ಕಡೇಬಾಗಿಲು ಸೇತುವೆಯಲ್ಲಿ ಬಿರುಕು; ಪರಿಶೀಲನೆ

7

ಕಡೇಬಾಗಿಲು ಸೇತುವೆಯಲ್ಲಿ ಬಿರುಕು; ಪರಿಶೀಲನೆ

Published:
Updated:
Deccan Herald

ಗಂಗಾವತಿ: ಕಡೇಬಾಗಿಲು ಬಳಿ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆಯಲ್ಲಿ ಶುಕ್ರವಾರ ಸಂಜೆ ಬಿರುಕು ಕಾಣಿಸಿಕೊಂಡಿದೆ. ಕಳೆದ ವರ್ಷವಷ್ಟೆ ಉದ್ಘಾಟನೆಯಾಗಿತ್ತು.

ಸೇತುವೆಯ ಮಧ್ಯ ಭಾಗದಲ್ಲಿ ರಕ್ಷಣಾ ಗೋಡೆಯಿಂದ ಹಿಡಿದು ಸುಮಾರು 2 ಮೀಟರ್‌ವರೆಗಿನ ಸೇತುವೆ ಮೇಲ್ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆಯ ಒಂದು ಭಾಗದಿಂದ ಮತ್ತೊಂದು ಭಾಗವನ್ನು ಸಂಪರ್ಕಿಸುವ (ಜಯಿಂಟ್ ವಾಲ್) ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿದೆ.

ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸುತ್ತಿರುವ ಕಾರಣ ಗಂಗಾವತಿ–ಬಳ್ಳಾರಿ ಮಾರ್ಗದ ಸಂಚಾರಕ್ಕೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದರಿಂದ ಜನ, ಈ ಸೇತುವೆಯನ್ನು ಪರ್ಯಾಯವಾಗಿ ಬಳಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿರುಮಲರಾವ್ ಕುಲಕರ್ಣಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ’ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಂಪರ್ಕಿಸುವ ಸ್ಥಳದಲ್ಲಿ ಸಣ್ಣ ಬಿರುಕು ಮೂಡಿದೆ. ಇದರಿಂದ ಸಂಚಾರಕ್ಕೆ ಅಥವಾ ಸೇತುವೆ ಗುಣಮಟ್ಟಕ್ಕೆ ತೊಂದರೆಯಿಲ್ಲ. ಜನ ಆತಂಕಪಡಬೇಕಿಲ್ಲ’ ಎಂದರು.

‘ಕಾಮಗಾರಿ ವೇಳೆ ಮೊರಮು ಅಥವಾ ಮಣ್ಣಿನಿಂದ ಪ್ಯಾಕ್ ಮಾಡಲಾಗಿರುತ್ತದೆ. ನೀರಿನ ರಭಸಕ್ಕೆ ಅದು ಕೊಚ್ಚಿ ಹೋಗಿರುವ ಸಾಧ್ಯತೆಯಿದೆ. ಇದರಿಂದ ಯಾವುದೇ ಹಾನಿಯಿಲ್ಲ. ಗುತ್ತಿಗೆ ಪಡೆದ ಸಂಸ್ಥೆಯ ನಿರ್ವಹಣೆ ಅವಧಿ ಇನ್ನೂ ಡಿಸಂಬರ್‌ವರೆಗೂ ಇದೆ. ಕೆಲಸ ಮಾಡಿಸಲಾಗುವುದು’ ಎಂದು ತಿಳಿಸಿದರು.

₹ 32 ಕೋಟಿ ವೆಚ್ಚದಲ್ಲಿ ಕಳೆದ ವರ್ಷ ಸೆ.22ರಂದು ಈ ಸೇತುವೆ ಉದ್ಘಾಟಿಸಲಾಗಿತ್ತು. ಆಂಧ್ರ ಮೂಲದ ಕೆಎನ್ಆರ್ ಎಂಬ ಸಂಸ್ಥೆ ಸೇತುವೆ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತ್ತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !