ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ರಂದು ಸುವರ್ಣಸೌಧಕ್ಕೆ ಮುತ್ತಿಗೆ

ನ್ಯಾ.ಸದಾಶಿವ ಆಯೋಗದ ಶಿಫಾರಸು ಜಾರಿಗೆ ಒತ್ತಾಯ
Last Updated 3 ಡಿಸೆಂಬರ್ 2012, 7:21 IST
ಅಕ್ಷರ ಗಾತ್ರ

ಕೊಪ್ಪಳ:ಮಾದಿಗ ಸಮುದಾಯಕ್ಕೆ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ನೀಡುವ ಸಂಬಂಧ ನ್ಯಾ. ಎ.ಜೆ.ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ಡಿ. 11ರಂದು ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನ್ಯಾ. ಎ.ಜೆ.ಸದಾಶಿವ ಆಯೋಗ ವರದಿ ಅನುಷ್ಠಾನ ಸಮಿತಿ ನಿರ್ಧರಿಸಿದೆ.

ಭಾನುವಾರ ಇಲ್ಲಿ ಕೊಪ್ಪಳ ಮಿಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಚ್.ಹನುಮಂತಪ್ಪ ಈ  ವಿಷಯ ತಿಳಿಸಿದರು.

ಅಂದು ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಹೊರಟು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಂದಿನ ಪ್ರತಿಭಟನೆಯಲ್ಲಿ 2-3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ 1 ಕೋಟಿಯಷ್ಟು ಪರಿಶಿಷ್ಟ ಜಾತಿ ಜನರಿದ್ದಾರೆ. ಈ ಪೈಕಿ 67 ಲಕ್ಷದಷ್ಟು ಮಾದಿಗರಿದ್ದಾರೆ. ಆದರೆ, ಪರಿಶಿಷ್ಟರಲ್ಲಿಯೇ ಇರುವ ಬಲಾಡ್ಯರಿಂದಾಗಿ ಮಾದಿಗ ಸಮುದಾಯ ಮೀಸಲಾತಿಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾ. ಸದಾಶಿವ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೂಲಕ ಮಾದಿಗ ಸಮುದಾಯಕ್ಕೆ ನ್ಯಾಯ ದೊರಕಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಭೋವಿ ಮತ್ತು ಲಂಬಾಣಿ ಜನಾಂಗದವರಿಂದ ಈ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ, ಶೋಷಣೆಗೆ ಒಳಗಾಗದ ಈ ಎರಡು ಸಮುದಾಯಗಳು ವಿರೋಧ ಮಾಡುವುದು ಸರಿಯಲ್ಲ. ಅಲ್ಲದೇ, ಇತರ ಸಮುದಾಯಗಳಿಗೂ ದಾರಿ ತಪ್ಪಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರಾದ ಅರವಿಂದ ಲಿಂಬಾವಳಿ, ರೇವೂ ನಾಯಕ ಬೆಳಮಗಿ ಹಾಗೂ ಸುನಿಲ ವಲ್ಯಾಪುರೆ ಅವರು ಸಹ ಈ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೇ, ಮಾದಿಗ ಜನಾಂಗವನ್ನು ಟೀಕಿಸುತ್ತಿರುವುದು ಸರಿಯಲ್ಲ. ಅಲ್ಲದೇ, ಸರ್ಕಾರವೇ ರಚಿಸಿರುವ ಆಯೋಗವೊಂದರ ವರದಿಯನ್ನು ಆ ಸರ್ಕಾರದಲ್ಲಿ ಸಚಿವರಾಗಿರುವವರೇ ಟೀಕಿಸುವುದು ಸರಿಯಲ್ಲ ಎಂದು ಹೇಳಿದರು.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವರದಿಗೆ ಅಂಗೀಕಾರ ನೀಡಿ, ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ತಪ್ಪಿದಲ್ಲಿ ಮುಂಬರುವ ಚುನಾವಣೆಯಲ್ಲಿ ಈ ಮೂರೂ ಪಕ್ಷಗಳಿಗೆ ಮಾದಿಗ ಜನಾಂಗ ತಕ್ಕಪಾಠ ಕಲಿಸಲಿದೆ ಎಂದು ಹೇಳಿದರು. ಸಮಿತಿ ಮುಖಂಡರಾದ ಸಿದ್ಧೇಶ ಪೂಜಾರ, ಡಾ.ಜ್ಞಾನಸುಂದರ, ಫಕೀರಪ್ಪ ಹೊಳೆಪ್ಪನವರ, ಗವಿಸಿದ್ಧಪ್ಪ ಕುಣಿಕೇರಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT