ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾವರಗೇರಾ | ಆಧಾರ್–ಮೊಬೈಲ್ ಸಂಖ್ಯೆ ಜೋಡಣೆಗೆ ಜನರ ಪರದಾಟ

Published 24 ಜುಲೈ 2023, 16:04 IST
Last Updated 24 ಜುಲೈ 2023, 16:04 IST
ಅಕ್ಷರ ಗಾತ್ರ

ತಾವರಗೇರಾ: ಇಲ್ಲಿನ ಅಂಚೆ ಕಚೇರಿಯಲ್ಲಿ ಆಧಾರ್‌ಗೆ ಮೊಬೈಲ್‌ ಸಂಖ್ಯೆ ಜೋಡಣೆ ಮಾಡಲು ಸಾರ್ವಜನಿಕರು ಪರದಾಡುತ್ತಿದ್ದು, ಕಳೆದ ವಾರದಿಂದ ಜೋಡಣೆ ಆಗದ ಕಾರಣ ಹೋಬಳಿ ವ್ಯಾಪ್ತಿಯ ಗ್ರಾಮಗಳ ನೂರಾರು ಜನ ಪ್ರತಿನಿತ್ಯ ವಾಪಸ್‌ ತೆರಳುತ್ತಿದ್ದಾರೆ.

‘ನಮ್ಮ ಆಧಾರ್ ಕಾರ್ಡ್‍ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವ ಸಲುವಾಗಿ ಕಳೆದ ವಾರದಿಂದ ಪ್ರತಿನಿತ್ಯ ಇಲ್ಲಿನ ಅಂಚೆ ಕಚೇರಿಗೆ ಬಂದು ವಾಪಸ್ ಹೋಗುತ್ತಿದ್ದೇವೆ. ಆದರೆ ಇಲ್ಲಿಯ ಸಿಬ್ಬಂದಿ ಸರ್ವರ್ ಇಲ್ಲ ಎಂಬ ನೆಪ ಹೇಳಿ ನಮ್ಮನ್ನು ಕಳುಹಿಸುತ್ತಿದ್ದಾರೆ’ ಎಂದು ಜೂಲಕುಂಟಿ ಗ್ರಾಮದ ಮೌನೇಶ, ಅಡವಿಭಾವಿ ಗ್ರಾಮದ ಅಮರೇಶ ಮತ್ತು ಶರಣಪ್ಪ ಆರೋಪಿಸಿದರು.

‘ಪಟ್ಟಣದ ಅಂಚೆ ಕಚೇರಿಯಲ್ಲಿ ಆಧಾರ್ ಲಿಂಕ್‌ ಮಾಡುವ ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ. ನಾವು ಮೂರುದಿನದಿಂದ ಕಚೇರಿಗೆ ಬಂದು ಹೋಗುತ್ತಿದ್ದೇವೆ. ಇಲ್ಲಿರುವ ಸಿಬ್ಬಂದಿ ಸರ್ವರ್ ಇಲ್ಲ ಅಂತ ಅಷ್ಟೆ ಹೇಳುತ್ತಿದ್ದಾರೆ. ಇದರಿಂದ ಕೂಲಿ ಕೆಲಸ ಬಿಟ್ಟು ಅಂಚೆ ಕಚೇರಿಗೆ ತಿರುಗುವ ಪರಿಸ್ಥಿತಿ ನಡೆದಿದೆ’ ಎಂದು ರಾಂಪೂರದ ಮಲ್ಲಮ್ಮ ಗೊರಬಾಳ ಅಳಲು ತೋಡಿಕೊಂಡರು.

ಅಂಚೆ ಕಚೇರಿಯಲ್ಲಿ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಗೆ ನಿಗದಿತ ಶುಲ್ಕಕ್ಕಿಂತ ಹೆಚ್ಚುವರಿಯಾಗಿ ₹ 50 ಪಡೆಯುತ್ತಿದ್ದಾರೆ. ಕಚೇರಿಯ ಮುಂದೆ ಬೆಳಿಗ್ಗೆಯಿಂದ ಸಂಜೆವರೆಗೂ ನಿಂತರೂ ಅಧಿಕಾರಿಗಳು, ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಸರ್ವರ್ ಸಮಸ್ಯೆಯ ಕುರಿತ ನಾಮಫಲಕವನ್ನಾದರೂ ಕಚೇರಿಯಲ್ಲಿ ಹಾಕಿದರೆ ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದು ಸ್ಥಳೀಯರು ಹೇಳಿದರು.

‘ನಮ್ಮ ಅಂಚೆ ಕಚೇರಿಯಲ್ಲಿ ಆಧಾರ್‌, ಮೊಬೈಲ್ ಲಿಂಕ್ ಮಾಡಲು ಪ್ರತ್ಯೇಕ ಸಿಬ್ಬಂದಿ ಇಲ್ಲ. ಗ್ರಾಮೀಣ ಅಂಚೆ ಕಚೇರಿಯ ಗುತ್ತಿಗೆ ಆಧಾರಿತ ಸಿಬ್ಬಂದಿ ತಮ್ಮ ಕೆಲಸ ನಿರ್ವಹಿಸಿ, ಇಲ್ಲಿ ಬಂದಾಗ ಮಾತ್ರ ಈ ಕೆಲಸ ಮಾಡುತ್ತಾರೆ. ಜನರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಗಮನಹರಿಸಲಾಗುವುದು’ ಎಂದು ತಾವರಗೇರಾ ಅಂಚೆಕಚೇರಿಯ ಇನ್‌ಸ್ಪೆಕ್ಟರ್‌ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT