು ಜಮೀನು ಹದ್ದುಬಸ್ತಿಗಾಗಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಪಕ್ಕಾ ಪೋಡಿ ಮಾಡಬೇಕು. ಈ ಕಾರ್ಯಕ್ಕೆ ಸರ್ವೆಯರ್‌ಗಳ ಕೊರತೆ ಎದುರಾದರೆ ಗುತ್ತಿಗೆ ಆಧಾರದಲ್ಲಿ ನಿವೃತ್ತ ಸರ್ವೆಯರ್‌ಗಳನ್ನು ನೇಮಿಸಿಕೊಂಡು ಬೇಗ ಕೆಲಸ ಮುಗಿಸಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಯಾವುದೇ ಕಾರಣಕ್ಕೂ ಕಂದಾಯ ಇಲಾಖೆ ಕಾರ್ಯಗಳು ವಿಳಂಬವಾಗಬಾರದು. ಇಲಾಖೆ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು. ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನು ಹೆಚ್ಚು ಸಮಯ ತೆಗೆದುಕೊಳ್ಳುವುದು ಸರಿಯಲ್ಲ. ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಿ ರೈತರ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

11.20 ಕೋಟಿ: ‘ಜಿಲ್ಲೆಯಲ್ಲಿ ಬರ ಆವರಿಸಿದೆ. ಕಳೆದ ವರ್ಷ ಮಳೆ ಕೈಕೊಟ್ಟಿದ್ದು, ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆ ನಷ್ಟಕ್ಕೆ ಈಗಾಗಲೇ ಸರ್ಕಾರದಿಂದ ₹ 11.20 ಕೋಟಿ ಪರಿಹಾರಧನ ಬಿಡುಗಡೆಯಾಗಿದೆ. ಮತ್ತಷ್ಟು ಪರಿಹಾರಧನ ಸದ್ಯದಲ್ಲೇ ಬಿಡುಗಡೆಯಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರವೇ ಸ್ಪಂದಿಸಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು’ ಎಂದು ತಿಳಿಸಿದರು.

ಸರ್ವೆ ಹಾಗೂ ಭೂದಾಖಲಾತಿ ವಿಭಾಗದ ಆಯುಕ್ತ ಹಿಕ್ಕೇರಿ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಭೂದಾಖಲಾತಿ ವಿಭಾಗದ ಉಪ ನಿರ್ದೇಶಕ ಕೇಶವಮೂರ್ತಿ, ಸಹಾಯಕ ನಿರ್ದೇಶಕಿ ಸಂಕೀರ್ತನಾ ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‌ಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT