ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಮಳೆಗೆ ಹಾಳಾದ ಚೆಕ್‌ಡ್ಯಾಂ

ಬಹುಕಮಾನು ಚೆಕ್‌ಡ್ಯಾಂ ಅನುದಾನ ದುರ್ಬಳಕೆ: ಆರೋಪ
Last Updated 14 ಅಕ್ಟೋಬರ್ 2019, 10:26 IST
ಅಕ್ಷರ ಗಾತ್ರ

ಕುಷ್ಟಗಿ: ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಲಾಗಿದ್ದ ಬಹುಕಮಾನು ಚೆಕ್‌ಡ್ಯಾಂಗಳು ಒಂದೇ ಮಳೆಗೆ ಹಾಳಾಗಿವೆ.

ತಲಾ ₹ 10 ಲಕ್ಷ ವೆಚ್ಚದಲ್ಲಿ ಈ ಚೆಕ್‌ಡ್ಯಾಂಗಳನ್ನು ನಿರ್ಮಿಸುವುದಕ್ಕೆ ನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ. ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದಾಗಿ ಬಹುತೇಕ ಚೆಕ್‌ಡ್ಯಾಂಗಳು ಹಾಳಾಗಿದ್ದು, ಸರ್ಕಾರದ ಕೋಟ್ಯಂತರ ಅನುದಾನ ವ್ಯರ್ಥವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ದೂರು: ತಾಲ್ಲೂಕಿನ ಜುಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡವಿಭಾವಿ ಸೀಮಾಂತರದಲ್ಲಿ ಸಾಸ್ವಿಹಾಳ ಗ್ರಾಮದ ಹನುಮಂತ ಮಡ್ಡೇರ ಎಂಬುವವರ ಹೆಸರಿನ ಜಮೀನಿನಲ್ಲಿ ಚೆಕ್‌ ಡ್ಯಾಂ ನಿರ್ಮಿಸಲಾಗಿತ್ತು (ಕಾಮಗಾರಿ ಸಂಖ್ಯೆ 1520003/wc/ 93393042892239783). ₹ 2 ಲಕ್ಷ ಕೂಲಿ ಪಾವತಿ ಮತ್ತು ₹ 8 ಲಕ್ಷ ಹಣವನ್ನು ಸಾಮಗ್ರಿ ಮೊತ್ತ ಎಂದು ಪಾವತಿಸಲಾಗಿದೆ. ಆದರೆ ಇಲ್ಲಿ ಯಾವುದೇ ಕೂಲಿಕಾರರು ಕೆಲಸ ಮಾಡಿಲ್ಲ. ಕಾಟಾಚಾರಕ್ಕೆ ಚೆಕ್‌ ಡ್ಯಾಂ ನಿರ್ಮಿಸಿದ್ದರಿಂದ ಒಂದೇ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ತನಿಖೆ ನಡೆಸುವಂತೆ ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಇಲಾಖೆ ಉಪ ವಿಭಾಗಕ್ಕೆ ಹಾಗೂ ನರೇಗಾ ಒಂಬಡ್ಸ್ ಮನ್‌ ಅವರಿಗೆ ದೊಡ್ಡಬಸವ ಗುರಿಕಾರ ಎಂಬುವವರು ದೂರು ಸಲ್ಲಿಸಿದ್ದಾರೆ.

ಹಿರೇಬನ್ನಿಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಂದಿಹಾಳ ಗ್ರಾಮದ ಸೀಮಾಂತರದಲ್ಲಿ ನರೇಗಾ ಯೋಜನೆಯಲ್ಲಿ ತಿಂಗಳ ಹಿಂದಷ್ಟೇ ನಿರ್ಮಿಸಿದ್ದ ಸರಣಿ ಚೆಕ್‌ಡ್ಯಾಂಗಳು ಒಂದೆ ಮಳೆಗೆ ಕೊಚ್ಚಿ ಹಳ್ಳದ ಪಾಲಾಗಿರುವುದು ಕಂಡುಬಂದಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಇಂಥಹ ಇಪ್ಪತ್ತಕ್ಕೂ ಅಧಿಕ ಚೆಕ್‌ಡ್ಯಾಂಗಳ ಸ್ಥಿತಿಯೂ ಇದೇ ಆಗಿದೆ.

ಜೆಸಿಬಿ ಯಂತ್ರಗಳನ್ನು ಬಳಸಿ ಕೆಲಸ ಮಾಡಿ ಕೂಲಿಕಾರರ ಹೆಸರಿನಲ್ಲಿ ಹಣ ಪಡೆದು ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಕೊರಡಕೇರಾ ಗ್ರಾಮ ಪಂಚಾಯಿತಿಯ ಶಾಖಾಪುರದಲ್ಲಿ ಹಾಗೂ ತಳುವಗೇರಾ ಪಂಚಾಯಿತಿ ವ್ಯಾಪ್ತಿಯ ವಣಗೇರಿ, ಸಂಗನಾಳ, ಹಿರೇಬನ್ನಿಗೋಳ ಮತ್ತಿತರೆ ಗ್ರಾಮಗಳಲ್ಲಿಯೂ ಇದೇ ಮಾದರಿಯ ಚೆಕ್‌ಡ್ಯಾಂಗಳು ಹಾಳಾಗಿವೆ.

ನೀರು ಬಾರದ ಪ್ರದೇಶದಲ್ಲಿಯೇ ಬಹಳಷ್ಟು ಚೆಕ್‌ ಡ್ಯಾಂಗಳನ್ನು ನಿರ್ಮಿಸಲಾಗಿದೆ ಎಂದು ಆಯಾ ಗ್ರಾಮಗಳ ಜನರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದ್ದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಒಬ್ಬರ ಮೇಲೆಯೂ ಕ್ರಮ ಜರುಗಿಸಿಲ್ಲ. ಶಾಸಕರು, ಇತರೆ ಚುನಾಯಿತ ಪ್ರತಿನಿಧಿಗಳೂ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT