ಶನಿವಾರ, ಅಕ್ಟೋಬರ್ 16, 2021
23 °C
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪ

ಚೆಕ್‌ಡ್ಯಾಂ ಕಾಮಗಾರಿ ಹಣ ದುರ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ‘ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡಿರುವ ಸರಣಿ ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಬೋಗಸ್‌ ಬಿಲ್‌ ಮಾಡಿ ಅನುದಾನ ದುರ್ಬಳಕೆ ಮಾಡಲಾಗಿದೆ. ಈ ಕುರಿತು ಶಾಸಕ ಅಮರೇಗೌಡ ಬಯ್ಯಾಪುರ ಅವರು ಹಗರಣದ ಕುರಿತು ತನಿಖೆ ನಡೆಸುವಂತೆ ಪತ್ರ ಬರೆಯಲಿ‘ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ‘₹ 42 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚೆಕ್‌ಡ್ಯಾಂ ಕಾಮಗಾರಿಯನ್ನು ತಮ್ಮ ಸಂಬಂಧಿಗೆ ವಹಿಸಿಕೊಡುವಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಮುತುವರ್ಜಿ ವಹಿಸಿದ್ದಾರೆ. ಕಾಮಗಾರಿ ಗಳು ಕಳಪೆಯಾಗಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಈ ಕುರಿತು ಶಾಸಕರು ಸ್ವಯಂಪ್ರೇರಣೆಯಿಂದ ತನಿಖೆಗೆ ಆದೇಶಿಸಲು ಒತ್ತಾಯಿಸಬೇಕು’ ಎಂದು ಆಗ್ರಹಿಸಿದರು.

‘ಬಯ್ಯಾಪುರ ಅವರಿಂದ ತಾಲ್ಲೂಕಿಗೆ ಯಾವುದೇ ಹೊಸ ಯೋಜನೆಗಳು ಬಂದಿಲ್ಲ. ಕೆರೆ ತುಂಬಿಸುವ ಯೋಜನೆಯೂ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಮಂಜೂರಾಗಿತ್ತು. ಪಟ್ಟಣದ ಅಭಿವೃದ್ಧಿಗೆ ಬಂದ ₹2 ಕೋಟಿ ಅನುದಾನದ ಹಂಚಿಕೆಯಲ್ಲೂ ತಾರತಮ್ಯ ನೀತಿ ಅನುಸರಿಸಿದ್ದು ತಮ್ಮ ಪಕ್ಷದ ಸದಸ್ಯರು ಇರುವಲ್ಲಿ, ಅವರೇ ಹೇಳಿದಂತೆ ಕೆಲಸ ನೀಡುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ’ ಎಂದು ಆರೋಪಿಸಿದರು.

ಮಾಜಿ ಶಾಸಕ ಕೆ.ಶರಣಪ್ಪ ಮಾತನಾಡಿ, ‘ದ್ವೇಷವೊ ಅಥವಾ ಈ ತಾಲ್ಲೂಕಿನ ಬಗ್ಗೆ ಅವರಿಗಿರುವ ಉದಾಸೀನವೊ ಗೊತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಚಾಲನೆ ನೀಡಲಾದ ಯೋಜನೆ ಎಂಬ ಕಾರಣಕ್ಕೆ ಶಾಸಕ ಬಯ್ಯಾಪುರ ಅವರು ಕೊಪ್ಪಳ ಏತ ನೀರಾವರಿ ಯೋಜನೆ ಬಗ್ಗೆ ಎಳ್ಳಷ್ಟೂ ಆಸಕ್ತಿ ವಹಿಸುತ್ತಿಲ್ಲ. ಈ ಯೋಜನೆ ತಾಲ್ಲೂಕಿಗೆ ಬಂದಿದ್ದೇ ಒಂದು ಭಾಗ್ಯ. ಈ ಬಗ್ಗೆ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ ಮಾತನಾಡಿ, ‘ಪಟ್ಟಣದ ವಿದ್ಯುತ್‌ ವ್ಯವಸ್ಥೆ ಸುಧಾರಣೆಗೆ ಐಪಿಡಿಎಸ್‌ ಯೋಜನೆ ಅಸಮರ್ಪಕವಾಗಿದೆ. ಹಳೆ ಊರಲ್ಲಿ ನಡೆಯುವ ಕೆಲಸ ಹೊಸ ಬಡಾವಣೆ, ಕಾಂಗ್ರೆಸ್‌ ಸದಸ್ಯರು ಇರುವಲ್ಲಿ ನಡೆದಿದೆ. ಕೆಲಸವೂ ಅಪೂರ್ಣವಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಶಾಸಕರು ನಿರ್ಲಕ್ಷಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಮರೇಗೌಡ ಜಾಲಿಹಾಳ, ಕೆ.ಮಹೇಶ್‌, ಅಮೀನುದ್ದೀನ್ ಮುಲ್ಲಾ, ಬಾಲಪ್ಪ ಚಾಕ್ರಿ, ವಿಜಯಕುಮಾರ ಹಿರೇ ಮಠ, ಉಮೇಶ, ಶರಣಪ್ಪ ಇದ್ದರು.

‘ಅವರದ್ದೇ ಸರ್ಕಾರವಿದೆ, ಪತ್ರ ಬರೆಯಲಿ’

ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಮರೇಗೌಡ ಬಯ್ಯಾಪುರ, ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು ತನಿಖೆಗೆ ಒತ್ತಾಯಿಸಿ ಪತ್ರ ಬರೆಯಲಿ. ಅಧಿಕಾರಿಗಳ ಮೇಲೆ ವಿಶ್ವಾಸವಿದೆ, ಕೆಲಸವೂ ಉತ್ತಮ ವಾಗಿದ್ದು ತೃಪ್ತಿ ತಂದಿದೆ. ತನಿಖೆ ಅಗತ್ಯ ಎನಿಸಿದರೆ ಎಸಿಬಿ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸುವುದಕ್ಕೆ ಅವಕಾಶವಿದ್ದು ದೊಡ್ಡನಗೌಡರು ಶೀಘ್ರ ಈ ಕೆಲಸಕ್ಕೆ ಮುಂದಾಗಲಿ ಎಂದು ತಿಳಿಸಿದರು.

ಕೊಪ್ಪಳ ಏತ ನೀರಾವರಿಗೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ.ಶರಣಪ್ಪ ಅವರ ಆರೋಪಕ್ಕೆ ಉತ್ತರಿಸಿದ ಅವರು, ಎಷ್ಟು ಬಾರಿ ಸರ್ಕಾರಕ್ಕೆ ಪತ್ರವ್ಯವಹಾರ ನಡೆಸಿದ್ದೇವೆ, ಎಷ್ಟು ಸಲ ಸಭೆ ನಡೆಸಿದ್ದೇವೆ ಮತ್ತು ಸಚಿವರನ್ನು ಭೇಟಿಯಾಗಿ ಚರ್ಚಿಸಿದ್ದೇವೆ ಎಂಬುದಕ್ಕೆ ಅವರದೇ ಪಕ್ಷದ ಸಚಿವ ಹಾಲಪ್ಪ ಆಚಾರ ಅವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಸುದೀರ್ಘ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೂ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ನಾನು ಏನು ಮಾಡಬೇಕೊ ಅದನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಜನರಿಗೆ ಗೊತ್ತಿದೆ. ರಸ್ತೆ, ಕಟ್ಟಡ ಕಟ್ಟುವುದಷ್ಟೇ ಶಾಸಕರ ಕೆಲಸವಲ್ಲ. ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡುತ್ತಿದ್ದೇನೆ. ಅವರು (ಬಿಜೆಪಿ) ಹೇಳಿಕೊಳ್ಳುವಂತೆ ಯಾವುದೋ ಒಂದು ಬಿಲ್ಡಿಂಗ್‌ ಕಟ್ಟಿದ್ದೇನೆ ಎಂದು ಹೇಳಲು ಬಯಸುವುದಿಲ್ಲ. ಕುಣಿಯಲು ಬಾರದವರು ನೆಲ ಡೊಂಕು ಎಂದರಂತೆ ಎಂಬಂತಿದೆ ಇವರ ವರ್ತನೆ’ ಎಂದು ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ ಅವರಿಗೆ ತಿರುಗೇಟು ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.