ಶಾಂತಿದೂತನ ಸ್ಮರಣೆಗೆ ಚರ್ಚ್‌ಗಳ ಸಿಂಗಾರ

7
ಕ್ರಿಸ್‌ಮಸ್ ಸಂಭ್ರಮ

ಶಾಂತಿದೂತನ ಸ್ಮರಣೆಗೆ ಚರ್ಚ್‌ಗಳ ಸಿಂಗಾರ

Published:
Updated:
Prajavani

ಕೊಪ್ಪಳ: ಡಿ.25ರಂದು ನಡೆಯುವ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಯೇಸು ಸ್ವಾಮಿಯ ಆರಾಧನೆಗೆ ಎಲ್ಲೆಡೆ ಸಿದ್ಧತೆ ನಡೆಯುತ್ತಿದೆ.

ಕೊಪ್ಪಳ ನಗರದಲ್ಲಿ ಏಳು ಚರ್ಚ್‌ಗಳು ಇದ್ದು, 100ಕ್ಕೂ ಹೆಚ್ಚು ಕುಟುಂಬಗಳ ಒಂದು ಸಾವಿರ ಸಂಖ್ಯೆಯಲ್ಲಿ ಸಮಾಜದ ಜನತೆ ಇದ್ದಾರೆ. 

ಯೇಸುವಿನ ಆರಾಧನೆಗೆ ಮುಕುಟಪ್ರಾಯ ಆಗಿರುವುದು ಕುಷ್ಟಗಿ ರಸ್ತೆಯ ಕ್ಯಾಥೋಲಿಕ್ ಚರ್ಚ್ ಕಳೆದ 50 ವರ್ಷಗಳ ಹಿಂದೆ ಸ್ಥಾಪನೆಗೊಂಡಿದೆ. ಈಚೆಗೆ ಸುಂದರವಾದ ಚರ್ಚ್‌ಗಳ ನಿರ್ಮಾಣವಾಗುತ್ತಿವೆ.

ಇಲ್ಲಿನ ಕ್ರೈಸ್ತ್ ಕುಟುಂಬಗಳು ಮುಖ್ಯವಾಗಿ ಕ್ಯಾಥೋಲಿಕ್, ಪ್ರೊಟೆಸ್ಟಂಟ್, ಮೆಥೋಡಿಯಸ್ಟ್ ಸಂಪ್ರದಾಯಗಳನ್ನು ಪಾಲಿಸುತ್ತಿವೆ. ರೈಲ್ವೆ ನೌಕರರು, ತೆಲುಗು ಭಾಷಿಕ ನಾಡಿನಿಂದ ಬಂದವರು ಸಮಾಜದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಸಮೀಪದ ಭಾಗ್ಯನಗರದಲ್ಲಿ ಎರಡು ಚರ್ಚ್‌, ಗಣೇಶ ನಗರದಲ್ಲಿ ಒಂದು, ನಗರದ ವ್ಯಾಪ್ತಿಯಲ್ಲಿ ನಾಲ್ಕು ಚರ್ಚ್‌ಗಳು ಇವೆ. ಆರಾಧನೆ, ಪೂಜೆ, ಪ್ರಾರ್ಥನೆ ಒಂದೇ ರೀತಿಯಾಗಿದ್ದರೂ ಕಾಲಕಾಲಕ್ಕೆ ಕೆಲವು ಪಂಗಡಗಳು ದೂರ ಸರಿದು ತಮ್ಮದೇ ಆದ ಚರ್ಚ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ.

ಕ್ರಿಸ್‌ಮಸ್ ಸಂಭ್ರಮ: ಮುಖ್ಯವಾಗಿ ಕ್ಯಾಥೋಲಿಕ್ ಚರ್ಚ್ ಬಹುಸಂಖ್ಯಾತ ಭಕ್ತರನ್ನು ಹೊಂದಿದೆ. ಡಿ.25ರಂದು ಕ್ರಿಸ್‌ಮಸ್ ಪ್ರಯುಕ್ತ ಬೆಳಿಗ್ಗೆ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಫಾದರ್‌ಗಳಿಂದ ಧರ್ಮ ಸಂದೇಶ, ಸಂಗೀತ, ವಾದ್ಯ, ಗಾಯನದೊಂದಿಗೆ ಯೇಸುವಿನ ಸ್ಮರಣೆ ನಡೆಯುತ್ತಿದೆ.

ಹಿಂದಿನ ದಿನವೇ ಸಮುದಾಯದವರು ತಮ್ಮ ಮನೆಗಳಿಗೆ ವಿದ್ಯುತ್ ದೀಪಾಲಂಕಾರ, ನಕ್ಷತ್ರ ಆಕಾರದ ಬೆಳಕಿನ ಬುಟ್ಟಿ, ಕ್ರಿಸ್‌ಮಸ್ ಟ್ರೀಗೆ ಅಲಂಕಾರ, ಸಾಂತಾಕ್ಲಾಸ್ ವೇಷ ಹಾಕಿಕೊಂಡು ಸಂಭ್ರಮ ಪಡುತ್ತಾರೆ. ಅಲ್ಲದೆ ಯೇಸುವಿನ ಜನನದ ದೃಶ್ಯಾವಳಿಯ ಗೋದಲಿ, ಮಾತೆ ಮೇರಿ, ಕುರಿ, ಗ್ರಾಮ ಪರಿಸರವನ್ನು ಗೊಂಬೆಗಳ ಮೂಲಕ ಅಲಂಕರಿಸಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.

ಚರ್ಚ್‌ಗಳು: ನಗರದಲ್ಲಿರುವ ಕುಷ್ಟಗಿ ರಸ್ತೆಯ ಕ್ಯಾಥೋಲಿಕ್ ಸೇಂಟ್ ಫ್ರಾನ್ಸಿಸ್ ಡೀಸೆಲ್ಸ್ ಚರ್ಚ್ (ಎಸ್‌ಎಫ್ಎಸ್‌), ಗಣೇಶ ನಗರದ ಪುಲ್ ಗಾಸ್ಪೇಲ್ ಚರ್ಚ್ ಆಫ್ ಕ್ರೈಸ್ಟ್, ಹಳೆಯ ಆಸ್ಪತ್ರೆ ಬಳಿ ಇರುವ ಇವ್ಯಾಂಜಿಕಲ್ ಚರ್ಚ್ ಆಫ್ ಇಂಡಿಯಾ,  ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಲ್ವಾರಿ ಚಾಪೆಲ್ ಚರ್ಚ್‌ಗಳು ಪ್ರಮುಖವು.

'ಜಗತ್ತಿನ ಧರ್ಮಗಳ ಇತಿಹಾಸದಲ್ಲಿ ತನ್ನ ಸರಳ ಆಚರಣೆಯಿಂದ ಕ್ರೈಸ್ತ ಧರ್ಮ ಪ್ರಸಿದ್ಧಿಗೊಂಡಿದೆ. ಮೂಢನಂಬಿಕೆ, ಕಂದಾಚಾರವನ್ನು ಖಂಡಿಸುವ ಈ ಧರ್ಮದಲ್ಲಿ ಆಚರಣೆಗಿಂತ ಜೀವನ ಧರ್ಮಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾ ಬಂದಿರುವುದರಿಂದ ಶ್ರಮಿಕ ವರ್ಗದವರಿಗೂ ಪ್ರಿಯವಾದ ಧರ್ಮವೆನಿಸಿದೆ' ಎಂದು ಕ್ಯಾಥೋಲಿಕ್‌ ಚರ್ಚಿನ ಫಾದರ್ ಸೆಬಾಸ್ಟಿಯನ್ ಅಭಿಪ್ರಾಯಪಡುತ್ತಾರೆ.

'ಪ್ರೀತಿ, ಕರುಣೆ, ದಯೆ ಶಾಂತಿಯನ್ನು ಮನುಕುಲಕ್ಕೆ ಬೋಧಿಸಿದ ಮಹಾನ್ ಸಂತ ಯೇಸುಕ್ರಿಸ್ತ. ಪಾಪಕ್ಕೆ ಪ್ರಾಯಶ್ಚಿತ್ತ, ದುಡಿದು ದಣಿದವರಿಗೆ ಆಶ್ರಯ, ಬಡವರ ಮೇಲಿನ ಪ್ರೀತಿಯನ್ನು ಬೈಬಲ್ ಮೂಲಕ ಸಾರಿದ ಯೇಸುವಿನ ಈ ಧರ್ಮದಲ್ಲಿ ಪಾಪಿಗಳಿಗೂ ಸ್ಥಾನ ಕಲ್ಪಿಸಿರುವುದು ಈ ಧರ್ಮದ ಹೆಗ್ಗಳಿಕೆಯಾಗಿದೆ' ಎಂದು ಗಾಸ್ಫೆಲ್ ಚರ್ಚಿನ ಫಾಸ್ಟರ್ ಜೇಮ್ಸ್ ಹೇಳುತ್ತಾರೆ.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಜನರು ಕಡಿಮೆ. ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ, ಮುನಿರಾಬಾದ್ ನಗರಗಳಲ್ಲಿ ಚರ್ಚ್‌ಗಳು, ಮತಾವಲಂಬಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !