'ಬಾಲ್ಯ ವಿವಾಹ ನಿರ್ಮೂಲನೆಗೆ ಕಾನೂನು ನೆರವು'

7
ಬಾಲ್ಯ ವಿವಾಹ ನಿಷೇಧ, ಮಕ್ಕಳ ಹಕ್ಕುಗಳ ಜಾಗೃತಿಗಾಗಿ ಜಾಥಾ

'ಬಾಲ್ಯ ವಿವಾಹ ನಿರ್ಮೂಲನೆಗೆ ಕಾನೂನು ನೆರವು'

Published:
Updated:
Deccan Herald

ಕೊಪ್ಪಳ: ‘ಜಿಲ್ಲೆಯಲ್ಲಿ ಬಾಲ್ಯ ವಿವಾಹ ಎಂಬ ಅನಿಷ್ಠ ಪದ್ಧತಿ ನಿರ್ಮೂಲನೆಗೊಳಿಸಲು ಅಗತ್ಯವಿರುವ ಎಲ್ಲ ನೆರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡಲು ಸಿದ್ಧವಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಟಿ ಶ್ರೀನಿವಾಸ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ತಾಲ್ಲೂಕಿನ ಅಗಳಕೇರಾದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 'ಬಾಲ್ಯ ವಿವಾಹ ನಿಷೇಧ', ಮಕ್ಕಳ ಹಕ್ಕುಗಳ ಜಾಗೃತಿಗಾಗಿ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಪಾಠಿ ಮಕ್ಕಳೊಂದಿಗೆ ಆಟವಾಡುತ್ತಾ, ಬಾಲ್ಯದ ಸುಮಧುರ ಕ್ಷಣ ಅನುಭವಿಸಬೇಕಾಗಿದ್ದ ಹೆಣ್ಣುಮಕ್ಕಳು ಹಸೆಮಣೆ ಏರುತ್ತಿದ್ದಾರೆ. ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟುಕೊಳ್ಳಬೇಕಾಗಿದ್ದ ಅವರ ಹೆಗಲ ಮೇಲೆ ಕುಟುಂಬದ ಜವಾಬ್ದಾರಿ, ಮಡಿಲಲ್ಲಿ ಕರುಳಕುಡಿಯಿಂದ ಹೆಣ್ಣುಮಕ್ಕಳ ಹೊಂಗನಸು ಕಮರಿ ಹೋಗುತ್ತಿವೆ ಎಂದು ವಿಷಾದಿಸಿದರು.

ಮಹಿಳೆ ಹಾಗೂ ಮಕ್ಕಳ ಮೇಲಾಗುವ ದೌರ್ಜನ್ಯ ತಡೆಯಲು ಭಾರತ ಸರ್ಕಾರವು 2006ರಲ್ಲಿಯೇ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ಮಾಡಿದ್ದು, ಅದರನ್ವಯ ಬಾಲ್ಯ ವಿವಾಹವನ್ನು ಮಾಡಿಕೊಂಡ, ಮಾಡಿದ ಹಾಗೂ ಪ್ರೋತ್ಸಾಹಿಸಿದವರಿಗೆ ಹಾಗೂ ಭಾಗವಹಿಸಿದವರಿಗೂ ಸಹ ಕನಿಷ್ಠ 1 ವರ್ಷದಿಂದ 2 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ₹ 1 ಲಕ್ಷ ದಂಡವನ್ನು ವಿಧಿಸಬಹುದಾಗಿರುತ್ತದೆ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳು ಸ್ವಯಂಪ್ರೇರಿತ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ. ಅಲ್ಲದೇ ಅಂಗನವಾಡಿ ಮೇಲ್ವಿಚಾರಕಿಯರನ್ನು, ಪಿಡಿಒ ಹಾಗೂ ಮುಖ್ಯಶಿಕ್ಷಕರು ಸಹ 'ಬಾಲ್ಯ ವಿವಾಹ ನಿಷೇಧ ಅಧಿಕಾರಿ' ಆಗಿದ್ದು, ಅವುಗಳನ್ನು ತಡೆಯಲು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಯಾವುದೇ ಸಹಾಯ ಬೇಕಾದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ಹಿರಿಯ ವಕೀಲ ವಿ.ಎ.ಭೂಸನೂರಮಠ ಅವರು ಲೈಂಗಿಕ ಅಪರಾಧ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ ಕುರಿತು ಉಪನ್ಯಾಸ ನೀಡಿದರು.

ಅಗಳಕೇರಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗರಾಜ ಎಸ್.ಕಿನ್ನಾಳ ಅಧ್ಯಕ್ಷತೆ ವಹಿಸಿದ್ದರು, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಡಿ, ಅಂಗನವಾಡಿ ಮೇಲ್ವಿಚಾರಕಿ ಭುವನೇಶ್ವರಿ ಶೀಲವಂತರ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರುತಿ ಇದ್ದರು. ರವಿ ಬಡಿಗೇರ ನಿರೂಪಿಸಿದರು, ದೇವರಾಜ್ ತಿಲಗರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !