ಭಾನುವಾರ, ಡಿಸೆಂಬರ್ 6, 2020
19 °C

ಕಾರಟಗಿ: ಮಾದಿಗರ ಕೇರಿಗೆ ನುಗ್ಗಿ ಹಲ್ಲೆ, 8 ಜನರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ತಾಲ್ಲೂಕಿನ ಹಗೇದಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾದಿಗ ಮತ್ತು ರಡ್ಡಿ ಲಿಂಗಾಯತ ಸಮುದಾಯದ ಕೆಲವರ ಮಧ್ಯೆ ಮಂಗಳವಾರ ಮಾರಾಮಾರಿ ನಡೆದಿದ್ದು, ಬುಧವಾರ ಎಂಟು ಜನರನ್ನು ಬಂಧಿಸಲಾಗಿದೆ.

ಮಾದಿಗ ಸಮುದಾಯದ ದುರಗೇಶ ಮತ್ತು ಅವರ ತಾಯಿ ಹುಲಿಗೆಮ್ಮ ತೀವ್ರ ಗಾಯಗೊಂಡಿದ್ದು, ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಪರಿಶಿಷ್ಟ ಜಾತಿ, ಪಂಗಡಗಳವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಗ್ರಾಮದ ರವಿ, ರಮೇಶ ಬೋಗಾಪುರ, ಮಂಜುನಾಥ, ಅಮರೇಶ, ವೀರೇಶ, ನಾಗರಾಜ, ಮಂಜುನಾಥ ಮಾಟೂರ, ವಿಶ್ವನಾಥ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ವಿವರ: ‘ಗ್ರಾಮದ ರಡ್ಡಿ ಲಿಂಗಾಯತ ಸಮುದಾಯದ ಯುವಕನೊಬ್ಬ ಸಿಗರೇಟ್ ತರುವಂತೆ ಮಾದಿಗ ಸಮುದಾಯದ ದುರಗೇಶಗೆ  ಹೇಳಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಗ್ರಾಮದ ಪ್ರಮುಖರು ಎರಡೂ ಕುಟುಂಬಗಳ ಮಧ್ಯೆ ರಾಜಿಸಂಧಾನ ಮಾಡಿಸಿದ್ದರು. ರಮೇಶ ಎಂಬ ಯುವಕ ನಂತರ ಪರಿಶಿಷ್ಟ ಜಾತಿಯವರ ಕೇರಿಗೆ ನುಗ್ಗಿ ದುರಗೇಶ ಮತ್ತು ಅವರ ತಾಯಿ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ಧಾರೆ.

ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ, ಗ್ರಾಮೀಣ ಸಿಪಿಐ ಉದಯರವಿ, ಪಿಎಸ್‌ಐ ಅವಿನಾಶ ಕಾಂಬಳೆ ಭೇಟಿ ನೀಡಿ ಪರಿಶೀಲಿಸಿದರು. ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರ ತಂಡ ರಚಿಸಲಾಗಿದೆ. ಗ್ರಾಮದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು