ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡ ಕಡಿಮೆ ಮಾಡಿದರೆ ಸೃಜನಶೀಲತೆ: ನಟ ರಮೇಶ ಅರವಿಂದ್‌

ಶಾರದಾ ಪರ್ವದಲ್ಲಿ ಮಕ್ಕಳಿಗೆ ಸ್ಫೂರ್ತಿ ತುಂಬಿದ ನಟ ರಮೇಶ ಅರವಿಂದ್‌
Last Updated 26 ಡಿಸೆಂಬರ್ 2022, 3:49 IST
ಅಕ್ಷರ ಗಾತ್ರ

ಕೊಪ್ಪಳ: ‘ಇದು ನನ್ನಿಂದ ಆಗುವುದಿಲ್ಲ ಎನ್ನುವ ನಿರಾಸೆ ಬಿಟ್ಟು ಎಲ್ಲವೂ ನನ್ನಿಂದ ಸಾಧ್ಯವೆನ್ನುವ ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡರೆ ಬದುಕು ಸುಂದರವಾಗುತ್ತದೆ. ಮಕ್ಕಳ ಪ್ರಯತ್ನಕ್ಕೆ ಪೋಷಕರೂ ಹೆಗಲಾಗಬೇಕು’ ಎಂದು ನಟ ಹಾಗೂ ನಿರ್ದೇಶಕ ರಮೇಶ ಅರವಿಂದ್‌ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಇಲ್ಲಿಗೆ ಸಮೀಪದ ಕಿಡದಾಳದಲ್ಲಿ ಶನಿವಾರ ರಾತ್ರಿ ನಡೆದ ಶಾರದಾ ಇಂಟರ್‌ನ್ಯಾಷನಲ್‌ ಸ್ಕೂಲ್‌ ಮತ್ತು ಪಿಯು ಕಾಲೇಜಿನ ವಾರ್ಷಿಕೋತ್ಸವದ ‘ಶಾರದಾ ಪರ್ವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಶಾರದಾ ಶಾಲೆ ಉತ್ತರ ಕರ್ನಾಟಕದಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಇಂಥ ವಾತಾವರಣದಲ್ಲಿ ಮಕ್ಕಳು ಎತ್ತರದ ಸಾಧನೆ ಮಾಡಲು ಪೋಷಕರು ಮಕ್ಕಳ ಜೊತೆಗಿರಬೇಕು. ನೀವು ಮಾಡುವ ಪ್ರಯತ್ನ ಮನಸಾಕ್ಷಿಗೆ ಒಪ್ಪುವಂತಿರಲಿ’ ಎಂದು ಕಿವಿಮಾತು ಹೇಳಿದರು.

‘ನಿಮ್ಮ ಮಕ್ಕಳು ಆಸಕ್ತಿ ವಹಿಸುವ ಕ್ಷೇತ್ರದತ್ತ ನೀವು ಅವರಿಗೆ ಪ್ರೋತ್ಸಾಹ ನೀಡಿ. ಮಕ್ಕಳಿಗೆ ಸಾಧನೆಯ ತುಡಿತ ಒಳಗಿನಿಂದ ಬರಬೇಕು, ಮಕ್ಕಳ ಮೇಲೆ ಒತ್ತಡ ಕಡಿಮೆ ಮಾಡಿದರೆ ಅವರಲ್ಲಿ ಸೃಜನಶೀಲತೆ ಹೆಚ್ಚಾಗುತ್ತದೆ. ಒಬ್ಬ ವಿದ್ಯಾರ್ಥಿ ಇನ್ನೊಬ್ಬನ ಹಾಗೆ ಇರಲು ಸಾಧ್ಯವೇ ಇಲ್ಲ. ಆದ್ದರಿಂದ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಪಠ್ಯ ಶಿಕ್ಷಣದ ಜೊತೆಗೆ ಶಿಸ್ತು, ಅನುಕಂಪ ಪ್ರೀತಿಯನ್ನು ಮಕ್ಕಳಿಗೆ ಪೋಷಕರು ಹಾಗೂ ಶಿಕ್ಷಕರು ಹೇಳಿಕೊಡಬೇಕು’ ಎಂದರು.

‘ಪೋಷಕರು ಮಕ್ಕಳಲ್ಲಿ ಧರ್ಮ, ಜಾತಿ, ಬಡವ ಹಾಗೂ ಶ್ರೀಮಂತ ಎನ್ನುವ ಗೋಡೆ ಕಟ್ಟಬಾರದು. ಹೊಂದಾಣಿಕೆ, ಸಾಮರಸ್ಯ ಭಾವನೆ ಬಿತ್ತಬೇಕು. ಮಕ್ಕಳಿಗೆ ಶಿಕ್ಷೆ ನೀಡುವ ಬದಲು ಪ್ರೀತಿಯಿಂದ ಕಲಿಸಿದರೆ ಬೇಗನೆ ಮನಸ್ಸಿಗೆ ನಾಟುತ್ತದೆ’ ಎಂದು ಪೋಷಕರಿಗೆ ಸಲಹೆ ನೀಡಿದರು.

ಇದಕ್ಕೂ ಮೊದಲು ಶಾಲೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಗೆದ್ದವು.

ಗೌರಿಗದ್ದೆಯ ಸ್ವರ್ಣ ಪೀಠಿಕಾಪುರದ ಅವಧೂತ ವಿನಯ್‌ ಗುರೂಜಿ, ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರುನ್ನಮ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ., ಡಿಡಿಪಿಯು ಮೃಣಾಲ್‌ ಸಾಹುಕಾರ, ಶಾರದಾ ಫೌಂಡೇಷನ್‌ ಟ್ರಸ್ಟಿ ಎಸ್‌.ಆರ್‌. ಪಾಟೀಲ, ಅಧ್ಯಕ್ಷ ವಿ.ಆರ್‌. ಪಾಟೀಲ, ಆಡಳಿತಾಧಿಕಾರಿ ರೇಚಲ್‌ ಸುಗಂದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT