ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಕ್ರೀದ್ ಶಾಂತಿ ಸಭೆ: ರೆಡ್ಡಿ, ಅನ್ಸಾರಿ ಬೆಂಬಲಿಗರ ನಡುವೆ ವಾಗ್ವಾದ

Published 14 ಜೂನ್ 2024, 16:27 IST
Last Updated 14 ಜೂನ್ 2024, 16:27 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಬಕ್ರೀದ್ ಶಾಂತಿಸಭೆಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರ ನಡುವೆ ಈದ್ಗಾ ಮಸೀದಿಯಲ್ಲಿ ಮಾತನಾಡುವ ದೈವ ಸಂದೇಶದ ವಿಚಾರಕ್ಕೆ ವಾಗ್ವಾದ ನಡೆಯಿತು.

ಸಭೆ ಆರಂಭವಾದ ಬಳಿಕ ಪೊಲೀಸ್ ಅಧಿಕಾರಿಗಳು ಬಕ್ರೀದ್ ಆಚರಣೆ ಕುರಿತು ಸಲಹೆ, ಸೂಚನೆ ನೀಡಲು ಮುಸ್ಲಿಂ ಮುಖಂಡರಿಗೆ ಅವಕಾಶ ನೀಡಿದರು.

ಈ ವೇಳೆ ಶಾಸಕ ಜಿ.ಜನಾರ್ದನರೆಡ್ಡಿ ಆಪ್ತ ಅಲಿಖಾನ್ ಮಾತನಾಡಿ,‘ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಈದ್ಗಾ ಮೈದಾನದಲ್ಲಿ ದೈವ ಸಂದೇಶದ ಕುರಿತು ಮಾತನಾಡದೇ ಪಕ್ಷ ಹಾಗೂ ರಾಜಕಾರಣಿಗಳ ವಿರುದ್ಧ ಮಾತನಾಡಿ ಜನರನ್ನ ಯಾಮಾರಿಸುವ ಕೆಲಸ ಮಾಡುತ್ತಾರೆ’ ಎಂದರು.

ಪ್ರಾರ್ಥನಾ ಸಮಯಕ್ಕೆ ಬರುವುದಿಲ್ಲ. ಯಾವಾಗಲೋ ಬರುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ವಕ್ಫ್ ಅಧಿಕಾರಿಗೆ ತಿಳಿಸಿದರು‌. ಆ ಅನ್ಸಾರಿ ಅ ವರ ಬೆಂಬಲಿಗ ಎಸ್.ಬಿ ಖಾದ್ರಿ ಮತ್ತು ಸಂಗಡಿಗರು ಅಲಿಖಾನ್ ಅವರಿಗೆ,‘ನೀವು ಗಂಗಾವತಿಯವರಲ್ಲ. ಇಲ್ಲಿ ನಿಮ್ಮದೇನು ಕೆಲಸ. ಏಕೆ ಮಾತನಾಡುತ್ತೀರಿ?’ ಎಂದು ವಾಗ್ವಾದ ನಡೆಸಿ ಸಭೆ ಬಹಿಷ್ಕಾರಕ್ಕೆ ಮುಂದಾದರು.

ಪೊಲೀಸರು ಮಧ್ಯ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿ ಸಭೆ ಆರಂಭಿಸಿದರು.

ನಂತರ ಎಎಸ್ಪಿ ಹೇಮಂತಕುಮಾರ ಮಾತನಾಡಿ,‘ಬಕ್ರೀದ್ ಆಚರಣೆಗೆ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಹಬ್ಬ ಆಚರಣೆ ಮಾಡಬೇಕು. ಗೋಹತ್ಯೆ ಸಂಪೂರ್ಣ ನಿಷೇಧಿಸಲಾಗಿದೆ. ಪ್ರಾಣಿವಧೆ ಅಗತ್ಯವಿದ್ದಲ್ಲಿ ಪಶುಪಾಲನಾ ಇಲಾಖೆಯಿಂದ ಪರವಾನಗಿ ಪಡೆದು ಪಶುವೈದ್ಯರ ನೇತೃತ್ವದಲ್ಲಿ ವಧಾಗಾರದಲ್ಲಿ ವಧೆ ಮಾಡಬೇಕು’ ಎಂದರು.

ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ ಮಾತನಾಡಿ,‘ಶಾಂತಿಯುತವಾಗಿ ಹಬ್ಬ ಆಚರಿಸುತ್ತೇವೆ ಎಂದು ನೀವೇ ಅಶಾಂತಿ ಮಾಡಲು ಹೊರಟಿರಿ. ಹೀಗಾದರೆ ಗಂಗಾವತಿ ಶಾಂತಿಯಿಂದ ಇರುವುದಾದರೂ ಹೇಗೆ?. ಹಬ್ಬವನ್ನ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಅದಕ್ಕೆ ಬೇಕಾದ ಬಂದೋಬಸ್ತ್ ಅನ್ನು ಇಲಾಖೆ ಒದಗಿಸುತ್ತದೆ. ಕಾನೂನು ಬಾಹಿರ ಕೃತ್ಯಗಳು ನಡೆದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಗರ ಠಾಣೆ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಠಾಣೆ ಪಿಐ ಸೋಮಶೇಖರ ಜುತ್ತಲ್, ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ, ತಾ.ಪಂ ಇಒ ಲಕ್ಷ್ಮೀದೇವಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT