ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ ಬಿತ್ತರಿಸುವ ಮಾಧ್ಯಮಗಳ ವಿರುದ್ಧ ಕ್ರಮ

ಜಿಲ್ಲಾಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆ
Last Updated 11 ಡಿಸೆಂಬರ್ 2019, 9:58 IST
ಅಕ್ಷರ ಗಾತ್ರ

ಕೊಪ್ಪಳ: ಸುಳ್ಳು ಮಾಹಿತಿ ಅಥವಾ ನೈಜತೆಯನ್ನು ತಿರುಚಿ ಸುದ್ದಿ ಬಿತ್ತರಿಸುವ ನಕಲಿ ಪತ್ರಕರ್ತರು, ಅನುಮತಿ ಇಲ್ಲದ ಕೇಬಲ್ ಹಾಗೂ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಅಧಿನಿಯಮ 1995ರ ಅನ್ವಯ ಮೇಲ್ವಿಚಾರಣೆಗೆ ರಚಿಸಲಾದ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುಳ್ಳು ಮಾಹಿತಿ ಅಥವಾ ನೈಜತೆಯನ್ನು ತಿರುಚಿ ಸುದ್ದಿ ಬಿತ್ತರಿಸುವ ನಕಲಿ ಪತ್ರಕರ್ತರು ಹಾಗೂ ಅನುಮತಿ ಇಲ್ಲದ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಕಲಿ ಪತ್ರಕರ್ತರ ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಸಮಿತಿಯಿಂದ ನಿಗಾ ವಹಿಸಲಾಗುವುದು. ಕೆಲವು ನಕಲಿ ಪತ್ರಕರ್ತರು ಸರ್ಕಾರಿ ಸಭೆ-ಸಮಾರಂಭ ಹಾಗೂ ಸಚಿವರು ಸೇರಿದಂತೆ ಗಣ್ಯರ ಸುದ್ದಿಗೋಷ್ಠಿಗಳಿಗೆ ಬರುತ್ತಿರುವುದು ಸರ್ಕಾರಿ ಕೆಲಸಕ್ಕೆ ಅಡೆತಡೆ ಉಂಟು ಮಾಡಿದೆ. ಇದರಿಂದ ನೈಜ ಪತ್ರಕರ್ತರಿಗೂ ತೊಂದರೆಯುಂಟಾಗಿದೆ ಎಂದರು.

ಕೇಬಲ್ ಚಾನೆಲ್ ಹಾಗೂ ಉಪಗ್ರಹ ಚಾನೆಲ್‌ಗಳಲ್ಲಿ ಆಕ್ಷೇಪಾರ್ಹ ಕಾರ್ಯಕ್ರಮಗಳು ಪ್ರಸಾರವಾದಲ್ಲಿ ಸಾರ್ವಜನಿಕರು ದೂರು ನೀಡಬಹುದು. ಜತೆಗೆ ಅನುಮತಿ ಇಲ್ಲದ ಯೂಟ್ಯೂಬ್ ಚಾನೆಲ್‌ಗಳು ಲೋಗೋ ಬಳಸುವಂತಿಲ್ಲ. ನಕಲಿ ಪತ್ರಕರ್ತರು ಹಣ ವಸೂಲಿ ಸೇರಿದಂತೆ ಅಕ್ರಮ ಚಟುವಟಿಕೆ ನಡೆಸುವುದು ಕಂಡುಬಂದಲ್ಲಿ ಈ ಕುರಿತು ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ಕರ್ತವ್ಯದ ಸಂದರ್ಭದಲ್ಲಿ ಪತ್ರಕರ್ತರು ಎಂದು ಹೇಳಿಕೊಂಡು ಬೆದರಿಕೆ ಒಡ್ಡುವುದು, ಅವರ ವಿರುದ್ಧ ಆಧಾರ ರಹಿತವಾಗಿ ವರದಿ ಮಾಡಿ, ತೇಜೋವಧೆ ಮಾಡುವುದು ಸೇರಿದಂತೆ ಕಾನೂನು ಬಾಹಿರವಾಗಿ ವರ್ತಿಸಿದಲ್ಲಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿ ಮಾನಸಿಕ ಕಿರುಕುಳ ನೀಡಿದಲ್ಲಿ ಅಂತಹ ಪತ್ರಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಇಂತಹ ಪ್ರಕರಣಗಳಲ್ಲಿ ಸಾಮಾಜಿಕವಾಗಿ ಅವಮಾನಕ್ಕೀಡಾಗಿ ಆ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಆದ್ದರಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನರಿತು ವರ್ತಿಸಬೇಕು. ಕೋಮು ದ್ವೇಷ, ಜಾತಿ, ಜನಾಂಗ, ದೇಶದ ಏಕತೆಗೆ ಧಕ್ಕೆ ತರುವ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು. ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಬಾರದು. ಚಿಕ್ಕಮಕ್ಕಳ ಮನಸ್ಸಿಗೆ ಗಂಭೀರ ಪ್ರಭಾವ ಬೀರುವ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡಬಾರದು ಎಂದರು.

ಸಮಿತಿ ಸದಸ್ಯ ಕಾರ್ಯದರ್ಶಿ ಜಿ.ಸುರೇಶ ಮಾತನಾಡಿದರು.ಸಮಿತಿ ಸದಸ್ಯ ಡಾ.ಚನ್ನಬಸಪ್ಪ ಸಿ., ಇನ್ನರ್‌ವಿಲ್ ಕ್ಲಬ್ ಅಧ್ಯಕ್ಷೆ ಶರಣಮ್ಮ ಪಾಟೀಲ, ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ, ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ.ರವಿಕುಮಾರ, ಅಂಚೆ ಇಲಾಖೆಯ ಮಹಮ್ಮದ್ ಸುಬಾನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT