ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ತಿಂಗಳಲ್ಲಿ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿ ಮುಗಿಸಲು ಸಿಎಂ ಬೊಮ್ಮಾಯಿ ಸೂಚನೆ

ಮುಖ್ಯಮಂತ್ರಿ ವಿಶೇಷ ಪೂಜೆ, ಅಂಜನಾದ್ರಿ ಅಭಿವೃದ್ಧಿಗೆ ವೇಗ ನೀಡಲು ತಾಕೀತು
Last Updated 2 ಆಗಸ್ಟ್ 2022, 1:59 IST
ಅಕ್ಷರ ಗಾತ್ರ

ಅಂಜನಾದ್ರಿ (ಗಂಗಾವತಿ): ‘ಕಿಷ್ಕೆಂದೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳನ್ನು ಎಂಟು ತಿಂಗಳ ಒಳಗೆ ಪೂರ್ಣಗೊಳಿಸಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅಂಜನಾದ್ರಿಗೆ ಸೋಮವಾರ ಭೇಟಿ ನೀಡಿದ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಗಳ ಜೊತೆ ಚರ್ಚಿಸಿದರು.

‘ಅಂಜನಾದ್ರಿ ಬೆಟ್ಟಕ್ಕೆ ಬರುವ ಯಾತ್ರಿಕರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. 600 ಕೊಠಡಿಗಳ ಯಾತ್ರಿ ನಿವಾಸ ನಿರ್ಮಿಸಬೇಕು. ಈ ಉದ್ದೇಶಕ್ಕಾಗಿ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಂಡು ಎರಡು ತಿಂಗಳಲ್ಲಿ ಕಾಮಗಾರಿ ವಿನ್ಯಾಸ ಸಿದ್ಧಪಡಿಸಬೇಕು. ವಾಹನ ನಿಲುಗಡೆಗೆ ಕನಿಷ್ಠ 35 ಎಕರೆ ಪ್ರದೇಶ ಅಗತ್ಯವಿದ್ದು, ಮೊದಲನೇ ಹಂತದಲ್ಲಿ ಕನಿಷ್ಠ 20 ಎಕರೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

’ಈ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಬಹಳಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸಗಳನ್ನು ನಿರ್ಮಿಸಿದ್ದರೂ ನಿರ್ವಹಣೆಯಿಲ್ಲ. ಇಲ್ಲಿ ಹಾಗೆ ಆಗಬಾರದು. ಮೊದಲ ದಿನದಿಂದಲೇ ನಿರ್ವಹಣೆ ಹಾಗೂ ಸ್ವಚ್ಛತಾ ಸೇವೆಯನ್ನು ಏಜೆನ್ಸಿ ಮೂಲಕ ಪಡೆಯಬೇಕು’ ಎಂದು ಹೇಳಿದರು.

‘ಅಂಜನಾದ್ರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಹಾಗೂ ಗಂಗಾವತಿಯಿಂದ ರಸ್ತೆ ಸಂಪರ್ಕ ಕಲ್ಪಿಸಬಹುದಾಗಿದ್ದು, ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಬೇಕು. ಯಾತ್ರಿನಿವಾಸದ ನಿರ್ಮಾಣದ ಜೊತೆಯಲ್ಲಿಯೇ ರಸ್ತೆ ನಿರ್ಮಾಣ ಕಾಮಗಾರಿಯೂ 7-8 ತಿಂಗಳಲ್ಲಿ ಪೂರ್ಣಗೊಳ್ಳಬೇಕು. ಮುಂದಿನ ಎರಡು ತಿಂಗಳಲ್ಲಿ ಭೂ ಸ್ವಾಧೀನ ಕಾರ್ಯಗಳು ಮುಗಿದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಾಲ್ಕು ತಿಂಗಳೊಳಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕು’ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.

ಪೂಜೆ ಸಲ್ಲಿಕೆ: ದುರ್ಗಾದೇವಿ ಬೆಟ್ಟದಲ್ಲಿರುವ ಗೋಶಾಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಗೋವಿಗೆ ಮುತ್ತಿಟ್ಟರು. ಗೋವುಗಳಿಗೆ ಬೆಲ್ಲ, ಅಕ್ಕಿ, ಹುಲ್ಲು ತಿನಿಸಿದರು.

ಇದಕ್ಕೂ ಮೊದಲು ಮಾಹಿತಿ ನೀಡಿದ ಜಿಲ್ಲಾಧಿಕಾರಿ ‘ಅಂಜನಾದ್ರಿ ಅಭಿವೃದ್ಧಿಗೆ ಎರಡು ಹಂತಗಳಲ್ಲಿ ಒಟ್ಟು 72 ಎಕರೆ ಭೂಮಿ ಬೇಕಾಗುತ್ತದೆ. ಇದರಲ್ಲಿ 62 ಎಕರೆ ಖಾಸಗಿಯದಾಗಿದ್ದು, 14 ಎಕರೆ ಮುಜರಾಯಿ ಹಾಗೂ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ದೇವಸ್ಥಾನ ಇರುವ ಬೆಟ್ಟ ಪ್ರದೇಶ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಈಗಾಗಲೆ 76 ಎಕರೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ. ಹಿಟ್ನಾಳ್ ಕ್ರಾಸ್ ನಿಂದ ಗಂಗಾವತಿ ವರೆಗೆ ರಸ್ತೆ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ’ ಎಂದು ತಿಳಿಸಿದರು.

ಸಚಿವರಾದ ಹಾಲಪ್ಪ ಆಚಾರ್, ಆನಂದ್‍ಸಿಂಗ್, ಬೈರತಿ ಬಸವರಾಜ, ಕೆ. ಸುಧಾಕರ್, ಶಶಿಕಲಾ ಜೊಲ್ಲೆ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ್, ಶಶಿಲ್ ನಮೋಶಿ, ಜಿಲ್ಲಾಧಿಕಾರಿ ಸುಂದರೇಶ ಬಾಬು, ಜಿಲ್ಲಾ ಪಂಚಾಯ್ತಿ ಸಿಇಒ ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಸೇರಿದಂತೆ ಅನೇಕರು ಇದ್ದರು.

’ಆಂಜನೇಯನ ಜನ್ಮಸ್ಥಳ ಎನ್ನುವುದು ನಿರ್ವಿವಾದ’

‘ವಾಲ್ಮೀಕಿ ರಾಮಾಯಣದಲ್ಲಿ ಇಲ್ಲಿನ ಅಂಜನಾದ್ರಿ ಬೆಟ್ಟ ಕಿಷ್ಕಿಂದೆಯ ಉಲ್ಲೇಖವಿದೆ ಅಲ್ಲದೆ ಹಲವು ಪುರಾಣಗಳಲ್ಲೂ ಇದನ್ನೇ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಬೆಟ್ಟದ ಕಿಷ್ಕಿಂದೆಯೇ ಆಂಜನೇಯನ ಜನ್ಮಸ್ಥಳ ಎಂಬುದು ನಿರ್ವಿವಾದ‘ ಎಂದು ಮುಖ್ಯಮಂತ್ರಿ ಹೇಳಿದರು.

ಗೋವಾ, ಮಹಾರಾಷ್ಟ್ರ, ಆಂಧ್ರ ಹೀಗೆ ವಿವಿಧ ರಾಜ್ಯಗಳು ಆಂಜನೇಯ ಹುಟ್ಟಿದ ಸ್ಥಳದ ಬಗ್ಗೆ ವಿವಾದ ಮಾಡುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ಆಂಜನೇಯ ಹುಟ್ಟಿದ್ದು ಇಲ್ಲಿನ ಅಂಜನಾದ್ರಿ ಕಿಷ್ಕಿಂದೆಯಲ್ಲಿಯೇ ಎಂದು ಸಾವಿರಾರು ವರ್ಷಗಳಿಂದ ಜನಜನಿತವಾಗಿದೆ. ಇಡೀ ಭಾರತದ ಜನ ಇದನ್ನು ನಂಬಿದ್ದಾರೆ. ಜನರೇ ಒಪ್ಪಿದ ಮೇಲೆ ಬೇರೆ ಯಾವ ಸಾಕ್ಷಿ ನೀಡುವುದು ಬೇಕಿಲ್ಲ.’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT