ಗುರುವಾರ , ಆಗಸ್ಟ್ 18, 2022
25 °C
ಒಂದು ಲಕ್ಷಕ್ಕೂ ಹೆಚ್ಚು ಎಕರೆ ಕೃಷಿಗೆ ಅನುಕೂಲವಿದ್ಧರೂ ನಾಲಾ ಅಭಿವೃದ್ಧಿಗಿಲ್ಲ ಅನುದಾನ

ಕಾಲುವೆಯಲ್ಲಿ ಹೂಳು; ರೈತರಿಗೆ ಗೋಳು

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ರಾಜ್ಯದ ಭತ್ತದ ಕಣಜ ಎಂದೇ ಹೆಸರಾದ ಜಿಲ್ಲೆಯ ಗಂಗಾವತಿ ತಾಲ್ಲೂಕಿಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳ ಮೂಲಕ ಹರಿದು ಬರುವ ನೀರೇ ಜೀವನಾಡಿ. ಆದರೆ, ಈಗ ಜಿಲ್ಲೆಯ ವ್ಯಾಪ್ತಿಯ ಹಲವು ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ಇದರ ನಡುವೆಯೇ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಮೈಲ್‌ 46ರ (ಅಂದಾಜು 74 ಕಿ.ಮೀ) ವ್ಯಾಪ್ತಿಯಲ್ಲಿ ತುಂಗಭದ್ರಾ ಜಲಾಶಯದ ನೀರು ಎಡದೆಂಡೆ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆಗಳ ಮೂಲಕ ಹರಿಯುತ್ತದೆ. ಇದರಿಂದ ಕೊಪ್ಪಳ ಸಮೀಪದ ಹಿಟ್ನಾಳ ಹೋಬಳಿ, ಗಂಗಾವತಿ, ಆನೆಗೊಂದಿ ಹೋಬಳಿ, ಮರಳಿ, ಕಾರಟಗಿ, ಶ್ರೀರಾಮನಗರ, ದಾಸನಾಳ, ಬಸವಪಟ್ಟಣ, ವಡ್ಡರಹಟ್ಟಿ ಕ್ಯಾಂಪ್‌, ಹೇರೂರು ಮತ್ತು ಹಣವಾಳ ಭಾಗಗಳಲ್ಲಿ ಭತ್ತ ಬೆಳೆಯಲು ಈ ನೀರು ಅನುಕೂಲವಾಗುತ್ತದೆ. 32 ವಿತರಣಾ ಕಾಲುವೆಗಳ ಮೂಲಕ ಅಂದಾಜು ಒಂದು ಲಕ್ಷ ಎಕರೆಗೂ ಹೆಚ್ಚು ಭೂಮಿಗೆ ಕಾಲುವೆಗಳ ಮೂಲಕ ನೀರು ಪೂರೈಕೆಯಾಗುತ್ತದೆ. ಎರಡು ಬೆಳೆಗೆ ಅನುಕೂಲವಾಗಲು ವರ್ಷಕ್ಕೆ ಹತ್ತು ತಿಂಗಳು ನೀರು ಹರಿಸಲಾಗುತ್ತದೆ.

ಮುನಿರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ಜು. 10ರಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ಆದರೆ, ಈ ಭಾಗದ ಕಾಲುವೆಗಳಲ್ಲಿ ಬಹುತೇಕ ಕಡೆ ಹೂಳು ತುಂಬಿಕೊಂಡಿದೆ. ಕಾರಟಗಿಯಲ್ಲಿ ಹಾದು ಹೋಗುವ 31ನೇ ಉಪನಾಲೆಯಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಹಲವು ಕಡೆ ಚರಂಡಿ ನೀರಿನ ಸಂಪರ್ಕವನ್ನು ನೇರವಾಗಿ ಕಾಲುವೆಗೆ ಕೊಡಲಾಗಿದೆ. ಕಾಲುವೆಗಳ ದುರಸ್ತಿ ಕಾರ್ಯ ಬಾಕಿಯಿದ್ದರೂ ಅದನ್ನು ನಿರ್ವಹಿಸಲು ಅನುದಾನದ ಕೊರತೆ ಇದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ನಿಗಮ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.

ಕಾಲುವೆ ಕಾಮಗಾರಿ ವಿಳಂಬ: ಗಂಗಾವತಿ ತಾಲ್ಲೂಕಿನ ದೇವಾಘಾಟ್-ಢಣಾಪುರ ಭಾಗದ ಮೇಲ್ಗಣ, ಕೆಳಗಣ ಕಾಲುವೆ ಹಾಗೂ ಅನೆಗೊಂದಿ ಭಾಗದ ವಿಜಯನಗರ ಕಾಲದ ಉಪಕಾಲುವೆ ಆಧುನೀಕರಣ ಕಾಮಗಾರಿ ವಿಳಂಬವಾಗಿದ್ದು, ಮುಂಗಾರು ಬೆಳೆ ಕೈತಪ್ಪುವ ಆತಂಕ ರೈತರನ್ನು ಕಾಡುತ್ತಿದೆ.

ತುಂಗಭದ್ರಾ ಜಲಾಶಯದ ಕೆಳಗಿರುವ ವಿಜಯನಗರ ಕಾಲದ 16 ಉಪಕಾಲುವೆಗಳ ದುರಸ್ತಿ ಹಾಗೂ ಆಧುನೀಕರಣಕ್ಕಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೀಡಿದ ಅನುದಾನದಿಂದ ನೀರಾವರಿ ಇಲಾಖೆ ಟೆಂಡರ್ ಕರೆದು ಕಾಮಗಾರಿ ಮುಗಿಸಲು 30 ತಿಂಗಳು ಸಮಯ ನಿಗದಿ ಮಾಡಿದೆ.

ಈ ಕಾಮಗಾರಿಯನ್ನು 2019ರಲ್ಲಿ ಗುತ್ತಿಗೆ ಪಡೆದ ಹುಬ್ಬಳ್ಳಿಯ ಆರ್.ಎನ್. ಇನ್‌ಫ್ರಾಸ್ಟ್ರಕ್ಷರ್‌ ಲಿಮಿಟೆಡ್‌ ಕಂಪನಿ 2021ರ ಸೆಪ್ಟಂಬರ್‌ನಲ್ಲಿ ಪೂರ್ಣಗೊಳಿಸಬೇಕಿತ್ತು. ಈಗ ಶೇ 20ರಷ್ಟು ಕಾಮಗಾರಿ ಕೂಡ ಮುಗಿದಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. 

ಮೂರು ವರ್ಷಗಳ ಅವಧಿಯಲ್ಲಿ ಆನೆಗೊಂದಿ ವಿಜಯನಗರ ಉಪಕಾಲುವೆ ಆಧುನೀಕರಣಕ್ಕೆ ₹40.85 ಕೋಟಿ, ದೇವಘಾಟ್ ಮೇಲ್ಗಣ ಕಾಲುವೆಗೆ ₹34. 45 ಕೋಟಿ, ದೇವಘಾಟ್ ಕೆಳಗಣ ಕಾಲುವೆ ₹32.54 ಕೋಟಿ ಮೀಸಲಾಗಿದ್ದು, ಈಗ ₹12.04 ಕೋಟಿ ವೆಚ್ಚದ ಕಾಮಗಾರಿ ಮಾತ್ರ ನಡೆದಿದೆ.

ವಿಜಯನಗರ ಕಾಲುವೆ ಆಧುನೀಕರಣ ಒಟ್ಟು 19.44 ಕಿ.ಮೀ. ಇದ್ದು, 5.5 ಕಿ.ಮೀ. ಕಾಮಗಾರಿ ಮಾತ್ರ ಆಗಿದೆ. ದೇವಘಾಟ್ ಮೇಲಿನ, ಕೆಳಗಿನ ವ್ಯಾಪ್ತಿ ಸೇರಿ 60 ಸಾವಿರಕ್ಕೂ ಹೆಚ್ಚು ಎಕರೆ ಜಮೀನಿದ್ದು, ಕಾಲುವೆಗಳ ಅಪೂರ್ಣ ಕಾಮಗಾರಿಯಿಂದ ಪ್ರತಿ ವರ್ಷ ರೈತರು ನೀರಿಗಾಗಿ ಪರದಾಡುವಂತಾಗಿದೆ.  ಕಾಲುವೆಗಳಲ್ಲಿ ಹೂಳು, ಕಸ ತುಂಬಿ, ಮುಳ್ಳು, ಬಳ್ಳಿ, ಗಿಡ ಬೆಳೆದು ನಿಂತಿದೆ. ಇದು ನೀರು ಸರಾಗ ಹರಿವಿಗೆ ತೊಂದರೆಯಾಗಲಿದೆ.

ಬೆಳೆ ನಷ್ಟದ ಆತಂಕ: ಸಾಣಾಪುರ ಗ್ರಾಮದಲ್ಲಿನ ಕೆರೆ ನೀರಿನ ಪೂರೈಕೆಯಿಂದ ಹನುಮನಹಳ್ಳಿ, ಚಿಕ್ಕರಾಂಪುರ, ಆನಗೊಂದಿ ಭಾಗದಲ್ಲಿನ ರೈತರು ಪ್ರತಿ ಮುಂಗಾರು ಬೆಳೆಗೆ ಮೇ ತಿಂಗಳಿನ ಕೊನೆಯ ವಾರದಲ್ಲಿ ಸಸಿ ಬೀಜ ಬಿತ್ತಿ ಜುಲೈ ಮೊದಲ ವಾರದಲ್ಲಿ ಭತ್ತದ ಸಸಿ ನಾಟಿ ಮಾಡಲಾಗುತ್ತಿತ್ತು. ಇದೀಗ ಜುಲೈನಲ್ಲಿ ನೀರು ಬಂದರೆ 40 ದಿನಗಳು ಸಸಿ ಬೆಳೆಸಿ, ನಾಟಿ ಮಾಡಿದರೆ ಬೆಳೆ ಮಳೆ, ಚಳಿಗೆ ಸಿಲುಕಿ ಬೆಳೆ ನಷ್ಟವಾಗಲಿದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.

ಅವೈಜ್ಞಾನಿಕ ಕಾಮಗಾರಿ ಆರೋಪ: ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿ ವೈಜ್ಞಾನಿಕವಾಗಿ ಮಾಡಿಲ್ಲ ಎಂದು ರೈತರು, ರೈತಪರ ಸಂಘಟನೆಗಳ ಮತ್ತು ಕಾಂಗ್ರೆಸ್ ಮುಖಂಡರ ಆರೋಪವಾಗಿದೆ.

ಕಾರಟಗಿ ಭಾಗದಲ್ಲಿ ತುಂಗಭದ್ರಾ ಎಡದಂಡೆ ಮುಖ್ಯನಾಲೆಯು ಸೋಮನಾಳ ಬಳಿ 42ನೇ ಮೈಲ್‌ನ ಬಳಿ ಕುಸಿದಿರುವ ಒಳಭಾಗದ ತುರ್ತು ಕಾಮಗಾರಿ ಕೈಗೊಂಡಿದೆ.

ತುಂಗಭದ್ರಾ 31ನೇ ಕಾಲುವೆ ಹಾಗೂ ನಂ. 2 ಕಾಲುವೆ ವ್ಯಾಪ್ತಿಯಲ್ಲಿ ಅಪಾಯಕಾರಿ ವಲಯ ಎಂದು ಪರಿಗಣಿಸಿರುವ ಸೋಮನಾಳ ಬಳಿ ಮಾತ್ರ ತುರ್ತು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕಳೆದ ಹಂಗಾಮಿನಲ್ಲಿ ಲೈನಿಂಗ್‌ನಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮೇಲಧಿಕಾರಿಗಳ ಗಮನಕ್ಕೆ ವಿಷಯವನ್ನು ತರಲಾಗಿತ್ತು. ತಾತ್ಕಾಲಿಕ ಕಾಮಗಾರಿ ಕೈಗೊಂಡು ರೈತರ ಬೆಳೆ ರಕ್ಷಿಸಲಾಗಿತ್ತು ಎಂದು ನಂ. 2 ಕಾಲುವೆಯ ಎಂಜಿನಿಯರ್ ವಿರೂಪಾಕ್ಷಪ್ಪ ಗುಡೂರ ತಿಳಿಸಿದರು.

ವಿಜಯನಗರ ಕಾಲುವೆ ಬೆಟ್ಟಗಳ ನಡುವೆ ಹಾದು ಹೋಗಲಿದ್ದು, ಆಧುನೀಕರಣದ ವೇಳೆ ಕಾಲುವೆಯ ಅಗಲ ಕಡಿತ ಮಾಡಿದ ಕಾರಣ ಮಳೆಗಾಲದಲ್ಲಿ ಬೆಟ್ಟದ ನೀರೆಲ್ಲ ಕಾಲುವೆ ಸೇರಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಬೆಳೆಗಳಿಗೆ ನಷ್ಟ ಉಂಟಾಗಲಿದೆ. ಇದು ಅವೈಜ್ಞಾನಿಕ ಕಾಮಗಾರಿ.
ಕುರುಮೂರ್ತಿ, ಸಾಣಾಪುರ ಗ್ರಾಮದ ರೈತ

 

ವಿಜಯನಗರ ಕಾಲುವೆ ಆಧುನೀಕರಣ ಕಾಮಗಾರಿ ನಡೆದ ಕೆಲ ಪ್ರದೇಶದಲ್ಲಿ ಕೆಲಸ ಉಳಿದಿದ್ದು, ಕೆಲ ಕಡೆ ಕಾಲುವೆ ಬಿರುಕು ಬಿಟ್ಟಿರುವ ವಿಷಯ ಗಮನಕ್ಕೆ ಬಂದಿದೆ. ಅದನ್ನು ಸರಿಪಡಿಸಲಾಗುವುದು.
ಸತ್ಯಪ್ಪ, ಎಇಇ, ವಡ್ಡರಹಟ್ಟಿ ನೀರಾವರಿ ಇಲಾಖೆ ವಿಭಾಗ

 

 

ರೈತರ ಉಸಿರಾಗಿರುವ ನಾಲೆಯ ವಿಷಯದಲ್ಲಿ ಸ್ಥಳೀಯ ಅಧಿಕಾರಿಗಳು ಸಲ್ಲಿಸುವ ಬೇಡಿಕೆಗೆ ಮೇಲಧಿಕಾರಿಗಳು ತಕ್ಷಣವೇ ಸ್ಪಂದಿಸಬೇಕು. ರೈತರ ಹಿತ ಕಾಪಾಡಬೇಕು.
ರವಿಕುಮಾರ
ರೈತ, ಸೋಮನಾಳ

 

ತುಂಗಭದ್ರಾ ಎಡದಂಡೆ ಮುಖ್ಯನಾಲೆ ಕಾಂಕ್ರಿಟ್‌ ಮಾಡಿದ ಮೇಲೆ ಪ್ರತಿ ವರ್ಷ ಸೋರಿಕೆ, ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ನಾಲೆಗೆ ನೀರು ಬಿಟ್ಟ ಆರಂಭದ ದಿನಗಳಲ್ಲಿ ಇಲಾಖೆ ಕಾಲುವೆಗಳ ಮೇಲೆ ಕಣ್ಗಾವಲು ಇಡಬೇಕು.
ಪಂಪಾಪತಿ, ರೈತ ಸೋಮನಾಳ

 

ತುಂಗಭದ್ರಾ ಜಲಾಶಯ ವ್ಯಾಪ್ತಿಯ ಕಾಲುವೆಗಳ ಆಧುನೀಕರಣಕ್ಕೆ ಅನುದಾನದ ಕೊರತೆ ಇದೆ. ಈ ಕುರಿತು ಸಂಬಂಧಿಸಿದ ಸಚಿವರ ಜೊತೆ ಚರ್ಚಿಸುವೆ.
ಆನಂದ ಸಿಂಗ್‌
ಜಿಲ್ಲಾ ಉಸ್ತುವಾರಿ ಸಚಿವ

 

 

ಪ್ರತ್ಯೇಕ ನಿಗಮದ ಬೇಡಿಕೆಯ ಕೂಗು

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗದ ಬೃಹತ್ ನೀರಾವರಿ ಯೋಜನೆಯಾದ ತುಂಗಭದ್ರಾ ಜಲಾಶಯ ವ್ಯಾಪ್ತಿಗೆ ಅನುದಾನ ನೀಡಲು ಸರ್ಕಾರ ಮೀನಮೇಷ ಮಾಡುತ್ತಿದೆ. ಆದ್ದರಿಂದ  ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ ಈ ಭಾಗಕ್ಕೆ ಪ್ರತ್ಯೇಕ ನಿಗಮ ಆರಂಭಿಸಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆ.

ರಾಜ್ಯದಲ್ಲಿರುವ ನೀರಾವರಿ ನಿಗಮಗಳ ಪೈಕಿ ತುಂಗಭದ್ರಾ ಜಲಾಶಯವೂ ಒಳಗೊಂಡ ಕರ್ನಾಟಕ ನೀರಾವರಿ ನಿಗಮ ದೊಡ್ಡದು. ತುಂಗಭದ್ರಾ, ಸಿಂಗಟಾಲೂರು, ನಾರಿಹಳ್ಳ, ಹಿರೇಹಳ್ಳ, ಆರ್‌ಡಿಎಸ್‌ ಸೇರಿದಂತೆ ಒಟ್ಟು 150 ಟಿಎಂಸಿ ಅಡಿ ನೀರಿನ ಸಾಮರ್ಥ್ಯವಿದೆ.

ವಿಶ್ವೇಶ್ವರಯ್ಯ ಜಲಭಾಗ್ಯ, ಕಾವೇರಿ ನೀರಾವರಿ ಮತ್ತು ಕೃಷ್ಣ ಜಲಭಾಗ್ಯ ನಿಗಮಗಳು ತುಂಗಭದ್ರಕ್ಕಿಂತಲೂ ಕಡಿಮೆ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಅವುಗಳಿಗೆ ಭರಪೂರ ಅನುದಾನ ಸಿಗುತ್ತದೆ. ಕಲ್ಯಾಣ ಕರ್ನಾಟಕ ಭಾಗಕ್ಕೂ ಪ್ರತ್ಯೇಕ ನಿಗಮವಾಗಬೇಕು ಎನ್ನುವುದು ಇಲ್ಲಿರ ರೈತರ ಹಾಗೂ ಹೋರಾಟಗಾರರ ಆಗ್ರಹ.

ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿಯ ಸದಸ್ಯ ಪಂಪಾಪತಿ ರಾಟಿ ಹುಲಿಗಿ ಈ ಕುರಿತು ಮಾತನಾಡಿ ‘ಕರ್ನಾಟಕ ನೀರಾವರಿ ನಿಗಮ ವ್ಯಾಪ್ತಿ ಬಹಳ ದೊಡ್ಡದು. ತುಂಗಭದ್ರ ಯೋಜನೆಗೆ ಅನುದಾನದ ಕೊರತೆ ಪ್ರತಿವರ್ಷ ಕಾಡುತ್ತಿದೆ. ಇಲ್ಲಿನ ನೀರಾವರಿ ಕಾಲುವೆಗಳ ಆಧುನೀಕರಣ ಯೋಜನೆ ಕೈಗೆತ್ತಿಕೊಂಡು ದಶಕಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

‘ತುಂಗಭದ್ರಕ್ಕಿಂತಲೂ ಕಡಿಮೆ ನೀರು ಸಂಗ್ರಹ ಸಾಮರ್ಥ್ಯವಿರುವ ಕಾವೇರಿ ನೀರಾವರಿ ಯೋಜನೆ ಪ್ರತ್ಯೇಕ ನಿಗಮ ಹೊಂದಿದೆ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತಂದು ಪ್ರತ್ಯೇಕ ನಿಗಮಕ್ಕೆ ಹೋರಾಟ ಮಾಡಬೇಕಾಗಿದೆ‘ ಎಂದು ಆಗ್ರಹಿಸಿದರು.

 

ಪೂರಕ ಮಾಹಿತಿ: ಕೆ. ಮಲ್ಲಿಕಾರ್ಜುನ, ಗುರುರಾಜ ಅಂಗಡಿ, ಎನ್‌. ವಿಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು